ಚಲುವಾಂಬ ಆಸ್ಪತ್ರೆಯ ಬಾಣಂತಿಯರಿಗಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಸಿ ನೀರಿಗಾಗಿ ಡಿಸ್ಪೆನ್ಸರ್ ಅನ್ನು ವೈಯಕ್ತಿಕವಾಗಿ ನೀಡಿದರು. ಎಲ್.ನಾಗೇಂದ್ರ, ಡಾ.ಕೆ.ಆರ್.ದಾಕ್ಷಾಯಿಣಿ, ಭಾನು ಮೋಹನ್ ಇತರರು ಇದ್ದರು. 
ಮೈಸೂರು

ಜನರ ಆರೋಗ್ಯದ ಬಗ್ಗೆ ನಿರ್ಲಕ್ಷೃ ಸಲ್ಲದು: ಸಂಸದ ಯದುವೀರ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ತಾಯಿ, ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು
  • ಜನರ ಆರೋಗ್ಯದ ಕುರಿತು ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು
ಮೈಸೂರು: ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರಲ್ಲದೇ, ಅವ್ಯವಸ್ಥೆ ಸರಿಪಡಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿ, ಬಾಣಂತಿಯರಿಗೆ ಬಿಸಿನೀರು ನೀಡಲು ಸೂಚಿಸಿದರು.
ಒಂದು ತಿಂಗಳ ಅವಧಿಯಲ್ಲಿ ಅತಿಹೆಚ್ಚು ಮಕ್ಕಳು ಸಾವನ್ನಪ್ಪಿರುವ ಪ್ರಕರಣ ಹಾಗೂ ಮಗುವೊಂದಕ್ಕೆ ಇರುವೆ ಕಚ್ಚಿ ಸಾವನ್ನಪ್ಪಿರುವ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮಹಿಳೆಯರಿಂದ ವಸ್ತು ಸ್ಥಿತಿ ಅರಿಯುವ ಪ್ರಯತ್ನ ನಡೆಸಿದರು.
ಈ ವೇಳೆ ನರ್ಸ್ ಹಾಗೂ ಡಿ ಗ್ರೂಪ್ ಸಿಬ್ಬಂದಿ ರೋಗಿಗಳ ಸಂಬಂಧಿಗಳಿಂದ ವಿನಾಕಾರಣ ಹಣ ವಸೂಲಿ, ಬಾಣಂತಿಯರ ವಾರ್ಡಿನಲ್ಲಿ ಸ್ವಚ್ಛತೆ, ಸೂಕ್ತ ಸೌಲಭ್ಯ ಇಲ್ಲದಿರುವುದು ಹಾಗೂ ಮಕ್ಕಳಿಗೆ ಹಾಸಿಗೆ ಕೊರತೆ ಇರುವ ಬಗ್ಗೆ ದೂರು ನೀಡಿದರು.
ಯದುವೀರ್ ಅವರು ಮಾತನಾಡಿ, ತಾಯಿ, ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು. ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು, ಹೆಚ್ಚುತ್ತಿರುವ ಮರಣ ಪ್ರಮಾಣ ಕುರಿತು ವರದಿಯಾಗಿರುವುದು ವಿಷಾದನೀಯ. ಜನರ ಆರೋಗ್ಯದ ಕುರಿತು ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಇದೇ ರೀತಿಯ ಧೋರಣೆ ಮುಂದುವರಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಲಾಯಿತು. ಐಸಿಯು ಘಟಕ, ವಿಭಾಗದಲ್ಲೂ ಎಲ್ಲ ವೈದ್ಯಕೀಯ ಸಾಧನಗಳನ್ನು ಸೂಕ್ತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಿರ್ವಹಣೆಗಾಗಿ ಮೀಸಲಿರುವ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ಸ್ಥಳದಲ್ಲೇ ಪರಿಹಾರ:
ಸಮಾಲೋಚನೆ ಸಮಯದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ರೋಗಿಗಳು ಅಹವಾಲು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಂಸದರು, ಕೂಡಲ್ ಬಿಸಿ ನೀರಿನ ಡಿಸ್ಪೆನ್ಸರ್ ಅನ್ನು ತಮ್ಮ ವೈಯಕ್ತಿಕ ಹಣದಿಂದ ತರಿಸಿ ರೋಗಿಗಳಿಗೆ ನೀಡಿದರು. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದರು.
ಮಾಜಿ ಶಾಸಕ ಎಲ್.ನಾಗೇಂದ್ರ, ಕೆ.ಆರ್.ಆಸ್ಪತ್ರೆ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಭಾನು ಮೋಹನ್ ಇತರರು ಇದ್ದರು.