ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ನಿರ್ದೇಶಕರಿಗೆ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ಅಭಿನಂದನೆ ಸಲ್ಲಿಸಿದರು. ಸಿ.ಎಸ್.ಕುಶಾಲ, ಸುರೇಶ್, ಸಂಗೀತಾ ವೆಂಕಟೇಶ್, ಮಂಜೇಗೌಡ ಇತರರು ಇದ್ದರು. 
ಮೈಸೂರು

ಜನತೆ ಕುಮಾರಸ್ವಾಮಿ ಸರ್ಕಾರ ಬಯಸುತ್ತಿದ್ದಾರೆ

ಪ್ರಮುಖ ಮುಖ್ಯಾಂಶಗಳು

  • People want Kumaraswamy
ಬೆಟ್ಟದಪುರ: ಇಂದಿನ ಸರ್ಕಾರದ ಆಡಳಿತದಿಂದ ಬೇಸತ್ತಿರುವ ಜನರು ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಅಧಿಕಾರ ಬಯಸುತ್ತಿದ್ದಾರೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಎಂಟು ನಿರ್ದೇಶಕರನ್ನು ಶುಕ್ರವಾರ ಅಭಿನಂದಿಸಿ ಅವರು ಮಾತನಾಡಿದರು.
ನಮ್ಮ ತಾಲೂಕಿನಲ್ಲಿಯೂ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಜನರ ಸೇವೆಗೆ ಮುಂದಾಗಿದೆ. ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಮುನಿಸು ಬಿಟ್ಟು ಒಗ್ಗಟ್ಟಾಗಿ ದುಡಿಯುವ ಮೂಲಕ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದು ತಿಳಿಸಿದರು.
ಚಪ್ಪರದಹಳ್ಳಿ ಗ್ರಾಮದ ಸೊಸೈಟಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಸಹಕಾರ ಕ್ಷೇತ್ರವು ಸಂಜೀವಿನಿ ಇದ್ದಂತೆ, ಪ್ರತಿಯೊಬ್ಬರೂ ಈ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು.
ಇಳಿವಯಸ್ಸಿನಲ್ಲಿಯೂ ಎಚ್.ಡಿ. ದೇವೇಗೌಡರು ಪ್ರತಿಕ್ಷಣ ರಾಜ್ಯದ ಜನರು, ರೈತರ ಬಗ್ಗೆ ಚಿಂತಿಸುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಯನ್ನು ಪಡೆದ ನಾವುಗಳೇ ಪುಣ್ಯವಂತರು. ಅವರ ಮಾರ್ಗದರ್ಶನದಂತೆ ನಾವು ಸಾಗೋಣ. ಅವರಿಗೆ ದೇವರು ಇನ್ನಷ್ಟು ಆರೋಗ್ಯ ಆಯಸ್ಸು ನೀಡಲಿ ಎಂದು ತಾಲೂಕಿನ ಜನತೆಯ ಪರವಾಗಿ ಬೇಡಿಕೊಳ್ಳುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು. ಗ್ರಾಮದ ಮಂಜೇಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡರು. ಸೊಸೈಟಿ ನಿರ್ದೇಶಕರಾದ ಸಿ.ಎಸ್ ಕುಶಾಲ, ಸಿ.ಪಿ. ರವಿ ಸಿ.ಪಿ. ಸುರೇಶ, ಸಂಗೀತಾ ವೆಂಕಟೇಶ್, ಮುಕುಂದಚಾರಿ, ಪುಟ್ಟಮ್ಮ, ಸಿ. ಅಶ್ವಥ್‌ಕುಮಾರ್, ಶೀಲಾ ನಾಗೇಂದ್ರ, ಮುಖಂಡರಾದ ವಿದ್ಯಾಶಂಕರ್, ಐಲಾಪುರ ರಾಮು, ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.