ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶನಿವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಂಭ್ರಮಿಸಿದರು. 
ಮೈಸೂರು

ಆಟೋಟಗಳಲ್ಲಿ ಸಂಭ್ರಮಿಸಿದ ಜನ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ತ ಆಯೋಜನೆ
  • ಪುರುಷ, ಮಹಿಳೆಯರಿಗೆ ವಿವಿಧ ಸ್ಪರ್ಧೆ

ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶನಿವಾರ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.

ಕ್ರೀಡಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತಗೊಳಿಸದೆ ಸಾರ್ವಜನಿಕರನ್ನೂ ಕ್ರೀಡಾ ಚಟುವಟಿಕೆಗಳತ್ತ ಸೆಳೆಯುವ ಉದ್ದೇಶದಿಂದ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬೆಳಗ್ಗೆಯಿಂದಲೇ ಕ್ರೀಡಾಂಗಣದಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿದ್ದು, ವಾಯು ವಿಹಾರಕ್ಕೆ ಆಗಮಿಸಿದ್ದ ಸಾರ್ವಜನಿಕರು ಸೇರಿದಂತೆ ಹಲವರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಸುಮಾರು ಒಂದು ಗಂಟೆ ಕಾಲ ನಡೆದ ಕಾರ್ಯಕ್ರಮದಲ್ಲಿ ಜುಂಬಾ, ಪಾಸ್ ದಿ ಬಾಲ್, ಬಾಲ್ ಇನ್ ದಿ ಬಾಸ್ಕೆಟ್ ಸೇರಿದಂತೆ ವಿವಿಧ ರಿಕ್ರಿಯೇಷನ್ ಗೇಮ್ಸ್ ಆಯೋಜಿಸಲಾಗಿತ್ತು. ಮಹಿಳೆಯರು, ಪುರುಷರು ಹಾಗೂ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಯಿತು.

ಬಹುಮಾನ ವಿತರಣೆ:

ಪಾಸ್ ದಿ ಬಾಲ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವಿವೇಕ್ ಪ್ರಥಮ, ಚರಿತ್ ದ್ವಿತೀಯ ಹಾಗೂ ನಿಹಾಲ್ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಸುಶ್ಮಿತಾ ಪ್ರಥಮ, ಮೇಘನಾ ದ್ವಿತೀಯ ಹಾಗೂ ವಿದ್ಯಾ ತೃತೀಯ ಸ್ಥಾನ ಗಳಿಸಿದರು.
ಬಾಲ್ ಇನ್ ದಿ ಬಾಸ್ಕೆಟ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ರಾಕೇಶ್ ಪ್ರಥಮ, ಮೋಹಿತ್ ದ್ವಿತೀಯ ಹಾಗೂ ಜೀವನ ದರ್ಶನ್ ತೃತೀಯ ಸ್ಥಾನ ಪಡೆದರು. 14 ವರ್ಷ ಮೇಲ್ಪಟ್ಟ ಯುವತಿಯರ ವಿಭಾಗದಲ್ಲಿ ನಿಖಿತಾ ಪ್ರಥಮ, ಜೀವಿತಾ ದ್ವಿತೀಯ ಹಾಗೂ ಚತುರ್ಥಿ ತೃತೀಯ ಸ್ಥಾನ ಗಳಿಸಿದರು. 14 ವರ್ಷ ಒಳಗಿನವರ ವಿಭಾಗದಲ್ಲಿ ಮಾನ್ಯಾ ಪ್ರಥಮ, ಹೇಮಾ ದ್ವಿತೀಯ ಹಾಗೂ ಅನನ್ಯಾ ತೃತೀಯ ಸ್ಥಾನ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.
ಕ್ರೀಡೆ ವಿದ್ಯಾರ್ಥಿಗಳಿಗಷ್ಟೇ ಸೀಮಿತವಲ್ಲ. ಎಲ್ಲ ವಯೋಮಾನದವರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸಂದೇಶ ಸಾರುವ ಉದ್ದೇಶದಿಂದ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಕ್ರೀಡಾಂಗಣಕ್ಕೆ ಆಗಮಿಸಿದ್ದ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಆಟೋಟಗಳಲ್ಲಿ ಸಂಭ್ರಮಿಸಿದರು.