ಫುಟ್‌ಪಾತ್ ಒತ್ತುವರಿ ತೆರವು ನಂತರ ನಗರದ ಸಯ್ಯಜಿರಾವ್ ರಸ್ತೆಯ ಫುಟ್‌ಪಾತ್‌ನಲ್ಲಿ ಪಾದಚಾರಿಗಳು ನಿರಾತಂಕವಾಗಿ ಸಂಚರಿಸುತ್ತಿದ್ದಾರೆ 
ಮೈಸೂರು

ಫುಟ್‌ಪಾತ್‌ಗೆ ಮರಳಿದ ಪಾದಚಾರಿಗಳು

ಸದೇಶ್ ಕಾರ್ಮಾಡ್

ಪ್ರಮುಖ ಮುಖ್ಯಾಂಶಗಳು

  • ನಿರಾತಂಕವಾಗಿ ಸಂಚರಿಸುತ್ತಿರುವ ಜನರು
  • ನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ

ಸದೇಶ್ ಕಾರ್ಮಾಡ್ ಮೈಸೂರು

ಫುಟ್‌ಪಾತ್ ವ್ಯಾಪಾರದಿಂದ ಬೀದಿಪಾಲಾಗಿದ್ದ ಪಾದಚಾರಿಗಳು ಇದೀಗ ನಗರ ಪಾಲಿಕೆ ನಡೆಸಿದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚಾರಣೆ ಬಳಿಕ ಫುಟ್‌ಪಾತ್‌ಗೆ ಮರಳಿದ್ದು, ನಗರದಲ್ಲಿ ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಪಾದಚಾರಿಗಳು ನಿರಾತಂಕವಾಗಿ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.
ನಗರದ ಹೃದಯ ಭಾಗದಲ್ಲಿರುವ ಸಯ್ಯಜಿರಾವ್ ರಸ್ತೆ, ಮಕ್ಕಾಜಿ ಚೌಕ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನಗರ ಪಾಲಿಕೆ ನಡೆಸಿದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ವರ್ಷಗಳಿಂದ ಅಂಗಡಿಗಳು, ತಳ್ಳುಗಾಡಿಗಳು ಹಾಗೂ ಇತರೆ ವ್ಯಾಪಾರ ಚಟುವಟಿಕೆಗಳಿಂದ ಸಂಪೂರ್ಣವಾಗಿ ಒತ್ತುವರಿಯಾಗಿದ್ದ ಫುಟ್‌ಪಾತ್‌ಗಳು ಈಗ ಮತ್ತೆ ಪಾದಚಾರಿಗಳ ಬಳಕೆಗೆ ಮುಕ್ತವಾಗಿದ್ದು, ಜನರು ನಿರಾತಂಕವಾಗಿ ಸಂಚರಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.
ವಿಶೇಷವಾಗಿ ಸಯ್ಯಜಿರಾವ್ ರಸ್ತೆ, ಮಕ್ಕಾಜಿ ಚೌಕ ಸುತ್ತಮುತ್ತ ಫುಟ್‌ಪಾತ್ ವ್ಯಾಪಾರಿಗಳು ಫುಟ್‌ಪಾತ್‌ನಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಶೇ.70 ರಷ್ಟು ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿದ್ದರು. ಇದೀಗ ಈ ರೀತಿಯ ಪೆಟ್ಟಿಗೆ ಅಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಿ ಫುಟ್‌ಪಾತ್ ವ್ಯಾಪಾರಿಗಳಿಗೆ ಶೇ.30 ರಷ್ಟು ಜಾಗ ನೀಡಿ ಉಳಿದ ಶೇ.70 ರಷ್ಟು ಜಾಗ ಜನರಿಗೆ ನಡೆದಾಡಲು ಅವಕಾಶ ಮಾಡಿಕೊಡಲಾಗಿದೆ.
ಈ ಹಿಂದೆ ಫುಟ್‌ಪಾತ್ ಸಂಪೂರ್ಣ ವ್ಯಾಪಾರಿಗಳ ವಶದಲ್ಲಿದ್ದ ಕಾರಣ ಪಾದಚಾರಿಗಳಿಗೆ ನಡೆಯಲು ಸ್ಥಳವೇ ಇರಲಿಲ್ಲ. ಮತ್ತೊಂದೆಡೆ ರಸ್ತೆ ಬದಿಯಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ ರಸ್ತೆ ಇನ್ನಷ್ಟು ಕಿರಿದಾಗುತ್ತಿತ್ತು. ಪರಿಣಾಮವಾಗಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಅನಿವಾರ್ಯವಾಗಿ ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ಪ್ರತಿನಿತ್ಯ ಅಪಘಾತದ ಭೀತಿಯನ್ನು ಉಂಟುಮಾಡುತ್ತಿತ್ತು.
ಆದರೆ ಒತ್ತುವರಿ ತೆರವು ಕಾರ್ಯಾಚರಣೆಯ ಬಳಿಕ ಪರಿಸ್ಥಿತಿ ಗಣನೀಯವಾಗಿ ಬದಲಾಗಿದೆ. ಈಗ ಜನರು ಯಾವುದೇ ಅಡ್ಡಿಯಿಲ್ಲದೆ ಫುಟ್‌ಪಾತ್‌ನಲ್ಲಿ ಸುರಕ್ಷಿತವಾಗಿ ಸಂಚರಿಸುತ್ತಿದ್ದಾರೆ. ಪಾದಚಾರಿಗಳಿಗೆ ಮೀಸಲಾದ ಸ್ಥಳ ಮತ್ತೆ ಪಾದಚಾರಿಗಳಿಗೇ ದೊರೆತಿರುವುದು ಈ ಕಾರ್ಯಾಚರಣೆಯ ದೊಡ್ಡ ಯಶಸ್ಸಾಗಿದೆ.

ಫುಟ್‌ಪಾತ್ ಮುಖ್ಯ ಏಕೆ?

ನಾಗರಿಕರು, ಗರ್ಭಿಣಿಯರು, ದಿವ್ಯಾಂಗರು ಹಾಗೂ ಮಕ್ಕಳು ಸುರಕ್ಷಿತವಾಗಿ ಸಂಚರಿಸಲು ಫುಟ್‌ಪಾತ್ ಅತ್ಯಗತ್ಯ. ಫುಟ್‌ಪಾತ್ ಇಲ್ಲದಿದ್ದರೆ ಅಥವಾ ಒತ್ತುವರಿಯಾಗಿದ್ದರೆ ಜನರು ರಸ್ತೆಯಲ್ಲೇ ನಡೆಯಬೇಕಾಗಿ ಬಂದು ಅಪಘಾತಗಳ ಅಪಾಯ ಹೆಚ್ಚುತ್ತದೆ.

ಸುಪ್ರೀಂ ಕೋರ್ಟ್ ಏನು ಹೇಳಿದೆ?

ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಸಾರ್ವಜನಿಕ ರಸ್ತೆ ಮತ್ತು ಫುಟ್‌ಪಾತ್‌ಗಳು ಸಾರ್ವಜನಿಕರ ಬಳಕೆಗೆ ಮೀಸಲಾಗಿದ್ದು, ಅವುಗಳನ್ನು ಅಕ್ರಮವಾಗಿ ಒತ್ತುವರಿ ಮಾಡಲು ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದೆ. ಅದೇ ವೇಳೆ ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ನಡೆಸುವವರ ಹಕ್ಕನ್ನೂ ನ್ಯಾಯಾಲಯ ಗುರುತಿಸಿದೆ. ಆದ್ದರಿಂದ, ಬೀದಿ ವ್ಯಾಪಾರಿಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸುತ್ತಾ, ಪಾದಚಾರಿಗಳ ಹಕ್ಕು ಮತ್ತು ವ್ಯಾಪಾರಿಗಳ ಜೀವನೋಪಾಯದ ನಡುವೆ ಸಮತೋಲನ ಸಾಧಿಸುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಮೇಲಿದೆ.

ರಾತ್ರಿ ಮತ್ತೆ ಒತ್ತುವರಿ

ನಗರ ಪಾಲಿಕೆ ಹಗಲಿನ ವೇಳೆಯಲ್ಲಿ ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವುದು ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಏಕೆಂದರೆ ರಾತ್ರಿ ವೇಳೆ ಹಲವು ಕಡೆಗಳಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಯುತ್ತಿದ್ದು, ಪಾದಚಾರಿಗಳು ಮತ್ತೆ ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಒಮ್ಮೆ ತೆರವುಗೊಳಿಸಿ ಮತ್ತೆ ಅದೇ ಸ್ಥಿತಿ ನಿರ್ಮಾಣವಾದರೆ ಕಾರ್ಯಾಚರಣೆಯ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಜಂಟಿಯಾಗಿ ನಿರಂತರ ನಿಗಾವಹಿಸಿ, ರಾತ್ರಿ ವೇಳೆಯಲ್ಲಿಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾಗಿದೆ.
ಸಯ್ಯಜಿರಾವ್ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಹಿಂದೆ ಅನೇಕ ಬಾರಿ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿತ್ತು. ಆದರೆ ಕೆಲವು ತಿಂಗಳುಗಳ ನಂತರ ಮತ್ತೆ ಫುಟ್‌ಪಾತ್ ವ್ಯಾಪಾರ ಹಿಂದಿನಂತೆಯೇ ಆರಂಭವಾಗುತ್ತಿತ್ತು. ಈ ಚಕ್ರಕ್ಕೆ ಈ ಬಾರಿ ಅಂತ್ಯ ಹಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ನಿಯಮಿತ ಪರಿಶೀಲನೆ, ಸಿಸಿಟಿವಿ ನಿಗಾ, ದಂಡದ ಕ್ರಮ ಹಾಗೂ ಸ್ಥಳೀಯ ವ್ಯಾಪಾರಿಗಳೊಂದಿಗೆ ನಿರಂತರ ಸಂವಾದದ ಮೂಲಕವೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.

ವ್ಯಾಪಾರಿಗಳ ಬದುಕೂ ಮುಖ್ಯ

ಫುಟ್‌ಪಾತ್ ಒತ್ತುವರಿ ತೆರವು ಅಗತ್ಯ ಎಂಬಷ್ಟೇ, ಫುಟ್‌ಪಾತ್ ವ್ಯಾಪಾರಿಗಳ ಬದುಕಿನ ಪ್ರಶ್ನೆಯೂ ಅಷ್ಟೇ ಮಹತ್ವದ್ದಾಗಿದೆ. ಬೀದಿ ವ್ಯಾಪಾರವನ್ನು ನಂಬಿಕೊಂಡೇ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಜೀವನ ಸಾಗಿಸುತ್ತಿವೆ. ಹಣ್ಣು, ತರಕಾರಿ, ತಿಂಡಿ, ಹೂವು, ಆಟಿಕೆ ಸೇರಿದಂತೆ ಸಣ್ಣ ವ್ಯಾಪಾರಗಳೇ ಅನೇಕ ಕುಟುಂಬಗಳ ಆದಾಯದ ಮೂಲವಾಗಿದೆ. ಹೀಗಾಗಿ ಕೇವಲ ತೆರವು ಕಾರ್ಯಾಚರಣೆ ನಡೆಸುವುದರಿಂದ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿಯೂ ಆಡಳಿತದ ಮೇಲಿದೆ.
ನಗರದ ವಿವಿಧ ಭಾಗಗಳಲ್ಲಿ ಯೋಜಿತ ಫುಡ್‌ಜೋನ್ ಹಾಗೂ ಹಾಕರ್ಸ್ ಜೋನ್‌ಗಳನ್ನು ನಿರ್ಮಿಸುವುದು ಈಗ ಕಾಲದ ಅಗತ್ಯವಾಗಿದೆ. ಸೂಕ್ತ ಮೂಲಸೌಕರ್ಯ, ಕುಡಿಯುವ ನೀರು, ಶೌಚಗೃಹ, ತ್ಯಾಜ್ಯ ನಿರ್ವಹಣೆ, ವಾಹನ ನಿಲುಗಡೆ ಸೇರಿದಂತೆ ಅಗತ್ಯ ಸೌಲಭ್ಯಗಳಿರುವ ವ್ಯಾಪಾರ ವಲಯಗಳನ್ನು ನಿರ್ಮಿಸಿದರೆ ವ್ಯಾಪಾರಿಗಳಿಗೂ ಅನುಕೂಲ, ಸಾರ್ವಜನಿಕರಿಗೂ ಸುರಕ್ಷಿತ ಸಂಚಾರ ಸಾಧ್ಯ.