ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಿರುವ ನಗರದ ಅಶೋಕ ರಸ್ತೆ  
ಮೈಸೂರು

ಮೈಸೂರಿನ ಅಶೋಕ ರಸ್ತೆಯಲ್ಲಿ ಶೀಘ್ರದಲ್ಲೇ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿ

ಮೈಸೂರು: ನಗರದ ಅಶೋಕ ರಸ್ತೆಯ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರು ಶೀಘ್ರದಲ್ಲೇ ತಮ್ಮ ವಾಹನಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಲು ಶುಲ್ಕ ಪಾವತಿಸಬೇಕಾಗಬಹುದು. ಈ ರಸ್ತೆಯಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲು ನಗರ ಪೊಲೀಸ್ ಇಲಾಖೆ ಮುಂದಾಗಿದೆ.
ಈ ಪ್ರಸ್ತಾವನೆಯನ್ನು ಮಹಾನಗರ ಪಾಲಿಕೆಗೆ ಕಳುಹಿಸಿ ಅನುಮೋದನೆ ದೊರೆತ ನಂತರ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಸ್ತಾವಿತ ವ್ಯವಸ್ಥೆಯು ಅಶೋಕ ರಸ್ತೆಯಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಸಾರ್ವಜನಿಕರಿಗೆ ಅನ್ವಯ ಆಗುವುದಿಲ್ಲ. ವ್ಯಾಪಾರಿಗಳು ಹಾಗೂ ಅಂಗಡಿ ನೌಕರರಿಗೆ ಮಾಸಿಕ ಪಾಸ್‌ಗಳನ್ನು ನೀಡುವ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.
ದೇವರಾಜ ಸಂಚಾರ ಪೊಲೀಸ್ ಠಾಣೆಯು ಅಶೋಕ ರಸ್ತೆಯ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಮೇ 26ರಂದು ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ಕೆ.ಎಸ್. ಸುಂದರ್‌ರಾಜ್ ಹಾಗೂ ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ಎಂ. ಶಿವಶಂಕರ್ ಯೋಜನೆಯನ್ನು ವಿವರಿಸಿದ್ದು, ವರ್ತಕರಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಕಿಂಗ್ ಅವಧಿಯನ್ನು ಆಧರಿಸಿ ಶುಲ್ಕ ನಿಗದಿ ಪಡಿಸಲು ಚಿಂತನೆ ನಡೆಸಲಾಗಿದೆ.
ಕಾರಣ ಏನು?: ಅಶೋಕ ರಸ್ತೆ ಹಾಗೂ ದೇವರಾಜ ಅರಸು ರಸ್ತೆಯ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆಯಾಗುವ ವಾಹನಗಳ ಪೈಕಿ ಶೇ.60 ರಷ್ಟು ವಾಹನಗಳು ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರದ್ದಾಗಿದೆ. ಇದರಿಂದ ಗ್ರಾಹಕರು ಮತ್ತು ಸಾರ್ವಜನಿಕರಿಗೆ ಪಾರ್ಕಿಂಗ್‌ಗೆ ಸ್ಥಳ ದೊರೆಯುತ್ತಿಲ್ಲ. ರಸ್ತೆಬದಿಯ ಪಾರ್ಕಿಂಗ್ ಸ್ಥಳಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ನಿರಂತರವಾಗಿ ಬಳಸುವುದಕ್ಕೆ ಕಡಿವಾಣ ಹಾಕುವ ಸಲುವಾಗಿ ಇಂತಹ ಒಂದು ಕ್ರಮಕ್ಕೆ ಮುಂದಾಗಲಾಗಿದೆ.
ನಗರ ಪಾಲಿಕೆಯು ಈ ಹಿಂದೆ ದೇವರಾಜ ರಸ್ತೆ, ದೇವರಾಜ ಅರಸು ರಸ್ತೆ, ಹರ್ಷ ರಸ್ತೆ ಹಾಗೂ ಸಯ್ಯಜಿರಾವ್ ರಸ್ತೆಯಲ್ಲಿ ಪೇ ಆ್ಯಂಡ್ ಪಾರ್ಕ್ ಜಾರಿಗೆ ತರಲು ಉದ್ದೇಶಿಸಿತ್ತು. ಈ ರಸ್ತೆಯಲ್ಲಿ ನಿಲುಗಡೆ ಮಾಡುವ ಪ್ರತಿಯೊಂದು ವಾಹನಗಳಿಗೂ ಶುಲ್ಕ ವಿಧಿಸಲು ಪಾಲಿಕೆ ಉದ್ದೇಶಿಸಿತ್ತು. ಆದರೆ, ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಆ ಪ್ರಸ್ತಾವನೆಯನ್ನು ಕೈಬಿಟ್ಟಿತ್ತು. ಆದರೆ, ಇದೀಗ ಈ ವ್ಯವಸ್ಥೆಯು ವರ್ತಕರು ಹಾಗೂ ಅಂಗಡಿ ಮಾಲೀಕರಿಗೆ ಮಾತ್ರ ಅನ್ವಯ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಯಾವುದೇ ವಿರೋಧ ವ್ಯಕ್ತವಾಗದೆ ಪೇ ಆ್ಯಂಡ್ ಪಾರ್ಕ್ ಜಾರಿಯಾಗುವ ಸಾಧ್ಯತೆ ಇದೆ.