ಹುಣಸೂರು ನಗರದ ಶಾಸ್ತ್ರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಾಂಶುಪಾಲ ಎಂ.ಎಲ್.ರವಿಶಂಕರ್, ಎಸ್.ರಾಧಾಕೃಷ್ಣ, ಗೋಪಿ ರಂಗಸ್ವಾಮಿ, ಶ್ರೀವತ್ಸ ಇದ್ದರು. 
ಮೈಸೂರು

ವಂದೇ ಮಾತರಂ ಗೀತೆಯಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ

ಪ್ರಾಂಶುಪಾಲ ಎಂ.ಎಲ್.ರವಿಶಂಕರ್ ಅಭಿಮತ

ಹುಣಸೂರು: ಶಕ್ತಿ, ಸಮೃದ್ಧಿ ಮತ್ತು ದೈವತ್ವದ ಸಾಕಾರ ರೂಪವಾಗಿ ಮಾತೃಭೂಮಿಯನ್ನು ಪೂಜಿಸುವ ವಂದೇ ಮಾತರಂ ರಾಷ್ಟ್ರೀಯ ಗೀತೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮದ ಹೊಂಗಿರಣ ಮೂಡಿಸುತ್ತದೆ ಎಂದು ಶಾಸ್ತ್ರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಎಲ್.ರವಿಶಂಕರ್ ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಹುಣಸೂರು ಶಾಖೆ ವತಿಯಿಂದ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಂದೇ ಮಾತರಂ 150 ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1875ರ ನ.7ರಂದು ಬಂಕಿಮ್ ಚಂದ್ರ ಚಟರ್ಜಿ ರಚಿಸಿದ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆ ಜನಗಣಮನದೊಂದಿಗೆ ಸಮಾನಗೌರವ ನೀಡಲಾಗುವುದೆಂದು ಬಾಬು ರಾಜೇಂದ್ರ ಪ್ರಸಾದ್ ತಿಳಿಸಿದ್ದರು. ಬ್ರಿಟಿಷರ ಹುಟ್ಟಡಗಿಸಿದ್ದ ಈ ಹಾಡು ಭಾರತ ಏಕತೆ ಮತ್ತು ಸ್ವಾಭಿಮಾನದ ಜಾಗೃತಿ ಮನೋಭಾವಕ್ಕೆ ಕಾವ್ಯಾತ್ಮಕ ಅಭಿವ್ಯಕ್ತಿಯನ್ನೇ ನೀಡಿತು. ದೇಶಪ್ರೇಮ, ರಾಷ್ಟ್ರಪ್ರಜ್ಞೇ ಮುಂತಾದ ಪದಗಳು ಇಂದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಈ ಸಂಕೀರ್ಣ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ವಂದೇ ಮಾತರಂ ರಾಷ್ಟ್ರಭಕ್ತಿ, ಪ್ರೇಮ ಮತ್ತು ನಿಷ್ಠೆಯನ್ನು ರೂಪಿಸಬಹುದಾದ ಮಹಾಗೀತೆಯಾಗಲಿ ಎಂದು ಹಾರೈಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಗೋಪಿ ರಂಗಸ್ವಾಮಿ ಮಾತನಾಡಿ, ನ.7ರಂದು ನವದೆಹಲಿಯಲ್ಲಿ ಪ್ರಧಾನಿ ಮೋದೀಜಿ ವಂದೇ ಮಾತರಂ 150ರ ಸಂಭ್ರಮದ ಕಾರ್ಯಕ್ರವನ್ನು ಉದ್ಘಾಟಿಸಿದ್ದು, 2026ರ ನ.7ವರಗೂ ರಾಷ್ಟ್ರಾದ್ಯಂತ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ. ಶಾಲಾ-ಕಾಲೇಜುಗಳಲ್ಲಿ ಸಾಮೂಹಿಕ ಗಾಯನ, ವಿದ್ವಾಂಸರಿಂದ ಭಾಷಣ, ಕಿರುಚಿತ್ರ ಪ್ರದರ್ಶನ ಮುಂತಾದವುಗಳನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಲ್ಲಿ ದೇಶದ ಬಗೆಗಿನ ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ರೂಪಿಸುವುದೇ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಪ್ರಾಂತ ಕಾನೂನು ವಿದ್ಯಾರ್ಥಿ ಸಹ ಸಂಚಾಲಕ ಶ್ರೀದತ್ತ ಅವರು ವಂದೇ ಮಾತರಂ ಆಚರಣೆ ಹಾಗೂ ಎಬಿವಿಪಿಯು ವಿದ್ಯಾರ್ಥಿಗಳೊಡನೆ ನಡೆಸುವ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಸ್ತ್ರೀ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್.ರಾಧಾಕೃಷ್ಣ ಹಿರಿಯ ಕಾರ್ಯಕರ್ತರು, ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.