ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಯಂತಿ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಿ.ಮಾದೇಗೌಡ, ಪ್ರೊ.ಶರಣಪ್ಪ ವಿ.ಹಲಸೆ, ಪ್ರೊ.ನವೀನ್ ಕುಮಾರ್ ಎಸ್.ಕೆ, ಡೀನ್ ಪ್ರೊ.ಎಂ.ರಾಮನಾಥಂ ನಾಯಡು, ಎನ್.ಆನಂದ ಗೌಡ ಇದ್ದರು 
ಮೈಸೂರು

ವಿಲೀನ ಪ್ರಕ್ರಿಯೆಗೆ ಪಟೇಲ್ ಕೊಡುಗೆ ದೊಡ್ಡದು

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ
  • ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಸರ್ದಾರ್ ಪಟೇಲ್ ಜಯಂತಿ ಕಾರ್ಯಕ್ರಮ
ಮೈಸೂರು: ಹರಿದು ಹಂಚಿಹೋಗಿದ್ದ 570 ಸಣ್ಣ-ದೊಡ್ಡ ರಾಜಪ್ರಭುತ್ವದ ಸಂಸ್ಥಾನಗಳನ್ನು ಸ್ವಾತಂತ್ರ್ಯ ನಂತರ ಯಾವುದೇ ರಕ್ತಪಾತವಿಲ್ಲದೆ ಭಾರತದೊಂದಿಗೆ ವಿಲೀನಗೊಳಿಸಿದ ಮಹತ್ತರ ಸೇವೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಂದ ನಡೆದಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಗುರುವಾರ ಆಯೋಜಿಸಿದ್ದ ಸರ್ದಾರ್ ಪಟೇಲ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕರು. ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವರಾಗಿ ವಿವಿಧ ಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿ ಅಖಂಡ ಭಾರತವನ್ನು ನಿರ್ಮಿಸಿದರು. ಅದಕ್ಕಾಗಿಯೇ ‘ಭಾರತದ ಉಕ್ಕಿನ ಮನುಷ್ಯ’ ಎಂದು ಹೆಸರುವಾಸಿಯಾದರು ಎಂದರು.
ಸಮಗ್ರ ಭಾರತ ರೂಪಿಸುವ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಅಂದು ಸ್ವಲ್ಪ ಹಳಿ ತಪ್ಪಿದ್ದರೆ ದೇಶ ಸಮಗ್ರತೆ ಉಳಿಯುತ್ತಿರಲಿಲ್ಲ.
ಸ್ವಾತಂತ್ರ್ಯ ದೊರಕಿದ ಬಳಿಕ ವಿವಿಧ ರಾಜರ ಆಳ್ವಿಕೆಯ 570 ಸಂಸ್ಥಾನಗಳನ್ನು ಏಕೀಕರಣ ಮಾಡುವ ಕಠಿಣ ಸವಾಲು ಪಟೇಲರಿಗೆ ಇತ್ತು. ಎಲ್ಲರೊಂದಿಗೆ ಪಟೇಲ್ ಸಂಧಾನ ನಡೆಸಿದರು. ಇದಕ್ಕೆ ಒಪ್ಪದ ಜುನಾಗಡ, ಕಾಶ್ಮೀರದ ರಾಜರ ಮನವೊಲಿಸಿದ್ದರು. ಯಾವುದಕ್ಕೂ ಬಗ್ಗದ ಹೈದರಬಾದ್ ನಿಜಾಮರ ವಿರುದ್ಧ ಸೈನ್ಯ ಬಲಪ್ರಯೋಗದಿಂದ ಶರಣಾಗುವಂತೆ ಮಾಡಿದರು. ಇದುವೇ ಅವರ ನಾಯಕತ್ವ ಗುಣಕ್ಕೆ ಸಾಕ್ಷಿ ಎಂದರು
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ನವೀನ್ ಕುಮಾರ್ ಎಸ್.ಕೆ, ಡೀನ್(ಶೈಕ್ಷಣಿಕ)ಪ್ರೊ.ಎಂ.ರಾಮನಾಥಂ ನಾಯ್ಡು, ಅಧ್ಯಯನ ವಿಭಾಗದ ಡೀನ್ ಎನ್.ಆನಂದ ಗೌಡ ಇದ್ದರು.