ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರ್.ಡಿ.ಪಿ.ಆರ್‌ದಿಂದ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಸ್. ಯುಕೇಶ್‌ಕುಮಾರ್, ಮಲ್ಲಿಕಾರ್ಜುನ ಬಾಲದಂಡಿ, ಶೇಕ್ ತನ್ವೀರ್ ಆಶಿಫ್, ಬಿ.ಎಂ. ಸವಿತಾ, ಸಿದ್ದಗಂಗಮ್ಮ, ಭಾಸ್ಕರ್ ನಾಯಕ್ ಇತರರು ಇದ್ದರು.
- ಒತ್ತಡವನ್ನು ಹೊರಗಿಟ್ಟು ಹಸನ್ಮುಖರಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು
- ಕ್ರೀಡಾಪಟುಗಳು ವಯಸ್ಸಿಗೆ ಅನುಗುಣವಾಗಿ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಟಗಳಲ್ಲಿ ಭಾಗವಹಿಸಬೇಕು
ಮೈಸೂರು:ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯವಾಗಿದ್ದು, ಎಲ್ಲರೂ ಕಾರ್ಯ ಒತ್ತಡವನ್ನು ಹೊರಗಿಟ್ಟು ಹಸನ್ಮುಖರಾಗಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ಯುಕೇಶ್‌ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರ್.ಡಿ.ಪಿ.ಆ.ನಿಂದ ಆಯೋಜಿಸಿದ್ದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಎಷ್ಟೇ ಕೆಲಸ ಮಾಡಿದರೂ ಆರೋಗ್ಯ ಮತ್ತು ಕುಟುಂಬ ಈ ಎರಡು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲ ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸಬೇಕು. ಜಿಲ್ಲಾ ಪಿಡಿಒ ಸಂಘದವರು ಎಲ್ಲರೊಂದಿಗೆ ಸಮನ್ವಯತೆಯಿಂದ ಕಾರ್ಯಕ್ರಮ ಮಾಡಿರುವುದು ಮಾದರಿ ಎಂದರು.
ವಯಸ್ಸಿನ ಮಿತಿ ಇಲ್ಲ: ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕ್ರೀಡಾಪಟುಗಳು ವಯಸ್ಸಿಗೆ ಅನುಗುಣವಾಗಿ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಆಟಗಳಲ್ಲಿ ಭಾಗವಹಿಸಬೇಕು. ಉತ್ಸಾಹಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಆಟ ಆಡಲು ಬಂದ ಮೇಲೆ ಸಿಟಿ ಸುತ್ತಲು ಹೋಗಬಾರದು. ಎರಡು ದಿನಗಳ ಕಾಲ ಕ್ರೀಡೆಯಲ್ಲಿ ಭಾಗವಹಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿ ಎಲ್ಲರೂ ಭಾಗವಹಿಸಿ ಹೆಚ್ಚು ಬಹುಮಾನ ಗೆದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಾಗಿ ಎಂದು ಶುಭ ಹಾರೈಸಿದರು.
ಬಾಸ್ಕೆಟ್‌ಬಾಲ್, ಥ್ರೋಬಾಲ್, ಕ್ರಿಕೆಟ್, ಚೆಸ್, ಷಟಲ್ ಬ್ಯಾಡ್ಮಿಂಟನ್, ಯೋಗ ಕ್ರೀಡೆಗಳು ನಡೆದವು. ನಗರಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಆಡಳಿತ) ಬಿ.ಎಂ. ಸವಿತಾ, ಮುಖ್ಯ ಲೆಕ್ಕಾಧಿಕಾರಿ ಸಿದ್ದಗಂಗಮ್ಮ, ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಇಂಜಿನಿಯರ್‌ಗಳಾದ ವೀರೇಶ್, ರಾಮಸ್ವಾಮಿ, ಕೃಷ್ಣ ಸಿ., ಜಿಲ್ಲಾ ಪಿಡಿಓ ಸಂಘದ ಅಧ್ಯಕ್ಷ ಕಂಚಿನಕೆರೆ ರುಕ್ಮಾಂಗದ, ಪ್ರಕಾಶ್, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು.