ಬೆಟ್ಟದಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಕಚೇರಿಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಲಕ್ಷ್ಮೀ ರಮೇಶ್, ಬಿ.ಜೆ.ದೇವರಾಜು, ಲೀಲಾವತಿ, ಸಂತೋಷ ಕುಮಾರ್ ಇತರರು ಇದ್ದರು.
ಬೆಟ್ಟದಪುರ: ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಮಕ್ಕಳ ಮೊಬೈಲ್ ಗೀಳಿಗೆ ಒಳಗಾಗದಂತೆ ಪ್ರತಿಯೊಂದು ಬೆಳವಣಿಗೆಯ ಮೇಲೂ ಪಾಲಕರು ಎಚ್ಚರ ವಹಿಸಬೇಕು ಎಂದು ಮೈಸೂರಿನ ಮಹಾಜನ ಕಾಲೇಜಿನ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಎ.ಎಂ.ಮಧುಶ್ರೀ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಕಚೇರಿಯಿಂದ ಬೆಟ್ಟದಪುರದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.
ಮಕ್ಕಳು ಮೊಬೈಲ್ ಬಳಕೆಗೆ ಹೆಚ್ಚಾಗಿ ಅವಲಂಬಿತರಾದರೆ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಉಂಟಾಗಲಿದೆ. ಹೀಗಾಗಿ ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ಮನೆಯಲ್ಲಿ ಮೊಬೈಲ್ ಬಳಕೆ ಕಡಿಮೆ ಮಾಡುವ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು. ಸಾಮಾಜಿಕ ಜಾಲತಾಣ ನಕಾರಾತ್ಮಕ ಬಳಕೆಯಿಂದ ಮಕ್ಕಳು ಏನು ನೋಡುತ್ತಿದ್ದಾರೆ? ಏನು ಕಲಿಯುತ್ತಿದ್ದಾರೆ? ಎಂಬುದರ ಬಗ್ಗೆ ಪಾಲಕರು ಗಮನ ಹರಿಸಬೇಕು ಎಂದರು.
ಮೊದಲು ಮನೆಯಲ್ಲಿ ಪಾಲಕರು ತಮ್ಮ ಮಕ್ಕಳೊಂದಿಗೆ ಹೆಚ್ಚಾಗಿ ಮಾತನಾಡುವ, ಆರೋಗ್ಯಕರವಾಗಿ ಚರ್ಚಿಸುವ ವಾತಾವರಣ ನಿರ್ಮಿಸಿಕೊಳ್ಳಬೇಕು. ಅದನ್ನು ಬಿಟ್ಟು ತಾವೇ ಗಂಟೆಗಟ್ಟಲೇ ಮೊಬೈಲ್, ಧಾರಾವಾಹಿಗಳನ್ನು ನೋಡಿಕೊಂಡು ಕಾಲ ಕಳೆದರೆ ಪ್ರಯೋಜನವಿಲ್ಲ. ಮೊದಲು ನಾವು ಬದಲಾಗಿ, ಮಕ್ಕಳಿಗೆ ಒಳ್ಳೆಯ ವಿಚಾರಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಸಹಾಯಕ ಪ್ರಾಧ್ಯಾಪಕಿ ಪದ್ಮಾವತಿ ಪಿ.ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾಲೇಜು ಹಂತದ ಹೆಣ್ಣುಮಕ್ಕಳಿಗೆ ಪಾಲಕರು ಬೇಗ ಮದುವೆ ಮಾಡುತ್ತಿರುವುದು ಬೇಸರ ಸಂಗತಿಯಾಗಿದೆ. ಓದುವ ಆಸೆ ಹೊಂದಿರುವ ಮಕ್ಕಳಿಗೆ ತಮ್ಮ ಪದವಿ ಪೂರೈಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವಿಶೇಷವಾಗಿ ರಕ್ತಹೀನತೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪಾಲಕರು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಗ್ರಾಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ರಮೇಶ್, ಕರ್ನಾಟಕ ಜನ ಜಾಗೃತಿ ವೇದಿಕೆ ಕೊಡಗು ಉಪಾಧ್ಯಕ್ಷ ಬಿ.ಜೆ.ದೇವರಾಜು, ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ವಲಯ ಯೋಜನಾಧಿಕಾರಿ ಸಂತೋಷ ಕುಮಾರ್, ಜ್ಞಾನ ವಿಕಾಸ ಕೇಂದ್ರದ ಮಮಿತಾ ಸೇರಿದಂತೆ ಜ್ಞಾನ ವಿಕಾಸ ಮಹಿಳಾ ಸದಸ್ಯರು ಇದ್ದರು.