ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವ
- ರಾಜಕೋಟ್‌ನ ರಾಮಕೃಷ್ಣಮದ ಅಧ್ಯಕ್ಷ ಸ್ವಾಮಿ ನಿಖಿಲೇಶ್ವರಾನಂದಜಿ ಅಭಿಮತ
- ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ವಿಚಾರಸಂಕಿರಣ
- ರಾಮಕೃಷ್ಣ ಪರಮಹಂಸರು, ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಪರಂಪರೆ ಪ್ರಮುಖ ವ್ಯಕ್ತಿಗಳು.
ರಾಮಕೃಷ್ಣ ಪರಮಹಂಸರು ಸನಾತನ ಸಂಪ್ರದಾಯದ ನಿಜವಾದ ಗುರು ಎಂದು ಕರೆಯಲ್ಪಡುವ ಮಹಾತ್ಮರು ಎಂದು ರಾಜಕೋಟ್‌ನ ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ನಿಖಿಲೇಶ್ವರಾನಂದಜಿ ಹೇಳಿದರು.
ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವದ ಅಂಗವಾಗಿ ಯಾದವಗಿರಿಯ ರಾಮಕೃಷ್ಣ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಕುರಿತು ವಿಚಾರಸಂಕಿರಣದಲ್ಲಿ ಮಾತನಾಡಿದರು.
ರಾಮಕೃಷ್ಣ ಪರಮಹಂಸರು, ಶಾರದಾದೇವಿ ಮತ್ತು ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕ ಪರಂಪರೆ ಪ್ರಮುಖ ವ್ಯಕ್ತಿಗಳು. ರಾಮಕೃಷ್ಣ ಪರಮಹಂಸರು ಆಧ್ಯಾತ್ಮಿಕ ಗುರುವಾದರೆ, ಅವರ ಪತ್ನಿ ಶಾರದಾದೇವಿ ಶ್ರೀಮಾತೆ ಎಂದು ಕರೆಯಲ್ಪಡುವರು. ರಾಮಕೃಷ್ಣ ಮಿಷನ್ ಸ್ಥಾಪನೆಗೆ ಕಾರಣರಾದ ಸ್ವಾಮಿ ವಿವೇಕಾನಂದರು ಅವರ ಮುಖ್ಯ ಶಿಷ್ಯರಾಗಿದ್ದರು ಎಂದು ಹೇಳಿದರು.
ಶಾರದಾದೇವಿ ಅವರು ರಾಮಕೃಷ್ಣರ ನಿಧನ ನಂತರ ಸುಮಾರು 34 ವರ್ಷಗಳ ಕಾಲ ಆಧ್ಯಾತ್ಮಿಕ ನಾಯಕಿಯಾಗಿದ್ದು, ರಾಮಕೃಷ್ಣರ ಚಿಂತನೆಯನ್ನು ಪ್ರಚಾರ ಮಾಡಿದರು. ರಾಮಕೃಷ್ಣ ಪರಮಹಂಸರು ಸರ್ವಧರ್ಮ ಸಮಾನತೆಗೆ ಹೆಚ್ಚು ಒತ್ತು ನೀಡಿದವರು. ಇವರು ಎಲ್ಲ ಧರ್ಮಗಳು ಒಂದೇ ಎನ್ನುವ ಸಾರವನ್ನು ಸಮಾಜಕ್ಕೆ ತಿಳಿಸಿದವರು ಎಂದರು.
ರಾಮಕೃಷ್ಣರ ಪ್ರೀತಿಯ ಶಿಷ್ಯ ಸ್ವಾಮಿ ವಿವೇಕಾನಂದರು. ತಮ್ಮ ಗುರು ರಾಮಕೃಷ್ಣ ಪರಮಹಂಸರು ನೀಡಿದ ಬೋಧನೆಯಿಂದ ಇಡೀ ಜಗತ್ತಿಗೆ ಭಾರತದ ವಿಶ್ವ ಗುರು ಎಂಬುದಕ್ಕೆ ಪುರಾವೆ ನೀಡುವ ಮೂಲಕ ಭಾರತದ ಮೌಲ್ಯ ಹೆಚ್ಚಿಸಿದರು. ರಾಮಕೃಷ್ಣ ಪರಮಹಂಸರನ್ನು 19ನೇ ಶತಮಾನದ ಪ್ರಸಿದ್ಧ ಸಂತರೆಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದಜಿ, ಗದಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಪಾಲ್ಗೊಂಡಿದ್ದರು.