ಪೈ ಇಂಟರ್‌ನ್ಯಾಷನಲ್ ಸಂಸ್ಥೆಯ ಅಂಗ ಸಂಸ್ಥೆಯಾದ ಪೈ ಫೌಂಡೇಷನ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಲಾ ಆವರಣದಲ್ಲಿ ಗಣ್ಯರು ಗಿಡ ನೆಡಲಾಯಿತು. 
ಮೈಸೂರು

ಪೈ ಫೌಂಡೇಷನ್‌ನಿಂದ ಸಸಿ ನೆಟ್ಟು ಪರಿಸರ ಜಾಗೃತಿ

ಪ್ರಮುಖ ಮುಖ್ಯಾಂಶಗಳು

  • 5,550ಕ್ಕೂ ಹೆಚ್ಚು ನಾಟಿ
  • ಶಿಕ್ಷಣ, ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲೂ ಸೇವೆ
ಪರಿಸರ ಸಂರಕ್ಷಣೆ ಮತ್ತು ಹಸಿರೀಕರಣದ ಸಂಕಲ್ಪ ತೊಟ್ಟಿರುವ ಪೈ ಫೌಂಡೇಷನ್, ಮಹತ್ವಾಕಾಂಕ್ಷೆಯ ‘ಒಂದು ಕೋಟಿ ಗಿಡ ನಡೆಸುವ ಅಭಿಯಾನ’ಕ್ಕೆ ವೇಗ ನೀಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ಪ್ರಮುಖ ಶಾಲೆಗಳ ಆವರಣದಲ್ಲಿ ಫೌಂಡೇಷನ್ ವತಿಯಿಂದ 5,550ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದೆ.
ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಹಾಗೂ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉಪಕರಣ ಮತ್ತು ಪೀಠೋಪಕರಣಗಳ ಮಾರಾಟ ಸಂಸ್ಥೆಗಳಲ್ಲಿ ಒಂದಾದ ಪೈ ಇಂಟರ್‌ನ್ಯಾಷನಲ್ ಸಂಸ್ಥೆಯೂ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) 2000ನೇ ಸಾಲಿನಲ್ಲಿ ಸ್ಥಾಪಿತವಾದ ‘ಪೈ ಫೌಂಡೇಷನ್’ ಪರಿಸರ, ಶಿಕ್ಷಣ ಹಾಗೂ ಸಮುದಾಯ ಕಲ್ಯಾಣ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ.
ಸಂಸ್ಥೆಯು ಇದುವರೆಗೆ 25,453ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನೂ ಹೊತ್ತು ಮಾದರಿಯಾಗಿದೆ.
ಪೈ ಇಂಟರ್‌ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ ಮಾತನಾಡಿ, ಕೇವಲ ಮರ ನೆಡುವುದಷ್ಟೇ ಅಲ್ಲ, ಅವುಗಳನ್ನು ಪೋಷಿಸಿ ಬೆಳೆಸುವುದು ನಮ್ಮ ಮುಖ್ಯ ಗುರಿ. ಬೆಂಗಳೂರು ಗ್ರಾಮಾಂತರದ ಮುರಾರ್ಜಿ ದೇಸಾಯಿ ವಸತಿ ಶಾಲೆ, ಇಂದಿರಾ ಗಾಂಧಿ ಶಾಲೆ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಶಾಲೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇವು ಭವಿಷ್ಯದಲ್ಲಿ ಮಕ್ಕಳಿಗೆ ಶುದ್ಧ ಗಾಳಿ ಹಾಗೂ ಉತ್ತಮ ಪರಿಸರ ನೀಡಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ಪೈ ಇಂಟರ್‌ನ್ಯಾಷನಲ್‌ನ ಹಣಕಾಸು ನಿರ್ದೇಶಕಿ ಮೀನಾ ರಾಜ್‌ಕುಮಾರ್ ಪೈ ಮಾತನಾಡಿ, ನನ್ನ ಜನ್ಮದಿನದಂದು 210 ಸಸಿ ನೆಟ್ಟ ಸಣ್ಣ ಪ್ರಯತ್ನವೇ ಇಂದು ಕೋಟಿ ಮರಗಳ ಬೃಹತ್ ಅಭಿಯಾನವಾಗಿ ಬೆಳೆದಿದೆ. ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆ ಇದಾಗಿದೆ ಎಂದು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೂ ಆಸರೆ

ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಫೌಂಡೇಷನ್, ಸದ್ಯ 290 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುತ್ತಿದ್ದು, ಇದನ್ನು 1,000ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಕಳೆದ 20 ವರ್ಷಗಳಲ್ಲಿ 38,500ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ 2 ಲಕ್ಷಕ್ಕೂ ಅಧಿಕ ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಜುಲೈ 17ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ವಾರ್ಷಿಕ ಶೈಕ್ಷಣಿಕ ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ.
ಕೈ ಜೋಡಿಸಲು ಮುಕ್ತ ಅವಕಾಶ: ಮರ ನೆಡಲು ಸೂಕ್ತ ಜಾಗ ಒದಗಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು, ಶಾಲೆ, ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಪೈ ಫೌಂಡೇಷನ್‌ನೊಂದಿಗೆ ಕೈಜೋಡಿಸಬಹುದಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.