ನಗರದ ಕುಕ್ಕರಹಳ್ಳಿ ಕೆರೆ ಬಳಿಯ ರೈಲು ಹಳಿಗಳ ಪಕ್ಕದಲ್ಲಿ ಮರಗಳನ್ನು ಕಡಿದಿರುವ ಸ್ಥಳಕ್ಕೆ ‘ಪರಿಸರಕ್ಕಾಗಿ ನಾವು’ ಸಂಘಟನೆ ಸದಸ್ಯರು ಭೇಟಿ ನೀಡಿ ವೀಕ್ಷಿಸಿದರು. ಪರಶುರಾಮೇಗೌಡ , ಪ್ರೊ.ಕಾಳಚನ್ನೇಗೌಡ, ಲೀಲಾ ಶಿವಕುಮಾರ್, ಪ್ರೊ.ಶ್ಯಾಮಲಾ, ವಿಶ್ವನಾಥ್, ಭಾನು ಪ್ರಶಾಂತ್, ಸುಧೀರ್ ಗಣಪತಿ, ಸಿಂಧುವಳ್ಳಿ ಅಕ್ಬರ್, ಸಂಜೀವ್ ಕೆ.ಪಾಟೀಲ ಇತರರಿದ್ದರು.
- ಹಳಿಗಳಿಂದ ಸಾಕಷ್ಟು ದೂರದಲ್ಲಿರುವ ಯಾವುದೇ ತೊಂದರೆ ನೀಡದ ಬೃಹತ್ ಮರಗಳನ್ನು ಕಡಿದಿರುವುದು ಸರಿಯಲ್ಲ
- ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಳ್ಳಬೇಕು
ಮೈಸೂರು:ನಗರದ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರೈಲು ಹಳಿಗಳ ಪಕ್ಕದಲ್ಲಿ ವಿವಿಧ ಜಾತಿಯ ಸುಮಾರು 30ಕ್ಕೂ ಹೆಚ್ಚು ಮರಗಳನ್ನು ಕಡಿದಿರುವುದಕ್ಕೆ ‘ಪರಿಸರಕ್ಕಾಗಿ ನಾವು’ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಮರಗಳನ್ನು ಕಡಿದ ಜಾಗಕ್ಕೆ ಭೇಟಿ ನೀಡಿದ್ದ ಸಂಘಟನೆಯ ಸದಸ್ಯರು, 15ರಿಂದ 40 ವರ್ಷಕ್ಕೂ ಹೆಚ್ಚು ವಯಸ್ಸಿನ ಬೃಹತ್ ಮರಗಳನ್ನು ರೈಲ್ವೆ ಇಲಾಖೆಯು ಯದ್ವಾತದ್ವಾ ಕಡಿದಿರುವುದು ಸರಿಯಲ್ಲ. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈಲುಗಳ ಸುಗಮ ಸಂಚಾರ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರೈಲು ಹಳಿಗಳ ಪಕ್ಕದಲ್ಲಿರುವ ಮರಗಳ ಕೊಂಬೆಗಳು, ವಿದ್ಯುತ್ ತಂತಿಗಳ ಮೇಲೆ ಬೀಳುವ ಸಂಭವವಿರುವ ಒಣಗಿದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆದು ಕಡಿಯಲು ರೈಲ್ವೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಹಳಿಗಳಿಂದ ಸಾಕಷ್ಟು ದೂರದಲ್ಲಿರುವ ಯಾವುದೇ ತೊಂದರೆ ನೀಡದ ಬೃಹತ್ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಉರುಳಿಸಿರುವುದು ಇಲಾಖೆಯ ಬೇಜವಾಬ್ದಾರಿ ಮತ್ತು ಕಾನೂನು ಬಾಹಿರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ಇಲ್ಲದೆ ಮರ ಕಡಿಯಲು ಕಾರಣರಾದ ರೈಲ್ವೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ವಿರುದ್ಧ, ಅರಣ್ಯ ಇಲಾಖೆಯು ವೃಕ್ಷ ಸಂರಕ್ಷಣಾ ಕಾಯ್ದೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘಟನೆ ಆಗ್ರಹಿಸುತ್ತದೆ ಎಂದರು.
ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪದ ಕೃತ್ಯ ನಡೆಸಿದ ತಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಗಳನ್ನು ಕೈಗೊಳ್ಳಲು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರನ್ನು ಆಗ್ರಹಿಸಿದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಗುಣ ಬದಲಾವಣೆಯ ಭೀಕರ ಪರಿಣಾಮಗಳು ಮನುಷ್ಯ ಸೇರಿದಂತೆ ಸಕಲ ಜೀವಸಂಕುಲವನ್ನು ತೀವ್ರವಾಗಿ ಬಾಧಿಸುತ್ತಿರುವ ಈ ಹೊತ್ತಿನಲ್ಲಿ ಒಂದೊಂದು ಮರವೂ ಮುಖ್ಯ. ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸಬೇಕಾದ ತುರ್ತು ಪರಿಸ್ಥಿತಿ ಇದೆ. ಸಂವಿಧಾನದ ಆರ್ಟಿಕಲ್ 51ಎ (ಜಿ) ಪ್ರಕಾರ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಮೂಲ ಕರ್ತವ್ಯ. ರೈಲ್ವೆ ಇಲಾಖೆಯು ಇದನ್ನು ಅರಿತು ಕರ್ತವ್ಯ ನಿರ್ವಹಿಸಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ , ಸಕ್ರಿಯ ಸದಸ್ಯರಾದ ಪ್ರೊ. ಕಾಳಚನ್ನೇಗೌಡ, ಲೀಲಾ ಶಿವಕುಮಾರ್, ಪ್ರೊ.ಶ್ಯಾಮಲಾ, ವಿಶ್ವನಾಥ್, ಭಾನು ಪ್ರಶಾಂತ್, ಸುಧೀರ್ ಗಣಪತಿ, ಸಿಂಧುವಳ್ಳಿ ಅಕ್ಬರ್, ಗುರುಸ್ವಾಮಿ, ಹೊಸಹುಂಡಿ ಕೃಷ್ಣ, ಗಣೇಶ್, ಓಂ ಶಿವಚರಣ್, ಸಾರ್ಥಕ್, ಮಹಾಂತೇಶ್ ಇತರರಿದ್ದರು.
ಮರ ಕಡಿದಿರುವ ಸ್ಥಳಕ್ಕೆ ಡಿಆರ್‌ಎಫ್‌ಒ ಸಂಜೀವ್ ಕೆ. ಪಾಟೀಲ, ಅರಣ್ಯ ಗಸ್ತು ನೌಕರ ನಾಗರಾಜ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಮರ ಕಡಿದಿರುವ ಕುರಿತು ಹಿರಿಯ ಅಧಿಕಾರಿಗಳ ವರದಿ ನೀಡಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.