ದಸರಾ ಜಂಬೂ ಸವಾರಿ ಮಾಜಿ ಕ್ಯಾಪ್ಟನ್ ಅಭಿಮನ್ಯು ಆನೆಯನ್ನು ಸೋಮವಾರ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಶಾಸಕ ಟಿ.ಎಸ್.ಶ್ರೀವತ್ಸ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಇತರರಿದ್ದರು.  
ಮೈಸೂರು

ಅರಮನೆಗೆ ಮಾಜಿ ಕ್ಯಾಪ್ಟನ್ ‘ಅಭಿಮನ್ಯು’ ಎಂಟ್ರಿ

* ಸಾಂಪ್ರದಾಯಿಕವಾಗಿ ಸ್ವಾಗತ *ನಿಶಾನೆ ಆನೆ ಪಟ್ಟ * ನೋಡುಗರ ಗಮನ ಸೆಳೆದ ಪೇಟ

ಆರು ವರ್ಷ ಅಂಬಾರಿ ಹೊತ್ತು ಎಲ್ಲರ ಮೆಚ್ಚುಗೆ ಗಳಿಸಿದ್ದ ಅಭಿಮನ್ಯು ಸೋಮವಾರ ಮತ್ತೆ ಅರಮನೆ ಅಂಗಳಕ್ಕೆ ಕಾಲಿಟ್ಟಿದ್ದಾನೆ. ಮಾಜಿ ಕ್ಯಾಪ್ಟನ್ ಆಗಮನದೊಂದಿಗೆ ದಸರೆಯ ಸಂಭ್ರಮಕ್ಕೆ ಗಜಗಾಂಭೀರ್ಯ ಬಂದಿದೆ.

ಬೆಳಗ್ಗೆ ಸುಮಾರು 8.30ರ ವೇಳೆಗೆ ಮೈಸೂರಿಗೆ ಆಗಮಿಸಿದ ಅಭಿಮನ್ಯುವನ್ನು ಜಯಮಾತಾರ್ಂಡ ದ್ವಾರದ ಬಳಿ ಬೆಳಗ್ಗೆ 9.15ರ ಸುಮಾರಿಗೆ ತುಲಾ ಲಗ್ನದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಅರಮನೆ ಅರ್ಚಕ ಪ್ರಹ್ಲಾದ್ ಅವರು ಅಭಿಮನ್ಯುವಿಗೆ ಗಂಧ, ಅರಿಶಿಣ-ಕುಂಕುಮ ಹಚ್ಚಿ, ಹಣೆಯ ಮೇಲೆ ಓಂ ಬರೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅರಮನೆ ಮಂಡಳಿಯಿಂದ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಅರಮನೆ ಆವರಣಕ್ಕೆ ಕರೆತರಲಾಯಿತು. ಅಭಿಮನ್ಯುವಿನ ಆಗಮನಕ್ಕೆ ಸಾರ್ವಜನಿಕರಿಂದ ಹರ್ಷೋದ್ಗಾರ ವ್ಯಕ್ತವಾಯಿತು.

ಅಂಬಾರಿಯಿಂದ ನಿಶಾನೆಯತ್ತ:

ಮೈಸೂರು ದಸರೆಯ ಜಂಬೂ ಸವಾರಿಯಲ್ಲಿ ಆರು ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯುವಿನ ಸೇವೆ ದಸರೆಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಪ್ರತಿವರ್ಷ ಅಂಬಾರಿ ಹೊತ್ತು ಸಾಗುತ್ತಿದ್ದ ಗಜರಾಜನನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕಾತರದಿಂದ ಕಾಯುತ್ತಿದ್ದರು. ಈ ಬಾರಿ ಆತನ ಹೆಗಲ ಮೇಲೆ ಚಿನ್ನದ ಅಂಬಾರಿ ಇಲ್ಲ. ಆದರೆ, ನಿಶಾನೆ ಆನೆಯಾಗಿ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುವ ಮೂಲಕ ಅಭಿಮನ್ಯು ದಸರಾ ಪಯಣದ ಮತ್ತೊಂದು ಹಾಗೂ ಭಾವನಾತ್ಮಕ ಅಧ್ಯಾಯ ಬರೆಯಲಿದ್ದಾನೆ.

ಈ ಬಾರಿ ದಸರಾ ಮಹೋತ್ಸವದಲ್ಲಿ ಅರಣ್ಯ ಇಲಾಖೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿದೆ. 60 ವರ್ಷ ವಯಸ್ಸಿನ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಪಡೆದಿದ್ದಾನೆ. ದಸರೆಯಲ್ಲೇ ಆತನಿಗೆ ಗೌರವಯುತ ಬೀಳ್ಕೊಡುಗೆ ನೀಡಬೇಕು ಎಂಬುದು ಅಭಿಮಾನಿಗಳ ಒತ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಶಾನೆ ಆನೆಯಾಗಿ ಆಯ್ಕೆ ಮಾಡಿದ್ದು, ಅಭಿಮಾನಿಗಳ ಆಸೆಯೂ ಈಡೇರಿದೆ.

ಅಭಿಮನ್ಯು ಅರಮನೆಗೆ ಆಗಮಿಸುವ ಸುದ್ದಿ ತಿಳಿದು ಆತನನ್ನು ನೋಡಲು ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ನಾಲ್ವಡಿ ಮಾದರಿಯ ವಿಶೇಷ ಪೇಟ:

ಅಭಿಮನ್ಯುವಿನ ಅರಮನೆ ಪ್ರವೇಶಕ್ಕೆ ಮತ್ತೊಂದು ವಿಶೇಷ ಮೆರುಗು ನೀಡಿದ್ದು ಅಭಿಮಾನಿಗಳು ಉಡುಗೊರೆಯಾಗಿ ನೀಡಿದ ಆಕರ್ಷಕ ಪೇಟ.

ಕೆಂಪು ಹಾಗೂ ಗೋಲ್ಡ್ ಬಣ್ಣಗಳಿಂದ ಅಲಂಕರಿಸಿದ್ದ ಈ ವಿಶೇಷ ಪೇಟವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಧರಿಸುತ್ತಿದ್ದ ಪೇಟದ ಮಾದರಿಯಲ್ಲಿ ಸಿದ್ಧಪಡಿಸಲಾಗಿದೆ. ಸುಮಾರು 6ರಿಂದ 8 ಕೆಜಿ ತೂಕ ಹೊಂದಿರುವ ಪೇಟವನ್ನು ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ ಅಭಿಮನ್ಯುವಿಗೆ ಧರಿಸಲಾಯಿತು.

ವಿಶೇಷ ಪೇಟ ಧರಿಸಿದ ಅಭಿಮನ್ಯು ಅರಮನೆ ಆವರಣದಲ್ಲಿ ರಾಜಗಾಂಭೀರ್ಯದಿಂದ ಕಂಗೊಳಿಸಿದ್ದು, ನೆರೆದಿದ್ದವರ ಗಮನ ಸೆಳೆಯಿತು. ಅಭಿಮಾನಿಗಳು ಪ್ರೀತಿಯಿಂದ ನೀಡಿದ ಈ ಪೇಟವು ಆರು ವರ್ಷಗಳ ಅಂಬಾರಿ ಸೇವೆಗೆ ಸಲ್ಲಿಸಿದ ಗೌರವದ ಸಂಕೇತವಾಗಿ ಗಮನ ಸೆಳೆಯಿತು. ಶಾಸಕ ಟಿ.ಎಸ್.ಶ್ರೀವತ್ಸ, ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಇತರರಿದ್ದರು.

ಅಭಿಮನ್ಯು ಇಲ್ಲದೆ ದಸರಾ ಇಲ್ಲ ಎಂಬಂತಾಗಿದೆ. ಅಂತಿಮವಾಗಿ ಅಭಿಮನ್ಯು ದಸರಾಗೆ ಬಂದಿದ್ದಾನೆ. ಸರ್ಕಾರ ಆತನನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ತಿಳಿಸುತ್ತೇನೆ. ನಾನೂ ಪೂಜೆಯಲ್ಲಿ ಭಾಗವಹಿಸಿದ್ದು ಖುಷಿ ತಂದಿದೆ.

ಟಿ.ಎಸ್.ಶ್ರೀವತ್ಸ, ಶಾಸಕ

ಅಭಿಮನ್ಯುವಿಗೆ ವಿಶೇಷ ತಾಲೀಮಿನ ಅಗತ್ಯವಿಲ್ಲ. ಆತ ದಸರಾ ವಾತಾವರಣಕ್ಕೆ ಹೊಂದಿಕೊಂಡಿದ್ದಾನೆ. ಆದರೂ ಮುನ್ನೆಚ್ಚರಿಕೆ ಹಾಗೂ ದಸರಾ ಕಾರ್ಯಕ್ರಮದ ಭಾಗವಾಗಿ ಮಂಗಳವಾರದಿಂದ ಅಭಿಮನ್ಯು ತಾಲೀಮಿನಲ್ಲಿ ಭಾಗವಹಿಸಲಿದ್ದಾನೆ. ಅ.7, 9 ಹಾಗೂ 12ರಂದು ಕುಶಾಲತೋಪು ಸಿಡಿಸುವ ತಾಲೀಮು ನಡೆಸಲಾಗುವುದು.ದಸರಾ ತಾಲೀಮು ಹಾಗೂ ಆನೆಗಳ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಆನೆಗಳಿಂದ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆನೆಗಳ ಸನಿಹಕ್ಕೆ ತೆರಳಬಾರದು. ಸುರಕ್ಷಿತ ಅಂತರದಿಂದಲೇ ಆನೆಗಳನ್ನು ವೀಕ್ಷಿಸಬೇಕು.

ಡಾ.ಐ.ಬಿ.ಪ್ರಭುಗೌಡ

ಡಿಸಿಎಫ್