ನಗರದ ರಾಮಸ್ವಾಮಿ ವೃತ್ತದಲ್ಲಿ ಎಐಯುಟಿಯುಸಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು. ಮುದ್ದುಕೃಷ್ಣ, ಪುಟ್ಟರಾಜು, ಹರೀಶ್.ಎಸ್.ಎಚ್ ಇತರರು ಇದ್ದರು. 
ಮೈಸೂರು

ಕೇಂದ್ರದಿಂದ ಕಾರ್ಮಿಕ ಸಂಹಿತೆ ಜಾರಿಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ವೇತನ ಸಂಹಿತೆಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡಬಹುದು ಎಂಬ ಆತಂಕ
  • ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು
  • ಕಾರ್ಮಿಕರ, ದುಡಿಯುವ ವರ್ಗದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದರು
ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಮೈಸೂರಿನಲ್ಲಿ ಎಐಯುಟಿಯುಸಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ, ದುಡಿಯುವ ವರ್ಗದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಅಪ್ರಜಾತಾಂತ್ರಿಕ ಕ್ರಮ ಖಂಡನೀಯ. ಸರ್ಕಾರ ಜಾರಿಗೆ ತಂದಿರುವ ಈ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ವ್ಯವಹಾರವನ್ನು ಸುಲಭಗೊಳಿಸುವ ನೆಪದಲ್ಲಿ ಕಾರ್ಮಿಕರ ಹಕ್ಕುಗಳು, ರಕ್ಷಣೆಯನ್ನು ಮೊಟಕುಗೊಳಿಸುವ ಮೂಲಕ, ಬಂಡವಾಳಶಾಹಿ ಮತ್ತು ಉದ್ಯಮ ಪರವಾಗಿವೆ. ಇದು ಪ್ರಗತಿಪರ ಸುಧಾರಣೆಯಲ್ಲ, ಬದಲಿಗೆ ಕಾರ್ಮಿಕ ವಿರೋಧಿ ನಡೆ ಎಂದು ಕಿಡಿಕಾರಿದರು.
ಕೈಗಾರಿಕಾ ಸಂಬಂಧಗಳ ಸಂಹಿತೆ ಅಡಿಯಲ್ಲಿ, ಉದ್ಯೋಗಿಗಳನ್ನು ವಜಾ ಮಾಡಲು ಅಥವಾ ಕಾರ್ಖಾನೆಗಳನ್ನು ಮುಚ್ಚಲು ಸರ್ಕಾರದ ಅನುಮತಿಯ ಅಗತ್ಯವಿರುವ ಸಂಸ್ಥೆಗಳ ಗಾತ್ರವನ್ನು ಹೆಚ್ಚಿಸಲಾಗಿದೆ. ಕೆಲವು ರಾಜ್ಯಗಳಲ್ಲಿ 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳಿಗೆ ಈ ಮಿತಿ ವಿಸ್ತರಿಸಲಾಗಿದೆ. ಇದರಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಸುಲಭವಾಗಿ ಕಾರ್ಮಿಕರನ್ನು ತೆಗೆದುಹಾಕಲು ಸಾಧ್ಯವಾಗುತ್ತದೆ. ಇದು ಉದ್ಯೋಗ ಭದ್ರತೆ ಕಡಿಮೆ ಮಾಡುತ್ತದೆ ಎಂದು ಆತಂಕವ್ಯಕ್ತಪಡಿಸಿದರು.
ಮುಷ್ಕರಕ್ಕೆ ಹೋಗುವ ಮೊದಲು 14 ದಿನಗಳ ನೋಟಿಸ್ ಕಡ್ಡಾಯಗೊಳಿಸಿದೆ. ಇದು ಮುಷ್ಕರ ನಡೆಸುವುದನ್ನು ಕಷ್ಟಕರವಾಗಿಸುತ್ತದೆ. ಕಾರ್ಮಿಕರ ಸಂಘಟಿತ ಚೌಕಾಸಿ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಕಾರ್ಮಿಕ ಕಾಯ್ದೆಗಳನ್ನು ಕೇಂದ್ರೀಕರಿಸುವುದರಿಂದ, ಸಂಸ್ಥೆಗಳು ಮತ್ತು ಮಾಲೀಕರು ಕಡಿಮೆ ನಿಯಂತ್ರಣ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತಾರೆ. ಸಂಹಿತೆಗಳು ಅನುಸರಣೆಯನ್ನು ಸರಳಗೊಳಿಸುವುದಾಗಿ ಹೇಳಿದರೂ ಇದು ವಾಸ್ತವವಾಗಿ ದುರ್ಬಲ ಕಾರ್ಮಿಕ ಶ್ರಮ ಪರಿಶೀಲನಾ ವ್ಯವಸ್ಥೆಗೆ ಕಾರಣವಾಗಬಹುದು. ಸಾಮಾಜಿಕ ಭದ್ರತಾ ಸಂಹಿತೆ ಗುತ್ತಿಗೆ ಕಾರ್ಮಿಕರು ಮತ್ತು ಗಿಗ್ ವರ್ಕರ್ಸ್‌ಗಳ ಬಗ್ಗೆ ಮಾತನಾಡಿದರೂ, ಎಲ್ಲ ಕಾರ್ಮಿಕರಿಗೆ ಸಮಗ್ರ ಮತ್ತು ಕಡ್ಡಾಯ ಸಾಮಾಜಿಕ ಭದ್ರತೆ ಖಚಿತಪಡಿಸುವುದಿಲ್ಲ ಎಂದು ದೂರಿದರು.
ವೇತನ ಸಂಹಿತೆಯಲ್ಲಿ ಕೆಲಸದ ಸಮಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗುತ್ತದೆ. ಕೆಲವೊಮ್ಮೆ ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಲು ಸಂಸ್ಥೆಗಳಿಗೆ ಅವಕಾಶ ನೀಡಬಹುದು ಎಂಬ ಆತಂಕವಿದೆ. ಇದು ಕಾರ್ಮಿಕರ ಮೇಲೆ ಒತ್ತಡ ಹೆಚ್ಚಿಸುತ್ತದೆ. ಹೀಗಾಗಿ ಈ ಸಂಹಿತೆಗಳು ಕಾರ್ಮಿಕರನ್ನು ವಜಾ ಮಾಡುವ ಸುಲಭ ಮಾರ್ಗ ಆರಿಸಿಕೊಂಡಿವೆ. ಇದರಿಂದ ಕಾರ್ಪೊರೇಟ್ ವಲಯಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಕೂಡಲೇ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿಗಳಾದ ಮುದ್ದುಕೃಷ್ಣ, ಪುಟ್ಟರಾಜು, ಜಿಲ್ಲಾ ಸಮಿತಿಯ ಸದಸ್ಯ ಹರೀಶ್.ಎಸ್.ಎಚ್, ವಿವಿಧ ಘಟಕಗಳ ಮುಖಂಡರಾದ ಶಿವಾನಂದ್, ರಾಘವೇಂದ್ರ ಪ್ರಸಾದ್, ರವಿಕುಮಾರ್, ಪವಿತ್ರಾ, ರಾಜೇಶ್, ಮಹದೇವಸ್ವಾಮಿ, ಚಂದನ್, ಮಲ್ಲೇಶ್, ಜಯಶಂಕರ್, ಹರೀಶ್, ಸತೀಶ್, ರಮೇಶ್, ಅರವಿಂದ್, ಅಕ್ಕಮಹಾದೇವಿ ಸೇರಿದಂತೆ ಇತರರು ಇದ್ದರು.