ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ 
ಮೈಸೂರು

ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿಗೆ ವಿರೋಧ

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ರೆಸಾರ್ಟ್ ತೆರವುಗೆ ಆಗ್ರಹ
ಮೈಸೂರು: ಕಬಿನಿ ಹಿನ್ನೀರು ಸೇರಿದಂತೆ ಎಚ್.ಡಿ.ಕೋಟೆ ಪ್ರದೇಶದಲ್ಲಿರುವ ಅಕ್ರಮ ರೆಸಾರ್ಟ್‌ಗಳನ್ನು ಫೆ.25ರೊಳಗೆ ತೆರವುಗೊಳಿಸಬೇಕು. ಸಫಾರಿ ಪುನರಾರಂಭದ ಆಲೋಚನೆಯನ್ನು ಕೈಬಿಡಬೇಕು ಎಂದು ಸೇವ್ ಕಬಿನಿ ತಂಡ ಆಗ್ರಹಿಸಿದೆ.
ಕಬಿನಿ ಹಿನ್ನೀರು ಪ್ರದೇಶ, ಬಂಡೀಪುರ, ನಾಗರಹೊಳೆ ಅರಣ್ಯ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಸುತ್ತಮುತ್ತಲೂ ಸೂಕ್ಷ್ಮ ವಲಯ ಇದೆ. ಆದರೆ, ಈ ಪ್ರದೇಶದಲ್ಲಿ ರೆಸಾರ್ಟ್ ಹಾಗೂ ಸಫಾರಿಗಳಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ವನ್ಯಜೀವಿ- ಮಾನವ ಸಂಘರ್ಷಕ್ಕೂ ಕಾರಣವಾಗಿದೆ ಎಂದು ತಂಡದ ಸದಸ್ಯ ಹಾಗೂ ವಕೀಲ ವಿ. ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಸರ್ಕಾರವು ಸಫಾರಿಯಿಂದ ಬರುವ ಚಿಲ್ಲರೆ ಕಾಸಿಗೆ ಮರುಳಾಗುವುದು ಸರಿಯಲ್ಲ. ಹುಲಿ ಯೋಜನೆ ಇರುವ ಪ್ರದೇಶದಲ್ಲಿ ಸಫಾರಿಗೆ ಅನುಮತಿಯಿಲ್ಲ ಎಂದು 2025ರ ನವೆಂಬರ್ 17ರಂದು ನೀಡಿರುವ ಸುಪ್ರೀಂಕೋರ್ಟ್ ಗೋದಾವರ್ಮನ್ ಪ್ರಕರಣದ ತೀರ್ಪುನಲ್ಲಿ ಹೇಳಿದೆ. 
ಆದರೂ ಇಲ್ಲಿ ಸಫಾರಿಗೆ ಅವಕಾಶ ನೀಡಿ ಪ್ರಾಣಿಗಳ ನೆಮ್ಮದಿಗೆ ತೊಂದರೆ ಉಂಟು ಮಾಡಲಾಗುತ್ತಿದೆ. ಅರಣ್ಯದೊಳಗೆ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂಬುದನ್ನು ಉಲ್ಲಂಘಿಸಲಾಗಿದೆ. ಸೂಕ್ಷ್ಮ ವಲಯದಲ್ಲಿ ಕಾಂಕ್ರೀಟ್ ಕಟ್ಟಡ, ಬಹುಮಹಡಿ ಕಟ್ಟಡಗಳಿವೆ. ಶಬ್ಧಮಾಲಿನ್ಯ, ಜಲ ಮಾಲಿನ್ಯದಿಂದ ಅಲ್ಲಿಯ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ದೂರಿದರು.
ಪಾರದರ್ಶಕವಲ್ಲದ, ಮೂಲ ಕರಡು ಹಾಗೂ ನಕ್ಷೆಯ ಆಧಾರದ ಮೇಲೆ ಜಂಟಿ ಸ್ಥಳ ಪರಿಶೀಲನೆ ಹಾಗೂ ಸರ್ವೇ ಮಾಡದೇ ವಾಣಿಜ್ಯ ವಹಿವಾಟು ಮಾಡುವವರು ಕೊಟ್ಟಿರುವ ದಾಖಲೆ ಆಧಾರದ ಮೇಲೆ ಸಿದ್ಧಪಡಿಸಿರುವ ವರದಿಯನ್ನು ಒಪ್ಪಲು ಸಾಧ್ಯ ಇಲ್ಲ. ಪಾರದರ್ಶಕವಾದ ಜಂಟಿ ಸಮಿತಿ ರಚಿಸಿ ಸ್ಥಳ ಪರಿಶೀಲನೆ ಮಾಡಿಸಬೇಕು.
 ಕಬಿನಿ ಜಲಾಶಯ ಹಿನ್ನೀರಿನ ಸರ್ವೇ, ಗೋದಾವರ್ಮನ್ ತೀರ್ಪಿನ ಅಡಿಯಲ್ಲಿ ಇಡೀ ರಾಜ್ಯದ ಕೋರ್ ಅರಣ್ಯ, ಬಫರ್ ವಲಯ ಮತ್ತು ಪರಿಸರ ಸೂಕ್ಷ್ಮ ವಲಯ ಗುರುತು ಮಾಡಬೇಕು. ಸರ್ಕಾರದ ಉನ್ನತ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ಸೇವ್ ಕಬಿನಿ ತಂಡದ ಪ್ರತಿನಿಧಿಗಳು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ಅರಣ್ಯ, ಪರಿಸರ ಮತ್ತು ನೀರಾವರಿ ಇಲಾಖೆ ಬಗ್ಗೆ ತಜ್ಞತೆ ಹೊಂದಿರುವವರು ಈ ಸಮಿತಿಯಲ್ಲಿರಬೇಕು.
 ಇದು ಫೆ.25ರೊಳಗೆ ಕಾರ್ಯರೂಪಕ್ಕೆ ತರದಿದ್ದರೆ ಅಂದಿನಿಂದ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. 
ಹೊನ್ನೂರು ಪ್ರಕಾಶ್, ಮಂಜುಕಿರಣ್, ಎಂ.ಮಂಜುನಾಥ್, ಭಾನುಮೋಹನ್, ಅರವಿಂದ ಶರ್ಮ ಇದ್ದರು.