ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ನಗರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಹೇಮಂತ್ ಕುಮಾರ್ ಸ್ವಾಮೀಜಿ, ಅರವಿಂದ ಲಿಂಬಾವಳಿ, ಎಂ.ರಾಮಪ್ಪ, ಜಿ.ವಿ.ಸೀತಾರಾಮು, ಎಸ್.ವಿಜಯಕುಮಾರ್, ಕೆ.ಎಚ್.ದೇವರಾಜು ಇದ್ದರು. 
ಮೈಸೂರು

ಒಳಮೀಸಲಾತಿ ರೋಸ್ಟರ್ ಹಂಚಿಕೆಗೆ ವಿರೋಧ: 24ರಂದು ಬೆಂಗಳೂರಿನಲ್ಲಿ ಸಮಾವೇಶ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾಹಿತಿ
  • ಹಳೇ ಮೀಸಲಾತಿಯಡಿ ನೇಮಕಾತಿಗೆ ಆಗ್ರಹ
  • ಒಳಮೀಸಲಾತಿ ರೋಸ್ಟರ್ ಹಂಚಿಕೆಗೆ ವಿರೋಧ
ಮೈಸೂರು: ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ, ಹಳೇ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ಬೃಹತ್ ಸಮಾವೇಶವನ್ನು ಕೈಗೊಂಡಿದ್ದು, ಇದರಲ್ಲಿ ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ನಗರದ ಇಂಜಿನಿಯರ್‌ಗಳ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶ್ರೀಗಳು ಮಾತನಾಡಿದರು.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದು, ಇದು ಎಸ್‌ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕವಾಗಿದೆ. ರೋಸ್ಟರ್ ಪದ್ಧತಿ ಜೀವಂತ ಶವವಾಗಿದೆ. 
ಈ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಈ ಸಮಾವೇಶ ಆಯೋಜಿಸಿದ್ದು, ಈ ಸಮುದಾಯಗಳ ಪ್ರತಿ ಮನೆಯಿಂದ ಒಬ್ಬ ಸದಸ್ಯ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಆದ್ದರಿಂದ ಸಾಗರೋಪಾದಿಯಾಗಿ ಸಮುದಾಯದ ಜನರು ಆಗಮಿಸಬೇಕು ಎಂದು ತಿಳಿಸಿದರು.
ಎಸ್‌ಸಿ ರೋಸ್ಟರ್ ಪದ್ಧತಿ ಪ್ರಕಾರ ಈ 63 ಸಮುದಾಯದವರಿಗೆ ಮೀಸಲು ಸೌಲಭ್ಯ ದೊರೆಯಬೇಕಾದರೆ ಎರಡು ತಲೆಮಾರು ಬೇಕಾಗುತ್ತದೆ. ಇದು ಶಾಶ್ವತವಾಗಿ ಜಾರಿಯಾದರೆ ಈ ಸಮುದಾಯಗಳೆಲ್ಲ ಅಧೋಗತಿಯತ್ತ ಮುಖ ಮಾಡಲಿವೆ. ಸಮಾಜದ ಬೆಳವಣಿಗೆಯೂ  ಇಳಿಮುಖವಾಗಲಿದೆ ಎಂದು ಎಚ್ಚರಿಸಿದರು.
ಅಪೂರ್ಣವಾಗಿರುವ ನ್ಯಾ.ನಾಗಮೋಹನದಾಸ್ ವರದಿಯಲ್ಲೇ 29 ಕೋಷ್ಟಕಗಳ ಪೈಕಿ 19 ಕೋಷ್ಟಕಗಳಲ್ಲಿ ಈ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆ. ಸುಪ್ರೀಕೋರ್ಟ್ ತೀರ್ಪಿನ ಪ್ರಕಾರ ಹಿಂದುಳಿವಿಕೆಯ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವಾದರೆ ಇವುಗಳೆಲ್ಲವೂ ಎ-ಪ್ರವರ್ಗದಲ್ಲಿ ಬರಬೇಕು. ಆದರೆ ರಾಜಕೀಯ ಶಕ್ತಿ, ಧ್ವನಿ ಇಲ್ಲದ ಕಾರಣಕ್ಕೆ ಸಿ-ಪ್ರವರ್ಗಕ್ಕೆ ಸೇರಿಸಲಾಗಿದೆ. ಆದ್ದರಿಂದ ಒಳ ಮೀಸಲಾತಿ ವರ್ಗೀಕರಣವನ್ನೇ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ಜನಗಣತಿ ನಡೆಯಲಿದ್ದು, ಇದರಿಂದ ದೊರೆಯುವ ಎಸ್‌ಸಿ ಜನಸಂಖ್ಯೆ ದತ್ತಾಂಶದ ಮೇಲೆ ಒಳಮೀಸಲಾತಿ ನಿಗದಿಪಡಿಸಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಿದ್ದರೆ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಮೀಸಲಾತಿ ವಿಷಯದಲ್ಲಿ ಅನ್ಯಾಯ ಮಾಡಿದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಿದ್ದು, ಇದೀಗ ಒಳಮೀಸಲಾತಿಯಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೂ ಪಾಠ ಕಲಿಸುವುದು ನಿಶ್ಚಿತ. ಎಸ್‌ಸಿ ಶೇ.15ರಷ್ಟು ಪ್ರಕಾರ ನೇಮಕಾತಿ ಕೈಗೊಂಡಿರುವುದು ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಿದೆ. ನಮಗೆ ದುರಾಸೆ ಇಲ್ಲ. ಎಸ್‌ಸಿಗಳೆಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬೇಕು. ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಏರಿಕೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಪೂರ್ಣಪ್ರಮಾಣದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆ ಮಾಡಬೇಕು. ಅನ್ಯಉದ್ದೇಶಕ್ಕೆ ಬಳಕೆಗೆ ಕಡಿವಾಣ ಹಾಕಬೇಕು. ಹೀಗಾಗಿ, ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಮೀಸಲಾತಿ ಸೌಲಭ್ಯದಿಂದ ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿ ಹೊರಗೆ ಹಾಕುವ ಹುನ್ನಾರ ನಡೆದಿದೆ. ಹೀಗಾಗಿ ಈ ಜಾತಿಗಳನ್ನು ಗುರಿ ಮಾಡಲಾಗಿದೆ. ಹೀಗಾಗಿ ನಮ್ಮ ಸಮುದಾಯಗಳ ಶಕ್ತಿಯನ್ನು ಬೆಂಗಳೂರಿನ ಸಮಾವೇಶ ಮೂಲಕ ಪ್ರದರ್ಶಿಸಬೇಕಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ದೊಡ್ಡ ಅನ್ಯಾಯವಾಗಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಮಾತನಾಡಿ, ಒಳಮೀಸಲಾತಿ ರೋಸ್ಟರ್ ಹಂಚಿಕೆಯಲ್ಲಿ ಅನ್ಯಾಯವಾಗಲಿದ್ದು, ಇದು ಅಳಿವು-ಉಳಿವಿನ ಪ್ರಶ್ನೆ. ನಾವುಗಳೆಲ್ಲ ಜಾಗೃತರಾಗಿ ಹೋರಾಟದಲ್ಲಿ ಸಕ್ರಿಯವಾಗಬೇಕು. ಅದಕ್ಕಾಗಿಯೇ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಈ ಸಮಾವೇಶ ರೂಪಿಸಲಾಗಿದೆ. ಈ ರೀತಿಯ ಹೋರಾಟಕ್ಕೆ ಎಸ್‌ಸಿಯಲ್ಲಿನ ಬಲಗೈ ಸಮುದಾಯದವರು ನಮ್ಮೊಂದಿಗೆ ಇದ್ದಾರೆ ಎಂದರು.
ಶ್ರೀ ಹೇಮಂತ್‌ಕುಮಾರ್ ಸ್ವಾಮೀಜಿ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು, ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಾಧ್ಯಕ್ಷ ಎನ್.ಅನಂತನಾಯ್ಕ, ಮೈಸೂರು ಭೋವಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಎಚ್.ದೇವರಾಜು, ಮಾಜಿ ಅಧ್ಯಕ್ಷ ಜಿ.ನಾಗರಾಜ ಆದರ್ಶ ಯಲಪ್ಪ, ಬಂಜಾರ ಸಮುದಾಯದ ರವಿ ನಾಯ್ಕ ಇತರರಿದ್ದರು.