ಕೆಆರ್‌ಎಸ್ ರಸ್ತೆಯಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಪಾಲಿಕೆಯ ವಲಯ-4ರ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ನೇತೃತ್ವದಲ್ಲಿ ನಡೆಯಿತು. 
ಮೈಸೂರು

ಮೈಸೂರಿನಲ್ಲಿ ಆಪರೇಷನ್ ಫುಟ್‌ಪಾತ್ ಶುರು

ಪ್ರಮುಖ ಮುಖ್ಯಾಂಶಗಳು

  • ಕೆಆರ್‌ಎಸ್ ರಸ್ತೆಯಲ್ಲಿ ಆಪರೇಷನ್ ಫುಟ್‌ಪಾತ್
  • ಪಾದಚಾರಿ ಮಾರ್ಗ ಒತ್ತುವರಿ ತೆರವು
  • ಬಿರುಸುಗೊಂಡ ಕಾರ್ಯಾಚರಣೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯ ಪ್ರಾರಂಭಗೊಂಡಿದ್ದು, ಎರಡನೇ ದಿನವಾದ ಶುಕ್ರವಾರ ವಿವಿಧೆಡೆ ಜೆಸಿಬಿಗಳು ಘರ್ಜಿಸಿದವು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ರಾಜಧಾನಿಯಲ್ಲಿ ಪಾದಚಾರಿ ಮಾರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ಬಿರುಸಿನಿಂದ ಸಾಗಿದ್ದು, ಇದಕ್ಕೆ ಸಾರ್ವಜನಿಕರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಪ್ರೇರಣೆ ಪಡೆದಿರುವ ಮೈಸೂರು ಮಹಾನಗರ ಪಾಲಿಕೆ ಸಹ ನಗರಾದ್ಯಂತ ಕಾರ್ಯಾಚರಣೆಗೆ ಇಳಿದಿದೆ.
ಪಾಲಿಕೆಯ ವಲಯ 4 ಮತ್ತು 5ರ ವ್ಯಾಪ್ತಿಯ ಕೆಆರ್‌ಎಸ್ ರಸ್ತೆಯಲ್ಲಿ ಆಪರೇಷನ್ ಫುಟ್‌ಪಾತ್‌ಗೆ ಚಾಲನೆ ನೀಡಲಾಗಿದೆ. ರಸ್ತೆ ಬದಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿದ್ದ ನೂರಾರು ಅನಧಿಕೃತ ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ವಲಯ-5ರ ವ್ಯಾಪ್ತಿಯ ಜಯದೇವ ಹೃದ್ರೋಗ ಆಸ್ಪತ್ರೆ ಜಂಕ್ಷನ್‌ನಿಂದ ಹಿಡಿದು ಬಸವನ ವಿಗ್ರಹದ ಬಳಿಯ ಬೃಂದಾವನ ಬಡಾವಣೆ ಪ್ರವೇಶದ್ವಾರದವರೆಗಿನ ರಸ್ತೆ ಬದಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.
ರಸ್ತೆ ಬದಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಚಾಟ್‌ಸೆಂಟರ್‌ಗಳು, ಚಹಾ ಅಂಗಡಿಗಳು, ಬಿದಿರಿನ ಸ್ಟಾಲ್‌ಗಳು, ಬೀದಿ ಬದಿಯ ಹೋಟೆಲ್‌ಗಳು ಸೇರಿದಂತೆ ಇತರ ಅನಧಿಕೃತ ವಾಣಿಜ್ಯ ಮಳಿಗೆಗಳನ್ನು ಪಾಲಿಕೆ ಸಿಬ್ಬಂದಿ ಜೆಸಿಬಿಗಳಿಂದ ಮುಲಾಜಿಲ್ಲದೆ ಕಿತ್ತು ಹಾಕಿದರು. ಈ ಸಂದರ್ಭದಲ್ಲಿ ಕೆಲವು ವ್ಯಾಪಾರಿಗಳು ಪ್ರತಿರೋಧ ಒಡ್ಡಿದರೂ ಪಾಲಿಕೆ ಸಿಬ್ಬಂದಿ ಜಗ್ಗಲಿಲ್ಲ. ಪರಿಕರಗಳನ್ನು ಜಪ್ತಿ ಮಾಡುವ ಮೂಲಕ ಬಿಸಿಮುಟ್ಟಿಸಿದರು.
ಕೆಆರ್‌ಎಸ್ ರಸ್ತೆಯಲ್ಲಿ ವ್ಯಾಪಾರಿಗಳು ಬಸ್ ತಂಗುದಾಣದ ಮುಂಭಾಗವನ್ನೇ ಸಂಪೂರ್ಣವಾಗಿ ಅತಿಕ್ರಮಿಸಿಕೊಂಡಿದ್ದರು. ಇದರಿಂದಾಗಿ ಪ್ರಯಾಣಿಕರು ಬಸ್ ತಂಗುದಾಣದ ಒಳಗೆ ಹೋಗಲು ಜಾಗವಿಲ್ಲದೆ ಪರದಾಡುವಂತಾಗಿತ್ತು. ಖಾಸಗಿ ಕಂಪನಿಗಳು ಅಳವಡಿಸಿದ್ದ ಅನಧಿಕೃತ ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್ ಬೋರ್ಡ್‌ಗಳನ್ನು ಧ್ವಂಸಗೊಳಿಸಲಾಯಿತು.
ಕಾರ್ಯಾಚರಣೆಯಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಫಾಸ್ಟ್‌ಫುಡ್ ವ್ಯಾಪಾರಿಯೊಬ್ಬರು ಮಾತನಾಡಿ, ದಿನಕ್ಕೆ 8ರಿಂದ 10 ಸಾವಿರ ರೂ.ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದೆ. ಇದೀಗ ಏಕಾಏಕಿ ಅಂಗಡಿ ತೆರವುಗೊಳಿಸಿರುವುದರಿಂದ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಕಣ್ಣೀರಿಟ್ಟರು.
ವಲಯ-5ರ ಆರೋಗ್ಯ ನಿರೀಕ್ಷಕಿ ಗೀತಾ ಮತ್ತು ಸಿಬ್ಬಂದಿ ವರ್ಗ ಹಾಗೂ ಮೇಟಗಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಅರುಣ್ ನೇತೃತ್ವದ ಪೊಲೀಸ್ ತಂಡದ ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ಸಾಗಿತು.

ಅಧಿಕಾರಿಗಳ ಮಾನವೀಯತೆ

ಕೆಆರ್‌ಎಸ್-ಹೆಬ್ಬಾಳ್ ರಸ್ತೆ, ವಿಜಯನಗರದ ಕಾಳಿದಾಸ ರಸ್ತೆಯಲ್ಲೂ ಕಾರ್ಯಾಚರಣೆ ತೀವ್ರಗೊಂಡಿದೆ. ವಲಯ-5ರ ವ್ಯಾಪ್ತಿಯಲ್ಲೇ ಶೇ.20 ಪಾದಚಾರಿ ಮಾರ್ಗವನ್ನು ಫಾಸ್ಟ್‌ಫುಡ್ ಅಂಗಡಿಗಳೇ ಒತ್ತುವರಿ ಮಾಡಿದ್ದವು. ಕಾರ್ಯಾಚರಣೆ ನಡುವೆಯೂ ಪಾಲಿಕೆ ಅಧಿಕಾರಿಗಳು ಮಾನವೀಯತೆ ಮೆರೆದಿದ್ದು ವೃದ್ಧೆ ಹಾಗೂ ಅಂಗವಿಕಲ ವ್ಯಾಪಾರಿಯೊಬ್ಬರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಾಲಾವಕಾಶ ನೀಡಿದ್ದಾರೆ.
"

ಗೋಕುಲಂ ಮುಖ್ಯ ರಸ್ತೆಯಲ್ಲಿ ಈಗಾಗಲೇ ಶೇ.85 ಒತ್ತುವರಿ ತೆರವುಗೊಳಿಸಲಾಗಿದೆ. ಅನೇಕ ಬಾರಿ ಎಚ್ಚರಿಕೆ ನೀಡಿದರೂ ಜಾಗ ಖಾಲಿ ಮಾಡದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪಾದಚಾರಿ ಮಾರ್ಗದ ಮೇಲಿದ್ದ ಕಾಂಕ್ರೀಟ್ ರಚನೆಗಳು ಹಾಗೂ ವಿಸ್ತರಿತ ಶೀಟ್‌ಗಳನ್ನೂ ತೆರವುಗೊಳಿಸಲಾಗಿದೆ.

— ಸತ್ಯಮೂರ್ತಿ, ಅಭಿವೃದ್ಧಿ ಅಧಿಕಾರಿ, ಪಾಲಿಕೆಯ ವಲಯ-4


ಎರಡು ದಿನಗಳಲ್ಲಿ ಪೂರ್ಣಗೊಳಿಸಲು ತೀರ್ಮಾನ

ಮೈಸೂರು: ಫುಟ್‌ಪಾತ್ ಅತಿಕ್ರಮಣವನ್ನು ಸಂಪೂರ್ಣವಾಗಿ ಇನ್ನೆರಡು ದಿನಗಳಲ್ಲಿ ತೆರವುಗೊಳಿಸಲು ಪಾಲಿಕೆ ಮುಂದಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಗಳ ಬದಿಯಲ್ಲಿನ ಸಾರ್ವಜನಿಕ ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. 
ಇದರಿಂದಾಗಿ ಪಾದಚಾರಿಗಳು ಮುಖ್ಯ ರಸ್ತೆಯಲ್ಲೇ ಓಡಾಡುವಂತಾಗಿದೆ. ಇದು ನಿರಂತರ ಸಂಚಾರ ದಟ್ಟಣೆ, ಅಪಘಾತಗಳಿಗೆ ಕಾರಣವಾಗುತ್ತಿದೆ. ಸಾರ್ವಜನಿಕ ರಸ್ತೆ ಮತ್ತು ಫುಟ್‌ಪಾತ್‌ಗಳು ಸಾರ್ವಜನಿಕರ ಆಸ್ತಿಯಾಗಿದ್ದು, ಅವುಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮಣ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ. 
 ಸಾರ್ವಜನಿಕರ ಹಿತದೃಷ್ಟಿಯಿಂದ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಫುಟ್‌ಪಾತ್ ಅತಿಕ್ರಮಣವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಗಿದೆ. ತಪ್ಪಿದ್ದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಗಾಗಿ ನಿಯಮಾನುಸಾರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.