ನಗರದಲ್ಲಿ ಆಯೋಜಿಸಿದ್ದ ಪ್ರೊ.ವೈ.ಎಚ್.ನಾಯಕವಾಡಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ‘ಸ್ಮೃತಿ ಹೆಜ್ಜೆಗಳು’ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.ಪ್ರೊ.ಎಂ.ಆರ್.ಗಂಗಾಧರ್,ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಉಷಾ ದೇವಿ, ಪ್ರೊ.ಎ.ಸತ್ಯನಾರಾಯಣ, ಪ್ರೊ.ಕೆ.ಸದಾಶಿವ ಇನ್ನಿತರರಿದ್ದರು.  
ಮೈಸೂರು

ಉನ್ನತ ಶಿಕ್ಷಣದಿಂದ ಮಾತ್ರವೇ ಸಾಮಾನ್ಯ ವಿದ್ಯಾರ್ಥಿ ಉನ್ನತ ಸ್ಥಾನಕ್ಕೇರಲು ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಸಲಹೆ
  • ಅಭಿನಂದನಾ ಕಾರ್ಯಕ್ರಮ
  • ಉನ್ನತ ಶಿಕ್ಷಣ ಪಡೆದು ದೇಶದ ಪ್ರಗತಿಗೆ ಸಹಕರಿಸಿ
ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು. ಆಗಲೇ ವೈಯಕ್ತಿಕವಾಗಿ ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇತಿಹಾಸ ಪ್ರಾಧ್ಯಾಪಕ ಪ್ರೊ.ವೈ.ಎಚ್.ನಾಯಕವಾಡಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿಯ ವೃತ್ತಿಪರ ಬೆಳವಣಿಗೆ, ಆರ್ಥಿಕ ಸ್ಥಿರತೆ ಮತ್ತು ಸಮಾಜದ ಪ್ರಗತಿಗೆ ಉನ್ನತ ಶಿಕ್ಷಣ ಅತ್ಯಗತ್ಯ. ಇದು ಕೇವಲ ಪದವಿ ನೀಡುವುದಲ್ಲದೆ, ಆಳವಾದ ಜ್ಞಾನ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಬಗೆಹರಿಸುವ ಕೌಶಲ ಬೆಳೆಸುತ್ತದೆ. ಉನ್ನತ ಶಿಕ್ಷಣದಿಂದ ಮಾತ್ರವೇ ಸಾಮಾನ್ಯ ವಿದ್ಯಾರ್ಥಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದರು.
ಉನ್ನತ ಶಿಕ್ಷಣವು ಸ್ವಾವಲಂಬನೆ, ನಾಯಕತ್ವ ಗುಣಗಳು, ಸೃಜನಶೀಲತೆ ಮತ್ತು ಸಂವಹನ ಕೌಶಲವನ್ನೂ ಅಭಿವೃದ್ಧಿಪಡಿಸುತ್ತದೆ. ಜತೆಗೆ, ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ಬೌದ್ಧಿಕ ಸಂಪನ್ಮೂಲ ಸೃಷ್ಟಿಗೆ ಅಪಾರ ಕೊಡುಗೆ ಸಹ ನೀಡುತ್ತದೆ ಎಂದರು.
ಸೇವೆಯಿಂದ ಮೇ 30ರಂದು ನಿವೃತ್ತರಾಗುತ್ತಿರುವ ಪ್ರೊ.ವೈ.ಎಚ್.ನಾಯಕವಾಡಿ, ಉನ್ನತ ಶಿಕ್ಷಣ ಪಡೆದು ಏನೆಲ್ಲ ಸಾಧನೆ ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದಾರೆ. ಅವರ ಹಲವು ಪುಸ್ತಕಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕವಾಗಿವೆ ಎಂದರು.
 ಕುಲಪತಿ ಆಗುವ ಅರ್ಹತೆಯುಳ್ಳ ಪ್ರೊ.ನಾಯಕವಾಡಿ ಅವರಿಗೆ ಸ್ವಲ್ಪದರಲ್ಲೇ ಇಂತಹ ಅವಕಾಶ ತಪ್ಪಿದೆ. ಕಲಬುರಗಿಯಿಂದ  ಬಂದ ಅವರು ಮೈವಿವಿಯಲ್ಲಿ 33 ವರ್ಷ ಕಾರ್ಯನಿರ್ವಹಿಸಿದ್ದಾರೆ. ಅವರ ಸೇವೆ ಸ್ಮರಣೀಯ. ಅವರಲ್ಲಿನ ಪರಿಶ್ರಮವೇ ಅವರನ್ನು ಉನ್ನತ ಸ್ಥಾನಕ್ಕೆ ಕರೆತಂದಿದ್ದು, ಅವರ ನಿವೃತ್ತಿಯ ಬದುಕು ಸಂತೋಷದಾಯಕವಾಗಿರಲಿ ಎಂದರು.
ಪ್ರೊ.ವೈ.ಎಚ್.ನಾಯಕವಾಡಿ ಅವರನ್ನು ಸನ್ಮಾನಿಸಲಾಯಿತು. ಸ್ಮತಿ ಹೆಜ್ಜೆಗಳು ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು.
ಚಾಮರಾಜನಗರ ವಿವಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಮೈವಿವಿ ನಾಲ್ವಡಿ ಅಧ್ಯಯನ ಪೀಠದ ಸಂದರ್ಶಕ ಪ್ರೊ.ಉಷಾ ದೇವಿ,  ವಿಶ್ರಾಂತ ಕುಲಪತಿ ಪ್ರೊ.ಎ.ಸತ್ಯನಾರಾಯಣ, ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಕೆ.ಸದಾಶಿವ, ಇತಿಹಾಸ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಜಿ.ಟಿ.ಸೋಮಶೇಖರ್, ಕರ್ನಾಟಕ ವಿವಿ ಕನ್ನಡ ಸಂಶೋಧನಾ ಸಂಸ್ಥೆಯ ಪ್ರೊ.ಎಸ್.ಕೆ.ಮೇಲಕಾರ ಇತರರಿದ್ದರು.