ಸ್ತ್ರೀಶಕ್ತ್ತಿ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್
- ಮಹಿಳಾ ಉದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆ ದೊರಕಿಸಿಕೊಡುವ ಯತ್ನ
ಮೈಸೂರು: ಸ್ತ್ರೀಶಕ್ತ್ತಿ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಕಲ್ಪಿಸಿಕೊಡುವ ಪ್ರಯತ್ನ ನಡೆದಿದೆ. ಇದು ಸ್ವಸಹಾಯ ಗುಂಪುಗಳು ಸೇರಿದಂತೆ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ದೊರಕಿಸಿ ಕೊಡುವ ವೇದಿಕೆಯಾಗಲಿದೆ.
ಅಮೆಜಾನ್, ಫ್ಲಿಪ್‌ಕಾರ್ಟ್ ಮಾದರಿಯಲ್ಲಿ ಮಹಿಳೆಯರು ತಾವು ತಯಾರಿಸುವ ಉತ್ಪನ್ನಗಳನ್ನು ಸ್ಥಳೀಯವಾಗಿ ಅಲ್ಲದೇ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಆನ್‌ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ. ಹಪ್ಪಳ, ಸಂಡಿಗೆ, ಕಾರದ ಪುಡಿ, ವಿವಿಧ ಬಗೆಯ ತಿಂಡಿ-ತಿನಿಸುಗಳು, ಕುರುಕಲು ತಿಂಡಿಗಳು, ಮನೆಯ ಅಲಂಕಾರಿಕ ವಸ್ತುಗಳು, ಸಿದ್ಧಪಡಿಸಿದ ಉಡುಪುಗಳು, ಫ್ಯಾನ್ಸಿ ವಸ್ತುಗಳು ಹೀಗೆ ನಾನಾ ಬಗೆಯ ವಸ್ತುಗಳು ಲಭ್ಯವಾಗಲಿದೆ.
ಆನ್‌ಲೈನ್ ವ್ಯವಸ್ಥೆ ಕಲ್ಪಿಸುವ ಮೂಲಕ ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕ್ರಿಯಾ ಯೋಜನೆ ರೂಪಿಸಿದ್ದು, ಅನುಷ್ಠಾನಗೊಳಿಸಲು ಭರದ ಸಿದ್ಧತೆ ನಡೆಸಿದೆ.
ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಭೂಮಿಕೆ
ಪ್ರತಿ ಜಿಲ್ಲೆಯ ಮಹಿಳಾ ಉದ್ಯಮಿಗಳು ಸೇರಿದಂತೆ ಸ್ತ್ರೀಶಕ್ತಿ ಸ್ವ ಸಹಾಯ ಸಂಘಟನೆಗಳು ತಯಾರಿಸುವ ಉತ್ಪನ್ನಗಳ ಪಟ್ಟಿ ಮಾಡುತ್ತಿರುವ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆನ್‌ಲೈನ್ ಮಾರುಕಟ್ಟೆಗೆ ಆ್ಯಪ್ ಮತ್ತು ವೆಬ್‌ಸೈಟ್ ಮೂಲಕ ಭೂಮಿಕೆ ಸಿದ್ಧಪಡಿಸುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಮಾತ್ರ ಮಾರಾಟ ಮಾಡುವ ಅವಕಾಶ ಹೊಂದಿದ್ದ ಮಹಿಳಾ ಉದ್ಯಮಿಗಳಿಗೆ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಅವಕಾಶ ಸಿಗಲಿದೆ.
ಸರ್ಕಾರ ಸೇರಿದಂತೆ ಬ್ಯಾಂಕಿನಿಂದ ಸಾಲಸೌಲಭ್ಯ ಪಡೆದು ಸಣ್ಣ ಪ್ರಮಾಣದಲ್ಲಿ ಉದ್ಯಮಗಳನ್ನು ಆರಂಭಿಸಿರುವ ಮಹಿಳೆಯರು ಮನೆಯಲ್ಲಿಯೇ ಹಪ್ಪಳ, ಸಂಡಿಗೆ, ಕಾರದ ಪುಡಿ, ಕುರುಕಲು ತಿಂಡಿಗಳು, ಮನೆ ಅಲಂಕಾರಿಕ ವಸ್ತುಗಳು, ಸಿದ್ಧಉಡುಪುಗಳು, ಫ್ಯಾನ್ಸಿ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಇಂಥ ಹತ್ತು ಹಲವು ಬಗೆಯ ವಸ್ತುಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.
ಇಷ್ಟು ದಿನಗಳ ಕಾಲ ಸ್ಥಳೀಯವಾಗಿ ನಡೆಯುವ ವಸ್ತುಪ್ರದರ್ಶನಗಳಲ್ಲಿ ಮಾರಾಟ ಮಾಡುವ ಮೂಲಕ ಮಹಿಳಾ ಸಂಘದವರು ಆದಾಯ ಗಳಿಸುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದೆ ಇರುವುದರಿಂದ ಸೀಮಿತ ಆದಾಯಕ್ಕೆ ತೃಪ್ತಿಪಡುವಂತಾಗಿತ್ತು.
ಈ ಹಿನ್ನೆಲೆಯಲ್ಲಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಆನ್‌ಲೈನ್ ಮಾರಾಟ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿ ಯಶಸ್ವಿಯಾಗಿ ವ್ಯಾಪಾರ-ವಹಿವಾಟು ನಡೆಸುತ್ತಿರುವ ಮಹಿಳಾ ಉದ್ಯಮಿಗಳು ಮತ್ತು ಸ್ತ್ರೀಶಕ್ತಿ ಸಂಘಟನೆಗಳ ಸದಸ್ಯರನ್ನು ನಿಗಮದ ಅಧಿಕಾರಿಗಳು ಭೇಟಿ ಮಾಡುತ್ತಿದ್ದು, ಆನ್‌ಲೈನ್ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿ ವಿವರ ಸಂಗ್ರಹಿಸುತ್ತಿದ್ದಾರೆ.
ಉತ್ಪನ್ನದ ಹೆಸರು, ಚಿತ್ರದೊಂದಿಗೆ ಮಾರಾಟಗಾರರ ಹೆಸರು, ವಿಳಾಸ ಮತ್ತು ಮೊಬೈಲ್ ಫೋನ್ ಸಂಖ್ಯೆ ಮೊದಲಾದ ವಿವರಗಳನ್ನು ಕಲೆ ಹಾಕಿ ನಿಗಮದ ಕೇಂದ್ರ ಕಚೇರಿಗೆ ನೀಡಲಾಗುತ್ತಿದೆ.
ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಉದ್ಯಮಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ನಿಗಮವು ಅಭಿವೃದ್ಧಿ ಪಡಿಸುತ್ತಿರುವ ವೆಬ್‌ಸೈಟಿನಲ್ಲಿ ಇವುಗಳ ವಿವರ ಪ್ರಕಟಿಸಲಾಗುತ್ತದೆ. ಗ್ರಾಹಕರು ವೆಬ್‌ಸೈಟಿನಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ವಿಳಾಸ ಅಥವಾ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವ ಮೂಲಕ ಉತ್ಪನ್ನವನ್ನು ಖರೀದಿಸಬಹುದು.
ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ
ಸ್ತ್ರೀಶಕ್ತಿ ಸಂಘಟನೆಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ನಿಗಮವು ಆನ್‌ಲೈನ್ ಮಾರಾಟಕ್ಕೆ ಇಳಿಯಲು ನಿರ್ಧರಿಸಿದೆ. ಇದರಿಂದ ಮಾರುಕಟ್ಟೆಗೆ ವೇದಿಕೆ ಕಲ್ಪಿಸಿದಂತಾಗುತ್ತದೆ. ಮಹಿಳಾ ಉದ್ಯಮಿಗಳಿಗೆ ಆದಾಯವೂ ಹೆಚ್ಚಾಗುತ್ತದೆ. ಜತೆಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯೂ ಲಭ್ಯವಾಗಲಿದೆ.
ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ