ಮೈಸೂರು ವಿಶ್ವವಿದ್ಯಾಲಯದ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿದರು.
ಮೈಸೂರು: ಪ್ರತಿಯೊಬ್ಬರು ಇಂದಲ್ಲ ನಾಳೆ ಸಾಯಲೇ ಬೇಕು. ಆದರೆ, ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ, ಎಷ್ಟು ಜನರಿಗೆ ಜೀವನ ಕಟ್ಟಿಕೊಡಲು ನಮ್ಮಿಂದ ಸಾಧ್ಯವಾಗಿದೆ ಎಂಬುದು ಬಹಳ ಮುಖ್ಯ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎನ್. ವಿಶ್ವನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ವತಿಯಿಂದ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ‘ಪರಿಣಾಮಕಾರಿ ಬೋಧನೆಗೆ ಅಗತ್ಯವಾದ ಕೌಶಲಗಳು’ ವಿಷಯದ ಕುರಿತು ಮಾತನಾಡಿ, ನಾವು ಈ ಭೂಮಿ ಮೇಲೆ ಚಿರಕಾಲ ಇರುತ್ತೇವೆ ಎಂಬ ಭ್ರಮೆಯಲ್ಲಿ ಅಹಂ ಮೈಗೂಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಈ ಸಮಾಜದಲ್ಲಿ ವಿವಿಧ ವೃತ್ತಿಪರರನ್ನು ಕಾಣಬಹುದು. ಎಲ್ಲರ ವೇತನ ಶ್ರೇಣಿ ಭಿನ್ನವಾಗಿರುತ್ತದೆ. ಕೆಲವರು ತಿಂಗಳಿಗೆ 1 ರಿಂದ 10 ಲಕ್ಷ ರೂ. ವೇತನ ಪಡೆಯುತ್ತಾರೆ. ಸಾಕಷ್ಟು ಜನರು 10 ರಿಂದ 20 ಸಾವಿರ ರೂ.ಗೆ ದುಡಿಯುತ್ತಾರೆ. ನಮಗೆ ಹೆಚ್ಚು ಸಂಬಳವಿಲ್ಲ ಎಂಬ ಕೊರಗು ಇರಬಾರದು. ಇರುವ ಹಣದಲ್ಲಿ ಸಂತೃಪ್ತಿಯಿಂದ ಬದುಕುವುದನ್ನು ಕಲಿತುಕೊಳ್ಳಬೇಕು ಎಂದರು.
ಅತಿಥಿ ಉಪನ್ಯಾಸಕರು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರ ಮಾದರಿಯಲ್ಲಿಯೇ ಸಾಕಷ್ಟು ಜವಾಬ್ದಾರಿಗಳು ಇರುತ್ತದೆ. ‘ನಾನು ಅತಿಥಿ ಉಪನ್ಯಾಸಕ’ ಎಂದು ಉದಾಸೀನತೆಯಿಂದ ಕೆಲಸ ಮಾಡ ಬಾರದು. ಹುದ್ದೆ ಯಾವುದೇ ಇರಲಿ, ಸೇವಾ ಮನೋಭಾವನೆ ಅತ್ಯಂತ ಮುಖ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ, ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಎಚ್.ಪಿ. ಜ್ಯೋತಿ ಇದ್ದರು.