ಹನಗೋಡು ಹೋಬಳಿಯ ರಾಮೇನಹಳ್ಳಿಯಲ್ಲಿ ಶ್ರೀ ಓಂಕಾರೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
- ವಿವಿಧೆಡೆ ಜಾಗರಣೆ, ವಿಶೇಷ ಪೂಜೆ
- ಮಹಾಶಿವರಾತ್ರಿ
ಹನಗೋಡು: ಮಹಾಶಿವರಾತ್ರಿ ಅಂಗವಾಗಿ ಭಾನುವಾರ ರಾತ್ರಿ ಹನಗೋಡು ಹೋಬಳಿಯ ವಿವಿಧೆಡೆ ಜಾಗರಣೆ, ವಿಶೇಷ ಪೂಜೆ ನಡೆದರೆ, ಸೋಮವಾರ ಹಲವೆಡೆ ರಥೋತ್ಸವ, ಕೊಂಡೋತ್ಸವ, ಉತ್ಸವ ಹಾಗೂ ಅನ್ನಸಂತರ್ಪಣೆ ವಿಜೃಂಭಣೆಯಿಂದ ನಡೆಯಿತು.
ರಾಮೇನಹಳ್ಳಿ ಬೆಟ್ಟದ ಮೇಲಿನ ಓಂಕಾರೇಶ್ವರ ದೇವರ ರಥೋತ್ಸವ, ಕಲ್ಲೂರಪ್ಪನಗುಡ್ಡದಲ್ಲಿ ಕೊಂಡೋತ್ಸವ, ಕೊಳುವಿಗೆ ರಾಮಲಿಂಗೇಶ್ವರ ದೇವಾಲಯದಲ್ಲಿ ಉತ್ಸವ ಸೇರಿದಂತೆ ಹೋಬಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷಪೂಜೆ ನೆರವೇರಿತು.
ಓಂಕಾರೇಶ್ವರ ರಥೋತ್ಸವ: ಹೋಬಳಿಯ ರಾಮೇನಹಳ್ಳಿ ಬೆಟ್ಟದ ಮೇಲಿನ ಶ್ರೀ ಓಂಕಾರೇಶ್ವರಸ್ವಾಮಿ ರಥೋತ್ಸವ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಭಾನುವಾರ ರಾತ್ರಿ ಬೆಟ್ಟದ ಮೇಲಿನ ದೇವಾಲಯದಲ್ಲಿ ವಿಶೇಷ ಹೋಮ, ಹವನ ನಡೆಯಿತು.
ಬಾಯಿ ಬೀಗ ಹರಕೆ: ಬೆಟ್ಟ ಹತ್ತಿ, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಮಾಡಿದರು. ಇದಕ್ಕೂ ಮುನ್ನ ಹರಕೆ ಹೊತ್ತವರು ಗ್ರಾಮದ ಬಳಿ ಇರುವ ಲಕ್ಷಣ ತೀರ್ಥ ನದಿಯಲ್ಲಿ ತಲೆ ಮುಡಿಕೊಟ್ಟು ಬಾಯಿಗೆ ಬೀಗ ಹಾಕಿಕೊಂಡು ಬೆಟ್ಟ ಹತ್ತಿ, ಉರುಳುಸೇವೆ ಮಾಡಿ ಹರಕೆ ಸಲ್ಲಿಸಿದರು. ಸಂಜೆ 4.30 ಗಂಟೆಗೆ ರಥವನ್ನು ಸ್ವಸ್ಥಾನಕ್ಕೆ ಎಳೆದು ತಂದು ನಿಲ್ಲಿಸಲಾಯಿತು. ರಥೋತ್ಸವದಲ್ಲಿ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸೇರಿದಂತೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಜಾತ್ರೆಯಲ್ಲಿ ಕಂಡು ಬಂದ ವಿಶೇಷತೆಗಳು :ಜಾತ್ರೆಯಲ್ಲಿ ಬಗೆಬಗೆಯ ಹತ್ತಾರು ಸಿಹಿ ತಿಂಡಿ ಅಂಗಡಿಗಳು, ಮಹಿಳೆಯರು ಶೃಂಗಾರ ವಸ್ತುಗಳು, ಖರ್ಜೂರ, ಐಸ್ ಕ್ರೀಂ, ಕಾರಾಪುರಿ, ಆಟಿಕೆ ಅಂಗಡಿಗಳು. ಮಕ್ಕಳು ಆಟವಾಡುವ ಬಗೆ ಬಗೆಯ ಜಾಯಿಂಟ್ ವ್ಹೀಲ್‌ಗಳು ಜಾತ್ರೆಗೆ ಮೆರುಗು ನೀಡಿತು.
ಅನ್ನಸಂತರ್ಪಣೆ: ಜಾತ್ರಾ ಸಮಿತಿ ವತಿಯಿಂದ ಭಕ್ತರಿಗೆ ದಾನಿಗಳ ನೆರವಿನೊಂದಿಗೆ ಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ಊಟ ಮಾಡಿದರು. ಹುಣಸೂರಿನ ದಿ.ನಾರಾಯಣಸ್ವಾಮಿ ಅವರ ಸ್ಮರಣಾರ್ಥ ಎಂದಿನಂತೆ ಅವರ ಕುಟುಂಬದವರು ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ನೀಡಿದರು.
ಕೊಳುವಿಗೆಯಲ್ಲಿ ರಾಮಲಿಂಗೇಶ್ವರ ಉತ್ಸವ: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕೊಳುವಿಗೆಯ ಲಕ್ಷಣ ತೀರ್ಥ ನದಿ ದಂಡೆಯಲ್ಲಿರುವ ಚೋಳರ ಕಾಲದ ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ಮುಂಜಾನೆ ದೇವರ ಉತ್ಸವ, ಕೊಂಡೋತ್ಸವ ನಡೆಯಿತು. ಮದ್ಯಾಹ್ನ ಅನ್ನದಾಸೋಹ ನೆರವೇರಿತು. ಸುತ್ತ ಮುತ್ತಲಿನ ಗ್ರಾಮಸ್ಥರು ಹಾಗೂ ಕಾಡಂಚಿನ ಹಾಡಿಗಳ ಸಾವಿರಾರು ಜನರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿದ್ದರು. ಜಾತ್ರೆಗೆ ಆಗಮಿಸಿದ್ದ ಭಕ್ತರಿಗೆ ಅನ್ನದಾಸೋಹ ನಡೆಯಿತು.
ಕಲ್ಲೂರಪ್ಪನ ಬೆಟ್ಟದಲ್ಲಿ ಕೊಂಡೋತ್ಸವ: ಮಾದಳ್ಳಿಯ ಕಲ್ಲೂರಪ್ಪನಬೆಟ್ಟದಲ್ಲಿ ಕಲ್ಲುಬಂಡೆಗಳ ನಡುವೆ ವಿರಾಜಮಾನವಾಗಿರುವ ಕಲ್ಲೂರೇಶ್ವರಸ್ವಾಮಿಗೆ ಶಿವರಾತ್ರಿ ಹಬ್ಬದಂದು ವಿಶೇಷ ಪೂಜೆ ನಡೆಯಿತು. ಜಾಗರಣೆ ಅಂಗವಾಗಿ ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸೋಮವಾರ ಬೆಳಗ್ಗೆ ದೀವಟಿಕೆ ಉತ್ಸವ, ಕೊಂಡೊತ್ಸವ ನಡೆಯಿತು. ಜಾಗರಣೆಯ ಪ್ರಯುಕ್ತ ಪ್ರಸಾದ ವಿನಿಯೋಗ ಮಾಡಲಾಯಿತು. ಎಲ್ಲ ದೇವಾಲಯಗಳಿಗೂ ಶಾಸಕ ಜಿಡಿಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ಭೇಟಿ ನೀಡಿ ದೇವರ ದರ್ಶನ ಪಡೆದರು. ಎಲ್ಲೆಡೆ ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ರಾಧ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.