ಮೈಸೂರು: ಮೊಬೈಲ್‌ಗೆ ಬಂದ ಎಪಿಕೆ ಫೈಲ್ ಡೌನ್ಲೋಡ್ ಮಾಡಿದ ನಗರದ ವೃದ್ಧೆಯೊಬ್ಬರು ಬರೋಬ್ಬರಿ 24.05 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಕುವೆಂಪುನಗರ ಕೆ. ಬ್ಲಾಕ್‌ನ 73 ವರ್ಷದ ವಿಜಯ ಗೌರಮ್ಮ ಎಂಬವರೇ ಹಣ ಕಳೆದುಕೊಂಡವರು. ಇವರು ಕೊನೆಯದಾಗಿ ತಮ್ಮ ಖಾತೆಯಿಂದ 2025 ಜೂನ್‌ನಲ್ಲಿ ಹಣ ಡ್ರಾ ಮಾಡಿದ್ದರು. ಮೇ 12 ರಂದು ಬ್ಯಾಂಕ್‌ನಿಂದ ಹಣ ಪಡೆಯಲು ತೆರಳಿದ ಸಂದರ್ಭ ಬ್ಯಾಂಕ್‌ನಲ್ಲಿ ಬ್ಯಾಲೆನ್ಸ್ ಇಲ್ಲ ಎಂಬ ವಿಚಾರವನ್ನು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು.
ನಂತರ ಬ್ಯಾಂಕ್ ಸ್ಟೇಟ್‌ಮೆಂಟ್ ನೋಡಿದಾಗ ಖದೀಮರು ವಿಜಯ ಗೌರಮ್ಮ ಅವರ ಖಾತೆಯಿಂದ ಫೆ.15 ರಿಂದ ಏ.9ರವರೆಗೆ ಹಂತ ಹಂತವಾಗ ಹಣವನ್ನು ತಮ್ಮ ಖಾತೆಗೆ ವರ್ಗಾ ಯಿಸಿಕೊಂಡಿದ್ದಾರೆ. ಖದೀಮರು ಯಾವ ರೀತಿ ಇವರ ಖಾತೆಯಿಂದ ಹಣ ದೋಚಿದ್ದಾರೆ ಎಂದು ಪರಿಶೀಲಿಸಿದಾಗ ವಿಜಯ ಗೌರಮ್ಮ ಅವರ ಮೊಬೈಲ್‌ನಲ್ಲಿ ಎಪಿಕೆ ಫೈಲ್ ಡೌನ್ಲೋಡ್ ಆಗಿರುವುದು ಕಂಡುಬಂತು. ಈ ಕುರಿತು ಬುಧವಾರ ವಿಜಯ ಗೌರಮ್ಮ ನೀಡಿದ ದೂರಿನ ಮೇರೆಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.