ಸರಗೂರು ತಾಲೂಕಿನ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಮಹದೇವ ಸ್ವಾಮೀಜಿ, ಡಾ.ಟಿ.ರವಿಕುಮಾರ್, ಡಾ.ಸೋಮಣ್ಣ, ಪಿ. ರವಿ ಇತರರು ಇದ್ದರು.
- 36 ವರ್ಷಗಳ ನಂತರ ಒಂದೆಡೆ ಸಮಾಗಮಗೊಂಡ ಸ್ನೇಹಿತರು
ಸರಗೂರು: ಅಲ್ಲಿ ನಡೆದದ್ದು ಬರೋಬ್ಬರಿ 35 ವರ್ಷಗಳ ನಂತರದ ಸ್ನೇಹ ಸಮ್ಮಿಲನ... ಎಲ್ಲೋ ಅಪರೂಪಕ್ಕೆ ಸಿಗುತ್ತಿದ್ದ ಸ್ನೇಹಿತರು ಇಂದು ಒಟ್ಟಿಗೆ ಸಮಾಗಮವಾಗಿದ್ದರು. ಎಲ್ಲರ ಮುಖದಲ್ಲೂ ಆಶ್ಚರ್ಯ ಜತೆಗೆ ಬೆಟ್ಟದಷ್ಟು ಸಂತಸ.. ದಿನವೇ ಕಳೆದರೂ ಮುಗಿಯದಷ್ಟು ಮಾತು....!
ಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 1988-89 ಸಾಲಿನ ಪ್ರೌಢಶಿಕ್ಷಣ ವಿಭಾಗದ ಹಳೇ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಇಂತಹದ್ದೊಂದು ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಂತೆ ಅವರ ಖುಷಿ ಇಮ್ಮಡಿಯಾಗಿತ್ತು. ಒಬ್ಬರಿಗೊಬ್ಬರು ಆಲಿಂಗಿಸಿಕೊಂಡು ಕುಶಲೋಪರಿ ವಿಚಾರಿಸಿದರು. ಸಭೆ ಆರಂಭವಾಗುತ್ತಿದ್ದಂತೆ ಶಾಲೆಯಲ್ಲಿ ಬೋಧನೆ ಮಾಡಿದ ಶಿಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಬಾಲ್ಯದಲ್ಲಿ ವಿದ್ಯಾರ್ಥಿಗಳು ಮಾಡುತ್ತಿದ್ದ ಕುಚೇಷ್ಟೆ, ತುಂಟಾಟ ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಪಡುವಲ ವಿರಕ್ತ ಮಠದ ಮಹದೇವ ಸ್ವಾಮೀಜಿ ಸೇರಿದಂತೆ ರಾಜಕಾರಣಿ, ವೈದ್ಯರು, ಶಿಕ್ಷಕರು, ಇಂಜಿನಿಯರ್‌ಗಳು, ಕೃಷಿಕರು, ವ್ಯಾಪಾರಿಗಳು, ಉಪನ್ಯಾಸಕರು, ಇನ್ನಿತರರು ಬೆಂಗಳೂರು, ಮೈಸೂರು ಸೇರಿದಂತೆ ಹೊರ ಜಿಲ್ಲೆಗಳ ವಿವಿಧೆಡೆ ಕೆಲಸ ಮಾಡುತ್ತಿದ್ದು ಇವರೆಲ್ಲ ಒಂದೆಡೆ ಸೇರಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನೀಡಿ ಸಂಭ್ರಮಿಸಿದರು.
1988ರಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ತಾವು ಓದಿದ ಸಾಲಿನಲ್ಲಿ ಸೇರಿ ಅಕ್ಷರ ಕಳಿಸಿದ ಶಿಕ್ಷಕರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.
ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ಪಡುವಲ ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಸ್ಮರಣೀಯ ದಿನಗಳನ್ನು ಮೆಲುಕು ಹಾಕಲು ಹಳೇ ವಿದ್ಯಾರ್ಥಿಗಳು 36 ವರ್ಷಗಳ ನಂತರ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು.
ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಇದೆ. ಗುರು ಬ್ರಹ್ಮ, ಗುರು ವಿಷ್ಣು ಮಹೇಶ್ವರ ಎಂದು ಗುರುಗಳನ್ನು ಗೌರವಿಸಲಾಗುತ್ತದೆ. ಮನೆಯಲ್ಲಿ ತಂದೆ ತಾಯಿ ನಂತರ ಗುರುಗಳ ಸ್ಥಾನ ಮಹತ್ವಪೂರ್ಣವಾಗಿದೆ. ಯಾವುದೇ ರೀತಿಯ ಷರತ್ತು ಬದ್ಧತೆ ಇಲ್ಲದೇ ಪ್ರೀತಿ ತೋರುವ ತಂದೆಮ ತಾಯಿ ನಂತರ ಎರಡನೇ ಸ್ಥಾನವೇ ಗುರುವಿನದು. ನಿಷ್ಕಲ್ಮಶ ನಿಸ್ವಾರ್ಥ ಭಾವನೆಯಿಂದ ವಿದ್ಯಾರ್ಥಿಗಳನ್ನು ಸರಿ ಮಾರ್ಗದತ್ತ ಗುರು ಕೊಂಡೊಯ್ಯುತ್ತಾನೆ. ಆ ಕಾರಣದಿಂದ ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ಗುರುವಿನ ಮಾರ್ಗ ಅನುಸರಿಸಿ ಸಾಧನೆ ತೋರಲು ಸಾಧ್ಯವಾಗಿದೆ ಎಂದರು.
ಹಳೇ ವಿದ್ಯಾರ್ಥಿ ಹಾಗೂ ಮಾಜಿ ಜಿಪಂ ಸದಸ್ಯ ಪಿ.ರವಿ ಮಾತನಾಡಿದರು. ಸರ್ಕಾರಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಸೌಹಾರ್ದ ಭಾವನೆಯಿಂದ ಉತ್ತಮ ವಿದ್ಯಾರ್ಥಿಗಳ ಸಮೂಹ ಸಮಾಜಕ್ಕೆ ನೀಡಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಿಕ್ಷಕರಾದ ವಿ.ಜಿ ಬಿದರಗುಂದಿ, ಕೆ.ಟಿ.ಪ್ರಸನ್ನಕುಮಾರ್, ಸಾ.ಚ.ಮಹದೇವನಾಯಕ, ಸಿ.ಚಿಕ್ಕನಾಯಕ, ಎಲ್.ಎಂ.ನಿಂಗನಾಯಕ, ಎಂ.ಎಚ್.ಮಂಗಳಗೌರಮ್ಮ, ಸಿ.ಸುಧಾ, ಕೆ.ಮಂಜುಳಾ, ಗೀತ ರತ್ನಾ, ಗಿರಿಜಾ, ರಾಮಣ್ಣ, ರಫೀಕ್ ಅಹಮದ್, ಅನಂತಮೂರ್ತಿ, ತಿಮ್ಮೇಗೌಡ, ಜವರನಾಯಕ, ಹಳೇ ವಿದ್ಯಾರ್ಥಿಗಳಾದ ಡಾ.ಸೋಮಣ್ಣ, ಬಾಬು, ಡಾ. ಟಿ. ರವಿಕುಮಾರ್, ಎಸಿಪಿ ರಾಜಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪರಶಿವಮೂರ್ತಿ, ಕೃಷ್ಣಕುಮಾರ್, ಇದ್ದಾಯತ್, ರಮೇಶ್, ಗೋವಿಂದರಾಜು, ಎಸ್.ಆರ್.ಜಗದೀಶ್, ರೇಖಾ, ರೇಣುಕಾ, ಚಂದ್ರ ಕುಮಾರ್, ಬಿಇಒ ಮಹದೇವ, ಮಹದೇವಶಟ್ಟಿ, ಪ್ರಸನ್ನ, ಕುಮಾರ್, ಸರಗೂರು ಕೃಷ್ಣ, ಜಿಪಂ ಇಂಜಿನಿಯರ್ ವಸಂತಕುಮಾರ್, ಮಹದೇವ, ಅಶೋಕ್ , ಸಿದ್ದಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.