ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು. ಹಂಪಾ ನಾಗರಾಜಯ್ಯ, ನಿರ್ಮಲಾ ಮಠಪತಿ, ಡಾ.ಎಂ.ಡಿ.ಸುದರ್ಶನ್, ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರೊ.ಎಸ್.ಡಿ. ಶಶಿಕಲಾ ಇತರರು ಇದ್ದರು. 
ಮೈಸೂರು

ಹೊಸಗನ್ನಡಕ್ಕೆ ಹಳಗನ್ನಡವೇ ಮೂಲ ಬೇರು: ನಾಡೋಜ ಡಾ. ಹಂಪ ನಾಗರಾಜಯ್ಯ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಹಳೆಗನ್ನಡ ಕಾವ್ಯಗಳು ಕಠಿಣವಾದವುಗಳಲ್ಲ, ಅವುಗಳನ್ನು ಓದುತ್ತಾ ಹೋದಂತೆ ವ್ಯಾಖ್ಯಾನಗಳು ಸುಲಭವಾಗಿ ಅರ್ಥವಾಗುತ್ತವೆ
  • ಹಳಗನ್ನಡದ ಓದು, ಅಭ್ಯಾಸ ಮತ್ತು ಬೋಧನೆ ಕಡಿಮೆಯಾಗುತ್ತಿದೆ. ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಅತ್ಯಂತ ಅಗತ್ಯ
ಮೈಸೂರು:ಹೊಸಗನ್ನಡದ ಹೂವುಗಳು ಕಂಗೊಳಿಸುತ್ತಿದ್ದರೆ ಅದಕ್ಕೆ ಹಳಗನ್ನಡವೇ ಮೂಲ ಬೇರು ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಬಣ್ಣಿಸಿದರು.
ಮೈಸೂರು ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹಳಗನ್ನಡ ಓದು ಮತ್ತು ವ್ಯಾಖ್ಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಳೆಗನ್ನಡ ಕಾವ್ಯಗಳು ಕಠಿಣವಾದವುಗಳಲ್ಲ, ಅವುಗಳನ್ನು ಓದುತ್ತಾ ಹೋದಂತೆ ವ್ಯಾಖ್ಯಾನಗಳು ಸುಲಭವಾಗಿ ಅರ್ಥವಾಗುತ್ತವೆ. ಹಳೆಗನ್ನಡದ ಪದಗಳ ಮೇಲೆ ಹೊಸಗನ್ನಡ ಅವಿಷ್ಕಾರಗಳು ನಡೆದಿವೆ. ಹಾಗಾಗಿ ಹೊಸಕನ್ನಡಕ್ಕೆ, ಹಳೆಗನ್ನಡವೇ ಬೇರು ಎಂದು ವಿಶ್ಲೇಷಿಸಿದರು.
ಇತ್ತೀಚಿನ ದಿನಗಳಲ್ಲಿ ಹಳಗನ್ನಡದ ಓದು, ಅಭ್ಯಾಸ ಮತ್ತು ಬೋಧನೆ ಕಡಿಮೆಯಾಗುತ್ತಿದೆ. ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಅತ್ಯಂತ ಅಗತ್ಯವಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಾಪಕರು, ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಬೋಧಿಸುವಾಗ ಕವಿ ಬಳಸಿರುವ ಛಂದಸ್ಸು ಚಂಪಕಮಾಲೆ, ಉತ್ಪಲಮಾಲೆ, ಭಾಷೆಯ ತಿಳಿವಳಿಕೆ ಇಟ್ಟುಕೊಂಡು ಬೋಧಿಸಬೇಕು. ಅದಕ್ಕೆ ನಿರಂತರ ಅಭ್ಯಾಸವೂ ಬೇಕು ಎಂದು ಸಲಹೆ ನೀಡಿದರು.
ಮಾನವನ ಜೀವನದಲ್ಲಿ ವೈರಾಗ್ಯ ಹಾಗೂ ಮೋಕ್ಷದ ಹಾದಿ ತಲುಪುವ ಮುನ್ನ ಭೋಗ ಜೀವನದ ಅನುಭವದ ಮಹತ್ವವನ್ನು ಕವಿ ಪಂಪ, ತನ್ನ ಆದಿಪುರಾಣದಲ್ಲಿ ವರ್ಣಿಸಿರುವ ರೀತಿಯನ್ನು ವರ್ಣಾತೀತ ಎಂದರು.
ಸಂಸ್ಕೃತದ ಆದಿಪುರಾಣವನ್ನು ಕನ್ನಡಕ್ಕೆ ತಂದಾಗ ಪಂಪ ಅದನ್ನು ಕೇವಲ ಅನುವಾದ ಮಾಡದೆ, ಕನ್ನಡದ ಜಾಯಮಾನಕ್ಕೆ ಮತ್ತು ದೇಶಿಯ ಬದುಕಿಗೆ ಅನುಗುಣವಾಗಿ ಮರುಸೃಷ್ಟಿ ಮಾಡಿದ್ದಾರೆ. ಹೀಗಾಗಿ ಪಂಪನ ಆದಿಪುರಾಣವು ವಿಕ್ರಮಾರ್ಜುನ ವಿಜಯಕ್ಕಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲದ ಅಪೂರ್ವ ಕಾವ್ಯವಾಗಿದೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಇಂದಿನ ದಿನಗಳಲ್ಲಿ ಅಧ್ಯಾಪಕರು ಪರೀಕ್ಷೆಗಾಗಿ ಪಾಠ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಿದ್ದಾರೆ. ಪರಿಣಾಮವಾಗಿ ಭಾಷೆ, ವಿಷಯ ಹಾಗೂ ಸಾಹಿತ್ಯದ ಮೇಲಿರುವ ನೈಜ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.
ಇದರಿಂದ ಶಿಕ್ಷಣ ವ್ಯವಸ್ಥೆ, ಅಳವಾದ ಜ್ಞಾನ ಯಾವಮಟ್ಟಕ್ಕೆ ಇಳಿಯತ್ತಿದೆ. ಅಂಕಗಳಿಸುವುದಕ್ಕೆ ಮಾತ್ರ ಶಿಕ್ಷಣ, ಪರೀಕ್ಷೆ ಎನ್ನುವ ಸ್ಥಿತಿ ಉಂಟಾಗಿದೆ.ಇದಕ್ಕೆ ಕಾರಣರಾರು ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಬೆಳೆದಿದೆ ಎನ್ನುವುದಾದರೆ ಅದಕ್ಕೆ ಉಪನ್ಯಾಸಕರು ಮತ್ತು ಶಿಕ್ಷಕರೇ ಪ್ರಮುಖ ಕಾರಣ. ಯಾರು ತರಗತಿಯಲ್ಲಿ ಆಸಕ್ತಿದಾಯಕವಾಗಿ ಬೋಧನೆ ಮಾಡುತ್ತಾರೋ, ವಿದ್ಯಾರ್ಥಿಗಳು ಸಹಜವಾಗಿಯೇ ಭಾಷೆಯತ್ತ ಆಕರ್ಷಿತರಾಗುತ್ತಾರೆ ಎಂದರು.
ಡಿಜಿಟಲೀಕರಣ ಹಾಗೂ ತಾಳೆಗರಿಗಳ ಸಂರಕ್ಷಣೆ ನಡೆಯುತ್ತಿದ್ದರೂ, ಅವುಗಳನ್ನು ಓದಿ ಅರ್ಥೈಸಿಕೊಳ್ಳುವ ನಿಪುಣರ ಹಾಗೂ ಸಂಶೋಧಕರ ಕೊರತೆ ಇದೆ. ಮುಂದಿನ ಪೀಳಿಗೆಗೆ ಹಳಗನ್ನಡದ ಅರಿವು ಮೂಡಿಸದಿದ್ದರೆ ಸಾಹಿತ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಎಲ್ಲ ವಿಚಾರಗಳನ್ನು ಸುದೀರ್ಘವಾಗಿ ಹೇಳುವ ಬದಲು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತವಾಗಿ ಹಾಗೂ ಪರಿಣಾಮಕಾರಿಯಾಗಿ ತಿಳಿಸುವುದೇ ಹಳಗನ್ನಡದ ಶಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕರು ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರೊ.ಎಸ್.ಡಿ. ಶಶಿಕಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.