ಕುಕ್ಕರಹಳ್ಳಿ ಕೆರೆ ಬಳಿ ನಿರ್ಮಿಸಲು ಉದ್ದೇಶಿರುವ ರೈಲ್ವೆ ಅಂಡರ್‌ಪಾಸ್‌ಗೆ ಸಂಬಂಧಿಸಿದ ಸ್ಥಳವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲಿಸಿದರು. ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳು ಇದ್ದರು.
- ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಿಡಿ
ಮೈಸೂರು: ಚಾಮುಂಡಿಬೆಟ್ಟದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಭಾವನೆಗೂ ಸ್ಪಂದಿಸುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ ವಿಚಾರ ನ್ಯಾಯಾಲಯದಲ್ಲಿದೆ. ಬೆಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ಆಡಳಿತ ಹಾಗೂ ಅಲ್ಲಿನ ನಿವಾಸಿಗಳ ಮಾತಿಗೂ ಪ್ರಾಧಿಕಾರದ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ. ಸ್ಥಳೀಯ ನಿವಾಸಿಗಳ ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲೂ ಅಧಿಕಾರಿಗಳ ದರ್ಬಾರ್ ನಡೆಯುತ್ತಿದ್ದು, ಜನಪ್ರತಿನಿಧಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದೂ ದೂರಿದರು.
ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯರ ತವರು ಜಿಲ್ಲೆಯಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಜನಪ್ರತಿನಿಧಿಗಳ ಮಾತಿಗೆ ಅಧಿಕಾರಿಗಳು ಕಿವಿಕೊಡುತ್ತಿಲ್ಲ. ಜನಪ್ರತಿನಿಧಿಗಳ ಮನವಿಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು
ಸಿಗ್ನಲ್ ಲೈಟ್ ಅಳವಡಿಕೆಗೆ ಆಕ್ಷೇಪ
ಮೈಸೂರು ನಗರದ ವಿವಿಧೆಡೆ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದರು.
ನಗರದ ಕುಕ್ಕರಹಳ್ಳಿ ಕೆರೆ ಬಳಿ ನಿರ್ಮಿಸಲು ಉದ್ದೇಶಿರುವ ರೈಲ್ವೆ ಅಂಡರ್‌ಪಾಸ್‌ಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈಸೂರಿನ ಹಲವೆಡೆ ಎಲ್ಲೆಂದರಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಈ ರೀತಿ ಅವೈಜ್ಞಾನಿಕವಾಗಿ ಇವುಗಳನ್ನು ಅಳವಡಿಸಲು ಯಾರು ಅನುಮತಿ ನೀಡಿದರೋ ಗೊತ್ತಿಲ್ಲ. ಕೆಲವೇ ಮೀಟರ್ ಅಂತರದಲ್ಲಿ ಸಿಗ್ನಲ್ ಲೈಟ್ ಅಳವಡಿಸಿರುವ ಕಾರಣ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಸಂಚಾರಕ್ಕೂ ಅನಗತ್ಯವಾಗಿ ವಿಳಂಬವೂ ಆಗುತ್ತಿದೆ. ಜನ ಸಾಮಾನ್ಯರಿಗೂ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಅಂಡರ್ ಪಾಸ್
ಕುಕ್ಕರಹಳ್ಳಿ ಕೆರೆ ಬಳಿಯ ಜಂಕ್ಷನ್‌ನಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ವೇಳೆ ಪರಿಸರಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಕಾಮಗಾರಿ ನಡೆಯುವ ಸ್ಥಳದಲ್ಲಿರುವ ಎಲ್ಲ ಮರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಮೈಸೂರು-ಬೆಂಗಳೂರು ಹೆದ್ದಾರಿ ಸೇರುವ ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಪ್ಲೈಓವರ್ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ಭಾಗದಲ್ಲಿರುವ ಸುಮಾರು 40 ಮರಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತದೆ. ಇನ್ನು ಮುಂದೆ ಯಾವುದೇ ಕಾಮಗಾರಿ ನಡೆಸಿದರೂ ಪರಿಸರಕ್ಕೆ ಮಾರಕವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ವಸಂತ ಮಹಲ್ ಅಭಿವೃದ್ಧಿಗೆ ಕ್ರಮ
ಸಂಸದ ಯದುವೀರ್ ಅವರು ವಸಂತ ಮಹಲ್‌ನಲ್ಲಿರುವ ಡಯಟ್ ಮತ್ತು ಬಿಎಡ್ ಕಾಲೇಜಿಗೂ ಭೇಟಿ ನೀಡಿ, ಕಟ್ಟಡದ ಸ್ಥಿತಿಗತಿ ಪರಿಶೀಲಿಸಿದರು.
ಸೌಲಭ್ಯಗಳ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಅಲ್ಲಿಯ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಭೆ ಕರೆದು ಆಗಬೇಕಾಗಿರುವ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್, ಬಿಎಡ್ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ, ಡಯಟ್‌ನ ಪ್ರಾಂಶುಪಾಲ ನಾಗರಾಜಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯ್ ಕುಮಾರ್, ಪ್ರವಾಚಕರಾದ ಅಮಿತ್, ಲಕ್ಷ್ಮೀಪತಿ, ರಾಜಶೇಖರ್ ಇತರರಿದ್ದರು