ಮೈಸೂರು: ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗೆ ಮೈಸೂರಿನ 3ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 4 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಕೆ.ಕೆಂಪೇಗೌಡ ಶಿಕ್ಷೆಗೆ ಗುರಿಯಾದವರು. ಶಿಕ್ಷಕ ವಸಂತಕುಮಾರ್ ಅವರಿಂದ 15 ಸಾವಿರ ರೂ. ಲಂಚ ಸ್ವೀಕರಿಸುವಾಗ ಕೆಂಪೇಗೌಡ ಸಿಕ್ಕಿ ಬಿದ್ದಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ವಸಂತಕುಮಾರ್ ಅವರ ಹೆಸರನ್ನು ಮುಂಬಡ್ತಿ ಪಡೆಯಲು ಪರಿಗಣಿಸುವ ಶ್ರೇಣಿ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮೊದಲಯನೇಯದಾಗಿ ಮಾಡಲು ಕೆಂಪೇಗೌಡ ಅವರು 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರ ವಿರುದ್ಧ ವಸಂತ ಕುಮಾರ್ ಅವರು ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಕಳೆದ 2018ರ ಜೂನ್ 18ರಂದು ವಸಂತ ಕುಮಾರ್ ಅವರು ಲಂಚದ ಹಣವನ್ನು ಕೆಂಪೇಗೌಡ ಅವರಿಗೆ ನೀಡುವಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಈ ಸಂಬಂಧ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಗುರುರಾಜ್ ಸೋಮಕ್ಕಳವರ್, ಅಪರಾಧಿಗೆ ನಾಲ್ಕು ವರ್ಷ ಶಿಕ್ಷೆಯೊಂದಿಗೆ 20 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಅಭಿಯೋಜಕ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.