ಹನಗೋಡಿನಲ್ಲಿ ತುಂಬಿ ಹರಿಯುತ್ತಿರುವ ಲಕ್ಷ್ಮಣತಿರ್ಥ ನದಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಬಾಗಿನ ಅರ್ಪಿಸಿದರು. ಸುರೇಂದ್ರ ಸತೀಶ್ ಪಾಪಣ್ಣ, ಬಸವರಾಜ್, ಸುಭಾಷ್, ಮಹೇಶ್ ಇತರರು ಇದ್ದರು. 
ಮೈಸೂರು

ಹನಗೋಡು ಅಣೆಕಟ್ಟೆ ಭರ್ತಿ ಶಾಸಕ ಬಾಗಿನ ಅರ್ಪಣೆ

ಹನಗೋಡು: ಲಕ್ಷ್ಮಣತಿರ್ಥ ನದಿಗೆ ನಿರ್ಮಿಸಿರುವ ಹನಗೋಡು ಅಣೆಕಟ್ಟೆ ತುಂಬಿರುವ ಹಿನ್ನೆಲೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಶನಿವಾರ ಬಾಗಿನ ಅರ್ಪಿಸಿದ್ದಲ್ಲದೆ, ಅಣೆಕಟ್ಟೆಯಿಂದ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಈ ಬಾರಿ ವಾಡಿಕೆ ಮಳೆ ಕಡಿಮೆಯಾಗಿದೆ. ಇದರಿಂದ ನದಿಯಲ್ಲಿ ನೀರಿನ ಹರಿವು ತಡವಾಗಿ ಆರಂಭವಾಯಿತು. ಮೂರು ದಿನಗಳಿಂದ ಮಳೆ ಕಡಿಮೆಯಾಗಿದೆ. ಇದೀಗ ನದಿಯಿಂದ ಕಾಲುವೆಗೆ ನೀರು ಹರಿಸಲಾಗಿದ್ದು, ಮೊದಲು ಕೆರೆಕಟ್ಟೆಗಳನ್ನು ತುಂಬಿಸುವಂತೆ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ ಎಂದರು.
ಕಾಲುವೆಗಳಲ್ಲಿ ಹೂಳು ತುಂಬಿದ್ದು, ನೀರು ಸರಾಗವಾಗಿ ಹರಿದು ಹೋಗಲು ತೊಂದರೆಯಾಗುತ್ತಿರುವ ಬಗ್ಗೆ ರೈತರು ಗಮನ ಸೆಳೆದಾಗ, ಸರ್ಕಾರ ಕೇವಲ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು, ತಕ್ಷಣಕ್ಕೆ ಅಗತ್ಯವಿರುವ ಕಡೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಏತ ನೀರಾವರಿ ಮೂಲಕ ನೀರು:ತಾಲೂಕಿನಲ್ಲಿ 14 ಏತನೀರಾವರಿ ಯೋಜನೆಗಳಿದ್ದು, ಇದೀಗ ಮೂರು ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಎರಡು ಕಡೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಯಾವ ಇಲಾಖೆಗೂ ಅನುದಾನ ನೀಡಿಲ್ಲ, ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಸೋಮವಾರದಿಂದ ಎಲ್ಲ 14 ಏತನೀರಾವರಿ ಯೋಜನೆಗಳ ಮೂಲಕ ಏಕ ಕಾಲದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಿಸಲಾಗುವುದು ಎಂದರು.
ತಡೆಗೋಡೆ ನಿರ್ಮಾಣಕ್ಕೆ ಸೂಚನೆ: ಹನಗೋಡು ಅಣೆಕಟ್ಟೆಯ ಒಂದು ಭಾಗದ ಬೂರಗದ ಮರವಿದ್ದು, ಅಣೆಕಟ್ಟೆಯ ತಡೆಗೋಡೆ ಕಲ್ಲುಗಳು ಜಾರುತ್ತಿರುವ ಹಾಗೂ ಅಣೆಕಟ್ಟೆಯ ಕೆಳ ಭಾಗದಲ್ಲಿ ನಿರ್ಮಿಸಿದ್ದ ತಡೆಗೋಡೆ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಕಾರಣ ನಾಲ್ಕೈದು ವರ್ಷಗಳಿಂದ ಮಣ್ಣು ಕೊಚ್ಚಿ ಹೊಂಡವಾಗುತ್ತಿದೆ. ನದಿಯ ಏರಿ ಹಲವು ವರ್ಷಗಳಿಂದ ನಿರ್ವಹಣೆ ಮಾಡದ ಪರಿಣಾಮ ಗಿಡಮರ ಬೆಳೆದು ನಿಂತಿದ್ದು, ಹುಲಿ, ಚಿರತೆಗಳು ಆವಾಸ ಸ್ಥಾನವಾಗಿದೆ ಎಂದು ಸ್ಥಳೀಯರು ಗಮನ ಸೆಳೆದರು. ಈ ಬಗ್ಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸುವಂತೆ ಕಾವೇರಿ ನೀರಾವರಿ ನಿಗಮದ ಇಇ ಕೆ.ಎಂ.ಆಶಾ, ಹಾರಂಗಿ ಹನಗೋಡು ವಿಭಾಗದ ಎಇಇ ನವೀನ್ ಅವರಿಗೆ ಶಾಸಕರು ನಿರ್ದೇಶನ ನೀಡಿದರು. ಈ ವೇಳೆ ಹಲವಾರು ಗ್ರಾಮಗಳಿಂದ ಆಗಮಿಸಿದ ಜನರ ಸಮಸ್ಯೆಗಳನ್ನು ಆಲಿಸಿದರು.
ಜು.18ಕ್ಕೆ ಸಭೆ : ಹನಗೋಡು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಾರದಿಂದ ನೂರಾರು ರೈತರಿಗೆ ಬೆಳೆ ಸಾಲ ನೀಡದೆ ಸತಾಯಿಸುತ್ತಿದ್ದು, ಕೂಡಲೇ ರೈತರಿಗೆ ಕೃಷಿ ಸಾಲ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಕೆಲ ರೈತರು ಮನವಿ ಮಾಡಿದರು. ಈ ಸಂಬಂಧ ಜು.18ಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಸಭೆ ಕರೆದಿದ್ದು, ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಂ ಬಿ.ಸುರೇಂದ್ರ, ಕಾರ್ಯದರ್ಶಿ ಸತೀಶ್ ಪಾಪಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್, ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ, ಮಾಜಿ ಅಧ್ಯಕ್ಷರಾದ ಬಸವಲಿಂಗಯ್ಯ, ಅಸ್ವಾಳು ಕೆಂಪೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಕಿರಂಗೂರು ಬಸವರಾಜು, ಮುದಗನೂರು ಸುಭಾಷ್, ಹಾರಂಗಿ ನೀರು ಬಳಕೆದಾರರ ಸಂಘದ ನಿರ್ದೇಶಕ ಕಿರಣ್‌ಕುಮಾರ್, ಮುಖಂಡರಾದ ದಾರಾ ಮಹೇಶ್, ಅಜ್ಜಣ್ಣ, ನಟರಾಜ್, ಶೇಖರೇಗೌಡ, ರಾಜೇಗೌಡ, ಪುಟ್ಟಸ್ವಾಮಪ್ಪ, ಹೊನ್ನೇನಹಳ್ಳಿ ಸೀನಪ್ಪ, ಬೈರೇಗೌಡ, ಶಿವರಾಜು, ಮಾದೇಗೌಡ, ವಕೀಲ ಗಣೇಶ್, ನಿಂಗರಾಜ್ ಮಲ್ಲಾಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಂಗೂರು ಸ್ವಾಮಿ,ದೊಡ್ಡಹೆಜ್ಜೂರು ನಾಗೇಶ್ ಇತರರು ಇದ್ದರು.