ಓಡಿಪಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕ್ಯಾನ್ಸರ್ ಪೀಡಿತರಿಗೆ ಸಹಾಯ ಧನ ವಿತರಿಸುವ ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ಉದ್ಘಾಟಿಸಿದರು. ಫಾದರ್ ಜಾನ್ ಫರ್ನಾಂಡೀಸ್, ಡಾ.ಪಿ.ಪ್ರದೀಪ್, ಮಹದೇವಸ್ವಾಮಿ, ಸ್ಟಾೃನಿ ಲೋಬೋ, ರತ್ನಾ ಹಾಗೂ ಇತರರು ಇದ್ದರು.
ಮೈಸೂರು: ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಓಡಿಪಿ ಸಂಸ್ಥೆ ವತಿಯಿಂದ ಸಂಘಮಿತ್ರ ಸಂಸ್ಥೆಯ ಸಹಯೋಗದಲ್ಲಿ 80 ಕ್ಯಾನ್ಸರ್ ಪೀಡಿತರಿಗೆ 7.17 ಲಕ್ಷ ರೂ. ಸಹಾಯ ಧನವನ್ನು ಸಂಸ್ಥೆಯ ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ವಿತರಣೆ ಮಾಡಿದರು.
ನಗರದ ಓಡಿಪಿ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಆಯ್ಕೆಯಾದ 80 ವಿವಿಧ ಹಂತಗಳ ಬಡ ಕ್ಯಾನ್ಸರ್ ರೋಗಿಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು.
ಕ್ಯಾನ್ಸರ್‌ತಜ್ಞ ಡಾ.ಪಿ.ಪ್ರದೀಪ್ ಮಾತನಾಡಿ, ಕ್ಯಾನ್ಸರ್ ರೋಗ ಬಂದವರು ಭಯ ಪಡಬಾರದು ಮತ್ತು ಅವರನ್ನು ಕುಟುಂಬ ವರ್ಗದವರು ಹಾಗೂ ಸಮಾಜ ನಿರ್ಲಕ್ಷೃ ಮಾಡಬಾರದು. ಪ್ರಪಂಚದಲ್ಲಿ ಪ್ರತಿ ವರ್ಷ 3 ಕೋಟಿ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ವೇಗ ನೋಡಿದರೆ ಮುಂದೊಂದು ದಿನ ಕ್ಯಾನ್ಸರ್ ಎನ್ನುವುದು ಸಾಮಾನ್ಯ ಕಾಯಿಲೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿನ ಆಧುನಿಕ ಚಿಕಿತ್ಸಾ ಪದ್ಧತಿಯಲ್ಲಿ ಕ್ಯಾನ್ಸರ್ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸಲು ಸಾಧ್ಯ. ಇದಕ್ಕಾಗಿ ನಿಯಮಿತವಾಗಿ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್ ರೋಗಕ್ಕೆ ಅಲೋಪತಿ ಚಿಕಿತ್ಸೆಯೇ ಉತ್ತಮ. ಇತರೆ ಚಿಕಿತ್ಸಾ ಪದ್ಧತಿಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ, ಹೀಗಾಗಿ ಇಂತಹ ಚಿಕಿತ್ಸೆಗಳ ಬಗ್ಗೆ ಎಚ್ಚರಿಕೆ ಅಗತ್ಯ ಎಂದರು.
ಓಡಿಪಿ ಸಂಸ್ಥೆ ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ಮಾತನಾಡಿ, ವಿವಿಧ ದಾನಿಗಳು ಮತ್ತು ಸಂಘಮಿತ್ರ ಸಂಸ್ಥೆಯ ಸಹಯೋಗದೊಂದಿಗೆ ಕ್ಯಾನ್ಸರ್ ಪೀಡಿತರಿಗೆ ಸಹಾಯ ಧನ ನೀಡಲಾಗಿದೆ. ರೋಗಿಗಳು ಯಾವುದೇ ರೀತಿಯಲ್ಲೂ ಭಯ ಪಡದೆ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಹಾರೈಸಿದರು.
ಓಡಿಪಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಫಾದರ್ ಜಾನ್ ಫರ್ನಾಂಡೀಸ್, ಸಂಘಮಿತ್ರ ಮೈಸೂರು ವಿಭಾಗದ ವಲಯ ವ್ಯವಸ್ಥಾಪಕ ಮಹದೇವಸ್ವಾಮಿ, ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸ್ಟಾೃನಿ ಲೋಬೋ, ಸಂಯೋಜಕಿ ರತ್ನಾ ಹಾಗೂ ಇತರರು ಇದ್ದರು.