ಹುಣಸೂರು ತಾಲೂಕು ಮರದೂರು ಗ್ರಾ.ಪಂ.ವ್ಯಾಪ್ತಿಯ ಹಗರನಹಳ್ಳಿಯಲ್ಲಿ ಜಾಬ್ ಕಾರ್ಡ್ ಮೇಳ ಮತ್ತು ರೋಜ್ಗಾರ್ ದಿವಸ್ ಆಚರಣೆಯನ್ನು ಗ್ರಾಮದ ಮಹಿಳಾ ಪದಾಧಿಕಾರಿಗಳ ಸಹಯೋಗದಲ್ಲಿ ನಡೆಸಲಾಯಿತು. ಪಿಡಿಒ ಧರ್ಮೇಂದ್ರ, ಐಇಸಿ ಸಂಯೋಜಕಿ ಪುಷ್ಪಾವತಿ, ಶಕುಂತಲಾ, ಮಂಜುಳಾ ಇತರರಿದ್ದರು. 
ಮೈಸೂರು

ಜಾಬ್ ಕಾರ್ಡ್ ಪಡೆದು ನಿಮ್ಮೂರಲ್ಲೇ ಉದ್ಯೋಗ ಪಡೆಯಿರಿ

ಮರದೂರು ಗ್ರಾಪಂ ಪಿಡಿಒ ಧರ್ಮೇಂದ್ರ ಸಲಹೆ

ಹುಣಸೂರು: ವಿಬಿಜಿ ರಾಮ್‌ಜಿ ಯೋಜನೆಯಡಿ ಹೊಸದಾಗಿ ಜಾಬ್ ಕಾರ್ಡ್‌ಗೆ ಪಡೆದುಕೊಳ್ಳುವ ಮೂಲಕ ನಿಮ್ಮೂರಲ್ಲೇ ಉದ್ಯೋಗ ಪಡೆಯಿರಿ ಎಂದು ಪಿಡಿಒ ಧಮೇರ್ಂದ್ರ ಕೋರಿದರು.
ತಾಲೂಕಿನ ಮರದೂರು ಗ್ರಾಮ ಪಂಚಾಯಿತಿಯ ಹಗರನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಾಬ್ ಕಾರ್ಡ್ ಮೇಳ ಮತ್ತು ರೋಜ್ಗಾರ್ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಬಿಜಿ ರಾಮ್‌ಜಿ ಯೋಜನೆಯಡಿ ಜಾಬ್ ಕಾರ್ಡ್ ಪಡೆದುಕೊಂಡಿಲ್ಲದ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಮೂನೆ 1ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸದಾಗಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಆ.15ರಿಂದ ಸೆ.15ರವರೆಗೆ ಜಾಬ್ ಕಾರ್ಡ್ ಮೇಳ ನಡೆಸಲಾಗುತ್ತಿದ್ದು, ಇನ್ನು ಜಾಬ್ ಕಾರ್ಡ್ ಹೊಂದಿಲ್ಲದ ಕೂಲಿಕಾರರು ಪಂಚಾಯಿತಿಗೆ ಭೇಟಿ ನೀಡಿ ಹೊಸದಾಗಿ ಜಾಬ್ ಕಾರ್ಡ್ ಪಡೆದುಕೊಳ್ಳಿರಿ. ಗ್ರಾಮೀಣರು ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಿದರು.
ತಾಲೂಕು ಐಇಸಿ ಸಂಯೋಜಕಿ ಪುಷ್ಪಾವತಿ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ವಿಬಿಜಿ ರಾಮ್‌ಜಿ ಯೋಜನೆಯಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ವೈಯಕ್ತಿಕ ಅಭಿವೃದ್ಧಿ ಯೋಜನೆಗಳಿಗೂ ವಿಬಿಜಿ ರಾಮ್‌ಜಿ ಯೋಜನೆಯನ್ನು ಉಪಯೋಗಿಸಬಹುದಾಗಿದೆ.ಈ ಯೋಜನೆಯಲ್ಲಿ ಕೆಲಸ ಪಡೆಯಲು ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಮೂಲಕ ನಮೂನೆ 6ರಲ್ಲಿ ಬೇಡಿಕೆ ಸಲ್ಲಿಸಿರಿ. ನರೇಗಾ ಯೋಜನೆಯು ಮಾರ್ಪಡಾಗಿದ್ದು, ವಿಬಿಜಿ ರಾಮ್‌ಜಿ ಯೋಜನೆಯಾಗಿ ಜಾರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಬಡ ಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಭದ್ರತೆಗಾಗಿ ಕೂಲಿಕಾರರ ಕೂಲಿ ಮೊತ್ತವನ್ನು 382 ರೂ.ಗಳಿಗೆ ಹೆಚ್ಚಿಸಲಾಗಿದ್ದು, 125 ಮಾನವ ದಿನಗಳ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಕುಟುಂಬಕ್ಕೆ 47,750 ರೂ. ದೊರೆಯಲಿದ್ದು, ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಯೋಜನೆ ಸಹಕಾರಿಯಾಗಲಿದೆ ಎಂದರು.
ಕರ ವಸೂಲಿಗಾರ ವರುಣ್, ಡಿಇಒ ಮಂಜುಳಾ, ಹೇಮರಾಜು, ಧನಂಜಯ್, ಗ್ರಾಪಂ ಮಾಜಿ ಅಧ್ಯಕ್ಷೆ ಶಕುಂತಲಾ, ಸಂಘದ ಮಹಿಳಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.