ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ) ನೇತೃತ್ವದಲ್ಲಿ ಭಾನುವಾರ ಯಾದವಗಿರಿಯ ಚೆಲುವಾಂಬ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಿತು.
- ಬಿಲ್ ಮಂಡಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಪ್ರತಿಭಟನೆ
ಸರ್ಕಾರಿ ಉದ್ಯಾನಗಳ ಸಂರಕ್ಷಣಾ ಕಾಯ್ದೆ-1975ಕ್ಕೆ ತಿದ್ದುಪಡಿ ತಂದು, ಉದ್ಯಾನಗಳ ಜಾಗದ ಒಂದು ಭಾಗವನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಉಪಯುಕ್ತತಾ ಯೋಜನೆಗಳಿಗೆ ಬಳಸಲು ಅವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನಗರದ ಚೆಲುವಾಂಬ ಪಾರ್ಕ್‌ನಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು.
ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ) ನೇತೃತ್ವದಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಸ್ಥಳೀಯ ನಿವಾಸಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಸ್ತುತ ಕಾಯ್ದೆಯಡಿ ಉದ್ಯಾನವನಗಳ ನಿರ್ವಹಣೆಗಾಗಿ ಶೇ.5ರಷ್ಟು ಜಾಗವನ್ನು ಬಳಸಲು ಅವಕಾಶವಿದೆ. ಆದರೆ ಇದೀಗ ಇದೇ ಶೇ.5ರಷ್ಟು ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಹಾಗೂ ಉಪಯುಕ್ತತಾ ಯೋಜನೆಗಳಿಗೆ ಬಳಸಲು ಸರ್ಕಾರ ಮುಂದಾಗಿರುವುದು ಉದ್ಯಾನವನಗಳ ನಾಶಕ್ಕೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಹಿತದ ಹೆಸರಿನಲ್ಲಿ ರಾಜ್ಯಾದ್ಯಂತ ಉದ್ಯಾನಗಳ ಜಾಗವನ್ನು ಬೇರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವುದು ಉದ್ಯಾನಗಳ ಸಂರಕ್ಷಣೆಗೆ ಅಪಾಯ ತಂದೊಡ್ಡಲಿದೆ. ಇದು ಮುಂದಿನ ದಿನಗಳಲ್ಲಿ ಉದ್ಯಾನವನಗಳ ಒತ್ತುವರಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗೋಮಾಳ, ಕೆರೆಗಳು, ರಾಜಕಾಲುವೆಗಳು, ಆಟದ ಮೈದಾನಗಳು ಹಾಗೂ ಸಾರ್ವಜನಿಕ ಸ್ಥಳಗಳು ಈಗಾಗಲೇ ಒತ್ತುವರಿಗೆ ಒಳಗಾಗಿವೆ. ಇದೀಗ ಸರ್ಕಾರದ ಕಣ್ಣು ಉದ್ಯಾನಗಳ ಮೇಲೂ ಬಿದ್ದಿದೆ. ಉದ್ಯಾನಗಳ ಜಾಗವನ್ನು ಬಳಸಿಕೊಂಡು ಹಣ ಮಾಡುವ ಉದ್ದೇಶದಿಂದ ದೊಡ್ಡ ಮಾಫಿಯಾ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಒಂದು ಇಂಚು ಉದ್ಯಾನದ ಜಾಗವನ್ನೂ ಮಾರಾಟ ಮಾಡಲು ಅಥವಾ ಒತ್ತುವರಿ ಮಾಡಲು ಅವಕಾಶ ನೀಡುವುದಿಲ್ಲ. ಈ ಹೋರಾಟಕ್ಕೆ ಸಾರ್ವಜನಿಕರು ಒಗ್ಗಟ್ಟಾಗಿ ಕೈಜೋಡಿಸಿದ್ದಾರೆ ಎಂದು ಎಚ್ಚರಿಸಿದರು.
ಸಿಎಂ ಆಸ್ತಿಗಳ ಪಾಲಕರೋ, ಮಾಲೀಕರೋ?
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಮುಖ್ಯಮಂತ್ರಿ ರಾಜ್ಯದ ಆಸ್ತಿಪಾಸ್ತಿಗಳ ಪಾಲಕರೋ ಅಥವಾ ಮಾಲೀಕರೋ? ಜನರ ಆಸ್ತಿಗಳನ್ನು ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ಭೂ ಮಾಫಿಯಾದ ದೊರೆಗಳ ರೀತಿಯಲ್ಲಿ ಕಾಣುತ್ತಿದ್ದೀರಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯಾರಿಗೆ ಬೇಕಾದರೂ ಉಡುಗೊರೆ ನೀಡಬಹುದೆಂಬ ರೀತಿಯಲ್ಲಿ ಅಧಿನಿಯಮದಲ್ಲಿ ಅವಕಾಶ ಮಾಡಿಕೊಂಡಿದ್ದೀರಿ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಕೆಂಪೇಗೌಡರ ಕಾಲದಲ್ಲಿ ಸಾವಿರಾರು ಕೆರೆಗಳಿದ್ದವು. ಅವುಗಳನ್ನು ನುಂಗಿ ಹಾಕಲಾಗಿದೆ. ಇದೀಗ ಉದ್ಯಾನಗಳ ಮೇಲೂ ಕಣ್ಣು ಬಿದ್ದಿದೆ. ಇಂದಿರಾ ಕ್ಯಾಂಟೀನ್ ಮೂಲಕ ಪಾರ್ಕ್‌ಗಳಿಗೆ ಕಾಲಿಟ್ಟಿದ್ದಾರೆ. ಮುಂದೆ ಮುಖ್ಯಮಂತ್ರಿ ಈ ರಾಜ್ಯವನ್ನು ಮಾರಿಬಿಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.