ಸರಗೂರು ತಾಲೂಕಿನ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಟಾಟಾ ಪವರ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದರು. 
ಮೈಸೂರು

ವಿದ್ಯುತ್ ಖಾಸಗೀಕರಣಗೊಳಿಸುವುದಕ್ಕೆ ಆಕ್ಷೇಪ

ಸರಗೂರು: ವಿದ್ಯುತ್ ನಿಗಮಗಳ ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ರೈತ ಸಂಘದ ಅಧ್ಯಕ್ಷ ಸಿಂಗೇಗೌಡ, ವಿದ್ಯುತ್ ನಿಗಮ ಮತ್ತು ನೀರಾವರಿ ಯೋಜನೆಗಳನ್ನು ಖಾಸಗೀಕರಣ ಮಾಡುವುದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಆಸ್ತಿ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ವಿದ್ಯುತ್ ನಿಗಮಗಳನ್ನು ಖಾಸಗೀಕರಣಗೊಳಿಸುವುದರ ಮೂಲಕ ಸರ್ಕಾರ ರೈತರು ಮತ್ತು ಜನಸಾಮಾನ್ಯರಿಗೆ ತೊಂದರೆ ಕೊಡುತ್ತಿವೆ ಎಂದು ಆರೋಪಿಸಿದರು.
ಈಗಾಗಲೇ ರೈತರು ಸರ್ಕಾರದಿಂದ ಉಚಿತ ವಿದ್ಯುತ್ ಪಡೆದುಕೊಳ್ಳುತ್ತಿದ್ದು, ಖಾಸಗೀಕರಣದಿಂದಾಗಿ ಮುಂದಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ತೊಂದರೆ ಅನುಭವಿಸಲಿದ್ದಾರೆ. ರೈತ ಸಮುದಾಯಗಳ ಮೇಲೆ ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ. ಆದ್ದರಿಂದ ಸರ್ಕಾರ ಈ ಯೋಜನೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಕಾರ್ಯದರ್ಶಿ ಬರಗಿ ನಂದೀಶ್ವರ ಸ್ವಾಮಿ ಮಾತನಾಡಿ, ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆದ ತೊಗರಿಗೆ ಸಮರ್ಪಕ ಬೆಂಬಲ ಬೆಲೆ ಸಿಗದ ಕಾರಣ ಆರ್ಥಿಕವಾಗಿ ಕಂಗೆಟ್ಟಿದ್ದಾರೆ ಎಂದು ಆರೋಪಿಸಿದರು.
ಮುಂಗಾರು ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಸಲು ಹಣದ ಕೊರತೆಯಿಂದ ಪರದಾಡುತ್ತಿದ್ದಾರೆ. ಜಿಲ್ಲಾದ್ಯಂತ ರಸಗೊಬ್ಬರ ಕೊರತೆ ಕಂಡುಬರುತ್ತಿದ್ದು, ರೈತರು ಎಪಿಎಂಸಿ, ಟಿಎಪಿಸಿಎಂಎಸ್ ಹಾಗೂ ಸಹಕಾರ ಸಂಘಗಳ ಮುಂದೆ ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಉಪಾಧ್ಯಕ್ಷ ಗಣೇಶ್,ಯುವ ಘಟಕದ ಅಧ್ಯಕ್ಷ ಹಂಚೀಪುರ ನವೀನ್, ಪ್ರಧಾನ ಕಾರ್ಯದರ್ಶಿ ಹಳೇಹೆಗ್ಗುಡಿಲು ನವೀನ್, ಕಾರ್ಯಾಧ್ಯಕ್ಷ ಸತೀಶ್, ಖಂಜಾಚಿ ಕುಮಾರ್ ಗೌಡ, ರೈತ ಸಂಘದ ಸದಸ್ಯರು , ಘಟಕದ ಅಧ್ಯಕ್ಷ ಚಿಕ್ಕಬರಗಿ ನಾಗರಾಜು, ಗಂಗಾಧರಪ್ಪ, ನಂಜಪ್ಪ, ಬಸವರಾಜು, ನಿಂಗಣ್ಣ, ಸಿದ್ದರಾಜು, ಅಜೀತ್, ಶಿವರಾಜು, ಚಿಕ್ಕ ಲಿಂಗಯ್ಯ, ಬರಗಿ ಪ್ರಭು, ಇನ್ನೂ ಮುಖಂಡರು ಹಾಗೂ ರೈತ ಮಹಿಳಾ ಘಟಕದ ಸದಸ್ಯರು ಹಾಜರಿದ್ದರು.