ಪಾಲಿಕೆ ಆಡಳಿತಾಧಿಕಾರಿ ಭೇಟಿಯಾದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
- ಪಾಲಿಕೆ ಆಡಳಿತಾಧಿಕಾರಿ ಭೇಟಿಯಾದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ನಗರದ ಸಯ್ಯಜಿರಾವ್ ರಸ್ತೆ, ಚಿಕ್ಕ ಗಡಿಯಾರ ಹಾಗೂ ಒಲಿಂಪಿಯಾ ಟಾಕೀಸ್ ರಸ್ತೆ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಬೀದಿಬದಿ ವ್ಯಾಪಾರಿಗಳನ್ನು ನಗರ ಪಾಲಿಕೆ ಏಕಾಏಕಿ ತೆರವುಗೊಳಿಸುತ್ತಿರುವ ಕ್ರಮಕ್ಕೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ನಗರ ಪಾಲಿಕೆಯ ಆಡಳಿತಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ ಅವರು, ಬಡ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ತೆರವು ಕಾರ್ಯಾಚರಣೆ ಸರಿಯಲ್ಲ. ಮೊದಲು ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಣ್ಣ ಪ್ರಮಾಣದಲ್ಲಿ ತರಕಾರಿ, ಹಣ್ಣು ಹಾಗೂ ಬಟ್ಟೆ ವ್ಯಾಪಾರ ಮಾಡುವ ಬಡವರು ಪಾದಚಾರಿಗಳಿಗೆ ತೊಂದರೆಯಾಗದಂತೆ ದಿನದ ಕೆಲವೇ ಗಂಟೆ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹವರ ಮೇಲೆ ಏಕಾಏಕಿ ಕ್ರಮ ಕೈಗೊಳ್ಳುವುದು ಸರಿಯಲ್ಲ. ನಗರದಲ್ಲಿ ಬಲಾಢ್ಯರು ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡು ಕಟ್ಟಡ ನಿರ್ಮಿಸಿರುವುದನ್ನು ತೆರವುಗೊಳಿಸದೆ, ಬಡವರನ್ನು ಮಾತ್ರ ಗುರಿಯಾಗಿಸುತ್ತಿರುವುದು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
10 ಅಡಿ ಅಗಲದ ಫುಟ್‌ಪಾತ್‌ಗಳಲ್ಲಿ ಕನಿಷ್ಠ 4 ಅಡಿ ಜಾಗವನ್ನು ವ್ಯಾಪಾರಕ್ಕೆ ಬಳಸಲು ಅವಕಾಶ ಕಲ್ಪಿಸಬೇಕು. ಇಲ್ಲವೇ ಇತರ ನಗರಗಳ ಮಾದರಿಯಲ್ಲಿ ಸೂಕ್ತ ಪರ್ಯಾಯ ಸ್ಥಳ ಗುರುತಿಸಿ ವ್ಯಾಪಾರಿ ವಲಯ ನಿರ್ಮಿಸಿ ನೀಡಿದ ಬಳಿಕವೇ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಆಗ್ರಹಿಸಿದರು.
ನಗರದ ಹಲವು ಭಾಗಗಳಲ್ಲಿ ಫುಟ್‌ಪಾತ್‌ಗಳಲ್ಲೇ ಮರಗಳು, ಟ್ರಾನ್ಸ್‌ಫಾರ್ಮರ್‌ಗಳು, ಟೆಲಿಫೋನ್ ಬೂತ್‌ಗಳು ಹಾಗೂ ಪಾಲಿಕೆಯ ವಿವಿಧ ಕಾಮಗಾರಿಗಳು ಇರುವುದರಿಂದ ಪಾದಚಾರಿಗಳಿಗೆ ಸಮರ್ಪಕ ಜಾಗವಿಲ್ಲದಂತಾಗಿದೆ. ಹೀಗಿರುವಾಗ ಬಡ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವ ಮೊದಲು ಅವರಿಗೆ ಪರ್ಯಾಯ ಜೀವನೋಪಾಯದ ವ್ಯವಸ್ಥೆ ಕಲ್ಪಿಸುವುದು ಪಾಲಿಕೆಯ ಕರ್ತವ್ಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಜ್ಮಲ್ ಪಾಷ, ನಗರ ಕಾರ್ಯದರ್ಶಿ ಜುನಾಯಿದ್ ಹಾಗೂ ನಗರ ಉಪಾಧ್ಯಕ್ಷ ಹಲೀಂ ಇದ್ದರು.