ಹುಣಸೂರು ನಗರಠಾಣೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಗರವ್ಯಾಪ್ತಿಯ ಆಟೋ ಚಾಲಕರು ಮತ್ತು ಮಾಲೀಕರು ಭಾಗವಹಿಸಿದ್ದರು.
- ಆಟೋ ಚಾಲಕರಿಗೆ ಇನ್‌ಸ್ಪೆೆಕ್ಟರ್ ಶಿವಮಾದಯ್ಯ ಸೂಚನೆ
ಹುಣಸೂರು : ಆಟೋ ಚಾಲಕರು ಸಂಚಾರಿ ನಿಯಮ ಪಾಲನೆ ಕಡ್ಡಾಯವಾಗಿ ಮಾಡಬೇಕು. ಹಾಗೂ ಪ್ರಯಾಣಿಕರೊಂದಿಗೆ ಸೌಜನ್ಯಯುತ ವರ್ತನೆ ನಿಮ್ಮದಾಗಬೇಕೆಂದು ನಗರಠಾಣೆ ಇನ್‌ಸ್ಪೆೆಕ್ಟರ್ ಶಿವಮಾದಯ್ಯ ಸೂಚಿಸಿದರು.
ನಗರಠಾಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ಪಟ್ಟಣವ್ಯಾಪ್ತಿಯ ಆಟೋ ಚಾಲಕರು ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದರು.
ಆಟೋ ಚಾಲಕರನ್ನು ಸಮಾಜ ಗೌರವಯುತವಾಗಿ ನೋಡುತ್ತಿದೆ. ಆಟೋ ಪ್ರಯಾಣದ ವೇಳೆ ಪ್ರಯಾಣಿಕರು ಬಿಟ್ಟು ಹೋದ ಬೆಲೆಬಾಳುವ ವಸ್ತು, ಚಿನ್ನಾಭರಣಗಳನ್ನು ನಿಷ್ಠೆಯಿಂದ ಪೊಲೀಸರಿಗೊಪ್ಪಿಸಿ ಆ ಮೂಲಕ ಪ್ರಯಾಣಿಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಮಾಜ ನಿಮ್ಮಿಂದ ಇಂತಹ ಸೇವೆಯನ್ನು ಅಪೇಕ್ಷಿಸುತ್ತದೆ. ನೀವು ನಿಮ್ಮ ಕುಟುಂಬ ನಿರ್ವಹಣೆಗಾಗಿ ಈ ವೃತ್ತಿ ನಡೆಸುತ್ತಿದ್ದೀರಿ ನಿಜ. ವೃತ್ತಿಯೊಂದಿಗೆ ಸೇವಾ ಮನೋಭಾವವೂ ನಿಮ್ಮದಾಗಲಿ. ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸಿರಿ. ನಿಯಮ ಉಲ್ಲಂಘನೆಯಾದಲ್ಲಿ ಇಲಾಖೆ ಕೈಕಟ್ಟಿ ಕೂರುವುದಿಲ್ಲ. ಸಮವಸ್ತ್ರ ಧರಿಸುವುದು, ಪ್ರಯಾಣಿಕರೊಂದಿಗೆ ಸೌಜನ್ಯ ವರ್ತನೆ, ನಿಗದಿತ ದರ ಪಡೆಯುವುದು ಇವೇ ಮುಂತಾದ ವಿಷಯಗಳ ಬಗ್ಗೆ ಇನ್ನು ಮುಂದಿನ ದಿನಗಳಲಿ ದೂರುಗಳು ಬರಬಾರದು. ಇನ್ನೊಂದು ತಿಂಗಳೊಳಗೆ ನಿಮ್ಮ ವಾಹನದ ಸಮರ್ಪಕ ದಾಖಲೆಗಳನ್ನು ಹೊಂದುವತ್ತ ಕ್ರಮವಹಿಸಿರಿ ಎಂದು ಸೂಚಿಸಿದರು.
ಡಿವೈಎಸ್‌ಪಿ ರವಿ ಮಾತನಾಡಿ, ಸಂಚಾರಿ ನಿಯಮಗಳು ಕೇವಲ ಸಾರ್ವಜನಿಕರಿಗಾಗಿ ಮಾತ್ರವಲ್ಲ ನಿಮ್ಮ ಸುರಕ್ಷತೆಗಾಗಿಯೂ ಇದೆ. ನೀವು ಕರ್ತವ್ಯದಲ್ಲಿರುವ ವೇಳೆ ಮನೆಯಲ್ಲಿ ನಿಮ್ಮ ಕುಟುಂಬವೂ ನಿಮಗಾಗಿ ಕಾಯುತ್ತಿದೆ ಎನ್ನುವುದನ್ನು ಮರೆಯದೇ ಕರ್ತವ್ಯ ನಿರ್ವಹಿಸಿರೆಂದು ಕಿವಿಮಾತು ಹೇಳಿದರು.
ಪಿಎಸ್‌ಐ ತಾಜುದ್ದೀನ್ ಮಾತನಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಟೋ ಚಾಲಕರಿಂದ ಯಾವುದೇ ತೊಂದರೆಯಾಗದಂತೆ ನಡದುಕೊಳ್ಳಿರಿ. ಸಮಾಜದ ಮಧ್ಯೆ ಕೆಲಸ ಮಾಡುವ ನೀವು ಯಾವುದೇ ಅಪರಾಧ ಪ್ರಕರಣಗಳು ಕಂಡುಬಂದಲ್ಲಿ ಇಲಾಖೆಗ ಮಾಹಿತಿ ನೀಡುವ ಮೂಲಕ ಸೇವಾಕಾರ್ಯದಲ್ಲಿ ಪಾಲ್ಗೊಳ್ಳಿರೆಂದರು.
ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಮುಖಂಡರಾದ ಸನಾವುಲ್ಲ, ಶಂಕರ್, ಹಫೀಜ್, ಶರತ್‌ಕುಮಾರ್, ನಿಂಗರಾಜು, ಪ್ರಸನ್ನಕುಮಾರ್, ಅಬ್ದುಲ್ ಜಬ್ಬಾರ್, ಅಬ್ದುಲ್ ಸಲೀಮ್, ಪ್ರದೀಪ್, ಬಿ.ಸ್ವಾಮಿ, ವೀರೇಶ್, ಫಾರುಖ್ ಅಹಮದ್, ಮುನೀರ್ ಅಹಮದ್, ಚಾಂದ್ ಸೇರಿದಂತೆ ನಗರವ್ಯಾಪ್ತಿಯ ನೂರಕ್ಕೂ ಹೆಚ್ಚು ಆಟೋ ಚಾಲಕರು ಮತ್ತು ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು.