ಹುಣಸೂರು ನಗರದ ಬಿಜಿಎಸ್ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಟಿ.ಗೋವಿಂದಯ್ಯ ಉದ್ಘಾಟಿಸಿದರು. ನ್ಯಾಯಾಧೀಶೆ ನಮ್ರತಾ ಎಸ್.ಹೊಸಮಠ್, ಎಪಿಪಿ ಪಾರ್ವತಿ, ಎಸಿ ಕೆ.ವಿ.ಕಾವ್ಯರಾಣಿ, ಪ್ರಾಂಶುಪಾಲೆ ಕುಮುದಾ ಇತರರಿದ್ದಾರೆ. 
ಮೈಸೂರು

ಸುರಕ್ಷತೆಗಾಗಿ ಸಂಚಾರ ನಿಯಮ ಪಾಲನೆ ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯ
  • ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ
ಹುಣಸೂರು: ಕಾನೂನಿನಲ್ಲಿ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆನ್ನುವುದು ನಮ್ಮೆಲ್ಲರ ಸುರಕ್ಷತೆಗಾಗಿ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದು 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟರು.
ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ, ಹುಣಸೂರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಬಿಜಿಎಸ್ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಮಂಗಳವಾರ ಕಾಲೇಜಿನಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ವಾಹನ ಚಲಾಯಿಸಿ ಅನಾಹುತಗಳಾದಲ್ಲಿ ಅವರ ಪಾಲಕರು ಜೈಲಿಗೆ ಹೋಗುವ ಪರಿಸ್ಥಿತಿ ಇದೆ. 18 ವರ್ಷ ತುಂಬಿದ ನಂತರವಷ್ಟೇ ವಾಹನ ಚಾಲನೆಗೆ ಅರ್ಹರು. ಸಾರಿಗೆ ಇಲಾಖೆಯ ಮೂಲಕ ಚಾಲನ ಪರವಾನಗಿ, ವಾಹನ ಮಾಲೀಕತ್ವ ಮತ್ತು ವಿಮೆ ಪ್ರಮಾಣ ಪತ್ರಗಳನ್ನು ಹೊಂದಿದ್ದಲ್ಲಿ ಮಾತ್ರ ವಾಹನ ಚಾಲನೆ ಮಾಡಬೇಕು. ಸಂಚಾರಿ ನಿಯಮಗಳು ಎಲ್ಲರ ಸುರಕ್ಷತೆಗಾಗಿ ರೂಪಿತವಾಗಿದ್ದು, ನಿಯಮ ಪಾಲನೆ ನಮ್ಮ ಜವಾಬ್ದಾರಿಯಲ್ಲ ಎನ್ನುವ ಧೋರಣೆ ನಾವೆಲ್ಲರೂ ಬಿಡಬೇಕು. ಕಾನೂನು ಪಾಲನೆ ನಮ್ಮ ಆದ್ಯ ಕರ್ತವ್ಯ. ವಿದ್ಯಾರ್ಥಿಗಳು ಶಿಸ್ತು, ಕಾನೂನು ಪಾಲನೆ ಮತ್ತು ಕಾನೂನಿನ ಬಗ್ಗೆ ತಿಳಿದುಕೊಂಡು ದೇಶದ ಅಭಿವೃದ್ಧಿಗೆ ಪಣ ತೊಡಬೇಕು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್ ಪಾಷಾ ಸಂಚಾರ ನಿಯಮಗಳು, ಅವುಗಳ ಪಾಲನೆ, ವಾಹನಗಳ ಬಳಕೆ ಮುಂತಾದವುಗಳ ಕುರಿತು ಮಾಹಿತಿ ನೀಡಿದರು. ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮಾತನಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನಮ್ರತಾ ಎಸ್.ಹಿರೇಮಠ್, ಸಹಾಯಕ ಸರ್ಕಾರಿ ಅಭಿಯೋಜಕಿ ಎಚ್.ಡಿ.ಪಾರ್ವತಿ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಜೆ.ಸಂದೀಪ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಡಿ.ಎಂ.ಮಹೇಶ್, ಮೋಟಾರು ವಾಹನ ನಿರೀಕ್ಷಕ ಕೆ.ಜೆ.ತ್ಯಾಗರಾಜು, ವಕೀಲ ಎಚ್.ವಿ.ವೆಂಕಟೇಶ್, ಪ್ರಾಂಶುಪಾಲೆ ಕುಮುದಾ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.