ಡಾ.ಎ.ವಿ.ನರಸಿಂಹ ಮೂರ್ತಿ 
ಮೈಸೂರು

ನಾಣ್ಯಶಾಸ್ತ್ರ ಪರಿಣತ ಡಾ.ಎ.ವಿ.ನರಸಿಂಹ ಮೂರ್ತಿ ನಿಧನ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಫುಲ್ ಬ್ರೈಟ್ ಸ್ಕಾಲರ್ ಶಿಪ್ ಪಡೆದು ಸಂಶೋಧನೆ
  • ಆಂಧ್ರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ಪುರಾತತ್ವ ಇಲಾಖೆಯಲ್ಲಿ ಉದ್ಯೋಗ ಆರಂಭ

ಮೈಸೂರು: 

ನಾಣ್ಯಶಾಸ್ತ್ರದಲ್ಲಿ ಪರಿಣತರಾಗಿದ್ದ ಡಾ.ಎ.ವಿ.ನರಸಿಂಹ ಮೂರ್ತಿ(91) (ಅಲಂಬಡ ವೆಂಕಟಶಾಸ್ತ್ರಿನರಸಿಂಹ ಮೂರ್ತಿ) ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

 ಅವರಿಗೆ ಪತ್ನಿ, ಪುತ್ರ ನಗರದ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎ.ಎನ್. ಸಂತೋಷಕುಮಾರ್ ಹಾಗೂ ಪುತ್ರಿ ಡಾ.ಸವಿತಾ ಇದ್ದಾರೆ.  

ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಫುಲ್ ಬ್ರೈಟ್ ಸ್ಕಾಲರ್ ಶಿಪ್ ಪಡೆದು ಸಂಶೋಧನೆ ನಡೆಸಿದ್ದರು. ಆಂಧ್ರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ಪುರಾತತ್ವ ಇಲಾಖೆಯಲ್ಲಿ  ಉದ್ಯೋಗ ಆರಂಭಿಸಿದ್ದರು. 
ನಂತರ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಫೆಲೊ ಆಗಿ ಅವರನ್ನು ಮೈಸೂರು ವಿಶ್ವವಿದ್ಯಾಲಯ ಮುಂದುವರಿಸಿತು. ಯುಜಿಸಿಯ ಹಿರಿಯ ಎಮಿರೆಟ್ಸ್ ಆಗಿದ್ದ ಅವರ ಬಳಿ 48 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದಿದ್ದಾರೆ. 
ದಕ್ಷಿಣ ಭಾರತ ಮತ್ತು ಭಾರತದ ನಾಣ್ಯಶಾಸ್ತ್ರ ಮಂಡಳಿ ಅಧ್ಯಕ್ಷರಾಗಿದ್ದರು. ರಾಷ್ಟ್ರಕವಿ ಗೋವಿಂದ ಪೈ ಪುರಸ್ಕಾರ, ಎ.ಎಸ್.ಅಲಸ್ಕರ್ ಚಿನ್ನದ ಪದಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಪುರಾತತ್ವ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಬೆಂಗಳೂರಿನಲ್ಲಿ ನಡೆದ 3ನೇ ರಾಜ್ಯ ನಾಣ್ಯಶಾಸ್ತ್ರ ಸಮ್ಮೇಳನ ಹಾಗೂ ವಾರಣಾಸಿಯಲ್ಲಿ ನಡೆದ 70ನೇ ನಾಣ್ಯಶಾಸ್ತ್ರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರಿನ ಭಾರತೀಯ ವಿದ್ಯಾಭವನದ ಅಧ್ಯಕ್ಷರಾಗಿ 20 ವರ್ಷಕ್ಕೂ ಅಧಿಕ ಸೇವೆ ಸಲ್ಲಿಸಿದ್ದರು.
ಫೋಟೋ (ಆ.9, ಸ್ಕಾೃನ್-23)