ಸರ್ಕಾರಿ ಶಾಲೆ 
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ

ಪ್ರಮುಖ ಮುಖ್ಯಾಂಶಗಳು

  • ದಾಖಲಾತಿ ಹೆಚ್ಚಿಸಲು ಅನುಸರಿಸಬೇಕಾಗಿದೆ ಹಲವು ತಂತ್ರ
  • ಬಡವರ ಪಾಲಿನ ಜ್ಞಾನಕೇಂದ್ರಗಳಿಗೆ ಬೇಕಿದೆ ಬಲ
ಮೈಸೂರು: ಬಡವರ ಪಾಲಿನ ಜ್ಞಾನಕೇಂದ್ರವಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳಸಬೇಕಾಗಿರುವುದು ಈಗಿನ ತುರ್ತು ಅನಿವಾರ್ಯ, ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಂಖ್ಯೆ ಸುಧಾರಿಸುವುದರೊಂದಿಗೆ ಮೂಲ ಸೌಕರ್ಯವನ್ನೂ ಕಲ್ಪಿಸಿಕೊಡಬೇಕಿದೆ.
ಮೇ 29ರಿಂದ ಶಾಲೆಗಳು ಮರು ಪ್ರಾರಂಭವಾಗಲಿದೆ. ಮಕ್ಕಳ ದಾಖಲಾತಿ ಚುರುಕುಗೊಳಿಸಬೇಕಾಗಿದೆ. ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿರುವ ಮಕ್ಕಳನ್ನು ಸರ್ಕಾರಿ ಅಕ್ಷರದೇಗುಲಕ್ಕೆ ಕರೆದುಕೊಂಡು ಬರಬೇಕಿದೆ. ಇದು ನಿಜಕ್ಕೂ ಸವಾಲಿನ ಕೆಲಸವಾಗಿದೆ.
ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ಗ್ರಾಮಾಂತರ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲೇ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ಹಳ್ಳಿಗಳ ಮಕ್ಕಳು ಖಾಸಗಿ ಶಾಲೆಗಳಿಗೆ ಸೇರುತ್ತಿದ್ದು, ಇದು ಸರ್ಕಾರಿ ಶಾಲೆಗೆ ಹೊಡೆತ ಕೊಟ್ಟಿದೆ. ಪ್ರವೇಶಾತಿ ಕೊರತೆಯಿಂದ ಇವುಗಳನ್ನು ಮತ್ತೊಂದು ಶಾಲೆಯೊಂದಿಗೆ ವಿಲೀನಗೊಳಿಸುವ ಮತ್ತು ಮುಚ್ಚುವ ಕೆಲಸವನ್ನು ಸದ್ದಿಲ್ಲದೆ ಮಾಡಲಾಗುತ್ತಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ, ಎರಡು ಜತೆ ಸಮವಸ್ತ್ರ, ಶೂ-ಸಾಕ್ಸ್, ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಹಾಲು ವಿತರಿಸಲಾಗುತ್ತಿದೆ. ಇಷ್ಟಾದರೂ ಸರ್ಕಾರಿ ಶಾಲೆಗಳಿಗೆ ಮಕ್ಕಳು ಏಕೆ ಬರುತ್ತಿಲ್ಲ ಎಂಬದನ್ನು ಕುರಿತು ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆಗಳು ವಿಮರ್ಶೆ ಮಾಡಿಕೊಳ್ಳ್ಳಬೇಕಿದೆ.
 ಸಾಲ ಸೋಲ ಮಾಡಿ ತಮ್ಮ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‌ನಲ್ಲಿ ಓದಿಸಲು ಪಾಲಕರು ಒಲವು ತೋರುತ್ತಿದ್ದು, ಇಲ್ಲಿಗೆ ಸೇರಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ತಮ್ಮ ಮಕ್ಕಳನ್ನು ಓದಿಸುವುದು ಪ್ರತಿಷ್ಠೆ ಎನಿಸಿದೆ. ಈ ರೀತಿಯ ಹುಸಿ, ಭ್ರಮಾಲೋಕದಲ್ಲಿ ತೇಲುತ್ತಿರುವ ಪಾಲಕರು ಸಹ ವಾಸ್ತವ ಅರಿತುಕೊಳ್ಳಬೇಕಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ತ್ವರಿತವಾಗಿ ಕ್ರಮ ವಹಿಸಬೇಕಿದೆ. 
ಮೂಲ ಸೌಕರ್ಯ ಕಲ್ಪಿಸಿ, ಅಗತ್ಯ ಶಿಕ್ಷಕರನ್ನು ನೇಮಕ ಮಾಡಿ ಉತ್ತಮ ರೀತಿಯಲ್ಲಿ ಇವುಗಳನ್ನು ನಿರ್ವಹಿಸಬೇಕಿದೆ. ಖಾಸಗಿ ಸ್ಕೂಲ್‌ಗಳಿಗೆ ಸರಿ ಸಮಾನವಾಗಿ ಇವುಗಳನ್ನೂ ಉನ್ನತೀಕರಿಸಬೇಕು. ಎಲ್‌ಕೆಜಿ-ಯುಕೆಜಿ ಶುರು ಮಾಡಿ, ಆರಂಭದಿಂದಲೂ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಪರಿಣಾಮಕಾರಿ ಬೋಧಿಸಬೇಕು. ತಂತ್ರಜ್ಞಾನ, ಆಧುನಿಕ ಸವಲತ್ತುಗಳನ್ನೂ ಕಲ್ಪಿಸಬೇಕು. ಶಿಕ್ಷಕರು ಸಹ ಪ್ರಾಮಾಣಿಕವಾಗಿ, ಬದ್ಧತೆಯಿಂದ ಕೆಲಸ ಮಾಡಬೇಕು. ಹೀಗೆ ಮಾಡಿದರೆ ಸರ್ಕಾರಿ ಶಾಲೆಗಳು ಉಳಿಯಲಿವೆ. ಇಲ್ಲವಾದರೆ, ಕಷ್ಟಕರ...!
 ಈ ವಿಷಯದ ಕುರಿತು ಸಂಗ್ರಹಿಸಿರುವ ಜನಾಭಿಪ್ರಾಯ ಇಲ್ಲಿದೆ.
15ರ ನಂತರ ಸಭೆ ಆಯೋಜನೆ
ಕಳೆದ ವರ್ಷಕ್ಕಿಂತ ಹೆಚ್ಚು ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ. ಅದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ, ಮೇ 15ರ ನಂತರ ಶಾಲಾ ಮುಖ್ಯಸ್ಥರ, ಮೇ 20ರ ಬಳಿಕ ಪಾಲಕರ, ಎಸ್‌ಡಿಎಂಸಿ ಸಭೆ ನಡೆಸಲಾಗುತ್ತಿದೆ. 5-10ರ ವರ್ಷ ವಯಸ್ಸಿನ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರಲಾಗುತ್ತಿದೆ. 
 ಡಿ. ಉದಯ ಕುಮಾರ್
ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ

ಪಾಲಕರಿಂದ ದೊರಕುತ್ತಿಲ್ಲ ಸ್ಪಂದನೆ 

ಮಕ್ಕಳ ದಾಖಲಾತಿ ಹೆಚ್ಚಿಸಲು ಸರ್ಕಾರಿ ಶಾಲೆಗಳ ಶಿಕ್ಷಕರು ಪ್ರಯತ್ನಿಸುತ್ತಿದ್ದು, ಇದಕ್ಕೆ ಪಾಲಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಆದಾಗ್ಯೂ, ಛಲಬಿಡದೆ ಈ ನಿಟ್ಟಿನಲ್ಲಿ ಯತ್ನ ಮುಂದುವರಿದೆ. ಖಾಸಗಿ ಶಾಲೆಗಳ ವಾಹನಗಳು ಮನೆ ಬಳಿ ಹೋಗಿ ಮಕ್ಕಳನ್ನು ಕರೆದುಕೊಂಡು ಬರುತ್ತಿವೆ. ಅಂತೆಯೇ, ಸರ್ಕಾರಿ ಶಾಲೆಗಳಿಂದ ವಾಹನ ವ್ಯವಸ್ಥೆ ಮಾಡಬೇಕು. ಜತೆಗೆ, ಕರ್ನಾಟಕ ಪಬ್ಲಿಕ್ ಶಾಲೆ ಪರಿಕಲ್ಪನೆ ಉತ್ತಮವಾಗಿದೆ. ಇದೇ ಮಾದರಿಯಲ್ಲಿ ಎಲ್ಲ ಶಾಲೆಗಳಲ್ಲೂ ಎಲ್‌ಕೆಜಿಯಿಂದಲೇ ಆಂಗ್ಲ ಮಾಧ್ಯಮ ಪರಿಚಯಿಸಬೇಕು.
 ಜಿ.ರವಿ, ಅಧ್ಯಕ್ಷ
ರಾಜ್ಯ ಸರ್ಕಾರಿ ಶಾಲೆಗಳ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ

ಸಮರ್ಪಣಾ ಮನೋಭಾವ ಮುಖ್ಯ 

ಮಕ್ಕಳಲ್ಲಿ ಗುಣಮಟ್ಟದ ಕಲಿಕೆಯ ಬಗ್ಗೆ ಖಾತ್ರಿ ನೀಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಪರಿಹಾರ ಬೋಧನಾ ಕಲಿಕಾ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಖಾಸಗಿ ಶಾಲೆಗಳ ರೀತಿ ಆಕರ್ಷಣೀಯ ಗೊಳಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳ ಪಾಲಕರಲ್ಲಿ ಅವರ ಮಕ್ಕಳ ಕಲಿಕೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಶಾಲಾವಧಿಯಲ್ಲಿ ಕರ್ತವ್ಯ ನಿರ್ವಹಿಸಬೇಕು
 ಬಿ.ಎನ್.ಶಿವರಾಮೇಗೌಡ,
ನಿವೃತ್ತ ಬಿಇಒ

ಅಗತ್ಯ ಸೌಕರ್ಯ ಕಲ್ಪಿಸಿ

ಮೂಲಸೌಕರ್ಯಗಳೊಂದಿಗೆ ಅಗತ್ಯ ಶಿಕ್ಷಕರು, ಪ್ರಯೋಗಾಲಯ, ಕಂಪ್ಯೂಟರ್, ಅಗತ್ಯಾನುಸಾರ ಶೌಚಗೃಹ ಕಲ್ಪಿಸಿಕೊಡಬೇಕು. ಇದರಿಂದ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸುತ್ತಾರೆ. ಬಹುತೇಕ ಸರ್ಕಾರಿ ಶಾಲೆಗಳು ಈ ಪೂರಕ ವಾತಾವರಣವನ್ನು ಖಚಿತಪಡಿಸುವ ಮಟ್ಟದಲ್ಲಿಲ್ಲ ಎಂಬುದು ಕಳವಳಕಾರಿ ಸಂಗತಿ. ರಾಜ್ಯದ 21,000ಕ್ಕೂ ಅಧಿಕ ಸರ್ಕಾರಿ ಶಾಲೆಗಳ ಕಟ್ಟಡಗಳು ಒಂದಿಲ್ಲೊಂದು ದುರಸ್ತಿಗೆ ವರ್ಷಗಳಿಂದ ಕಾಯುತ್ತಿವೆ. 3,500ಕ್ಕೂ ಅಧಿಕ ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಗೃಹದ ವ್ಯವಸ್ಥೆಯಿಲ್ಲ. 1,000ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಅನೇಕ ಶಾಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ.

 ಸ್ವಾತಿ

ಉಪಾಧ್ಯಕ್ಷೆ, ಎಐಡಿಎಸ್‌ಒ

ಪಾಲಕರಿಗೆ ಅರಿವು ಮೂಡಿಸಿ

ಖಾಸಗಿ ಶಾಲೆಯವರು ಮನೆ ಮನೆ ಭೇಟಿ ನೀಡಿ ಪಾಲಕರ ಮನವೊಲಿಸುತ್ತಿದ್ದು, ಅಲ್ಲಿರುವ ಶೈಕ್ಷಣಿಕ ವಾತಾವರಣ, ಸೌಲಭ್ಯಗಳ ಕುರಿತು ತಿಳಿಸಿಕೊಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಸರ್ಕಾರಿ ಶಾಲೆಯವರು ಮನೆ ಮನೆಗಳಿಗೆ ಭೇಟಿ ನೀಡಿ ಪಾಲಕರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಪ್ರತಿಭಾವಂತಹ, ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ಪರಿಚಯದೊಂದಿಗೆ ಸೌಲಭ್ಯ, ಬೋಧನೆ ಕುರಿತು ತಿಳಿ ಹೇಳಿ ಮಕ್ಕಳು ಸರ್ಕಾರಿ ಶಾಲೆಯತ್ತ ಸೆಳೆಯುಬೇಕಿದೆ.
 ಎಚ್.ದಾಸ್
ಸ್ವಯಂ ಉದ್ಯೋಗಿ

ಸೇವಾ ಮನೋಭಾವ ಮುಖ್ಯ

ಚಟುವಟಿಕೆ ಆಧಾರಿತ ಕಲಿಕೆ ಸುಲಭ. ಜತೆಗೆ, ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತದೆ. ಶಿಕ್ಷಕರು ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಕಲಿಕೆಯಲ್ಲಿ ತೊಡಗಲು ಮಕ್ಕಳಿಗೆ ಸ್ಫೂರ್ತಿ ಬರುತ್ತದೆ. ಇದು ಮೊದಲು ಆಗಬೇಕು. ಕಟ್ಟಡ, ಮೂಲಸೌಕರ್ಯಗಳೆಲ್ಲ ನಂತರ ಬರುತ್ತದೆ. ಈ ಪರಿಕಲ್ಪನೆಗೆ ಮೊದಲ ಆದ್ಯತೆ ಕೊಡಬೇಕು. ಆದರೆ, ಉದ್ಯೋಗ ಭದ್ರತೆ, ಸಂಬಳದ ಖಾತ್ರಿ ಹೊಂದಿರುವ ಸರ್ಕಾರಿ ಶಾಲಾ ಶಿಕ್ಷಕರು ಈ ನಿಟ್ಟಿನಲ್ಲಿ ಪರಿಣಾಮಕಾರಿ, ಸೇವಾಮನೋಭಾವದಿಂದ ಕೆಲಸ ಮಾಡುತ್ತಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಸದಾ ವ್ಯಕ್ತವಾಗುತ್ತಿದೆ.
 ಡಾ.ಎಂ.ಸಿ.ಮನೋಹರ್
ಅರಿವು ಶಾಲೆ ವ್ಯವಸ್ಥಾಪಕ ಧರ್ಮದರ್ಶಿ

ತಾಂತ್ರಿಕ ಕೆಲಸಗಳಿಂದ ಮುಕ್ತಗೊಳಿಸಿ 

ಮಕ್ಕಳ ಕನಸಿಗೆ ರೆಕ್ಕೆಕಟ್ಟಬೇಕಾಗಿದ್ದ ಸರ್ಕಾರಿ ಶಾಲೆಗಳು ಮೂಲ ಸೌಕರ್ಯಗಳ ಕೊರತೆಯಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಅಗತ್ಯಕ್ಕೆ ಅನುಗುಣವಾಗಿ ವಿಷಯವಾರು ಶಿಕ್ಷಕರನ್ನು ನೇಮಕ ಮಾಡಬೇಕು. ಶಿಕ್ಷಕರನ್ನು ಬಿಸಿ ಊಟ ಹಾಗೂ ಇತರ ತಾಂತ್ರಿಕ ಕೆಲಸಗಳಿಂದ ಮುಕ್ತಗೊಳಿಸಬೇಕು. ಉತ್ತಮ ಶಿಕ್ಷಣ ಮತ್ತು ಸ್ವಚ್ಛ ವಾತಾವರಣವಿದ್ದರೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ. ಸರ್ಕಾರ ಖಾಸಗಿ ಶಾಲೆಗಳಿಗೆ ಕೊಡುವ ಅನುಮತಿ ನಿಲ್ಲಿಸಿ, ಬಜೆಟ್‌ನಲ್ಲಿ ಶಿಕ್ಷಣಕ್ಕೆ ಶೇ.15ರಿಂದ 20ರಷ್ಟು ಹಣ ಮೀಸಲಾಗಿಟ್ಟು ಅದನ್ನು ಸದುಪಯೋಗ ಪಡಿಸಿಕೊಂಡರೆ, ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ. 
 ಎಸ್.ವಿ. ನೀತುಶ್ರೀ
ವಿದ್ಯಾರ್ಥಿ ಮುಖಂಡರು

 ವಿಲೀನ ಪ್ರಕ್ರಿಯೆ ಕೈಬಿಡಿ 

ಗ್ರಾಮ ಪಂಚಾಯಿತಿಗೊಂದು ಸರ್ಕಾರಿ ಶಾಲೆ ಇರುವಂತೆ ನೋಡಿಕೊಳ್ಳಬೇಕು. ಶಾಲೆ ಮುಚ್ಚುವ, ವಿಲೀನ ಪ್ರಕ್ರಿಯೆ ಕೈಬಿಟ್ಟು ಶಾಲೆಗಳ ಬಲವರ್ಧನೆಗೆ ಕ್ರಮ ವಹಿಸಬೇಕು. ಸಾರ್ವತ್ರಿಕ ಕಲಿಕಾ ಮಾನದಂಡಗಳ ಪ್ರಕಾರ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಶಿಕ್ಷಕರ ಹುದ್ದೆಗಳನ್ನು ಕಾಯಂ ನೇಮಕಾತಿ ಆಧಾರದಲ್ಲಿ ಭರ್ತಿ ಮಾಡಿದಾಗ ಮಾತ್ರ ಗುಣಮಟ್ಟದ ಬೋಧನೆ ದೊರೆಯಲಿದೆ. ಪೂರಕ ಕಲಿಕಾ ವಾತಾವರಣವು ಗುಣಮಟ್ಟದ ಮತ್ತೊಂದು ನಿರ್ಣಾಯಕ ಅಂಶ. ಇಂತಹ ಸಂಗತಿಗಳನ್ನು ಖಾತ್ರಿ ಪಡಿಸಿದಾಗ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ.
 ವಿಶ್ವನಾಥ 
ಖಾಸಗಿ ಕಂಪನಿ ಉದ್ಯೋಗಿ