ಎನ್‌ಎಸ್‌ಎಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಪುನಶ್ಚೇತನ ಕಾರ್ಯಾಗಾರವನ್ನು ಗಣ್ಯರು ಸಾಮೂಹಿಕವಾಗಿ ಉದ್ಘಾಟಿಸಿದರು.
ಮೈಸೂರು: ಸಾಮಾಜಿಕ ಮತ್ತು ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ಬೆಳೆಸುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಸರಸ್ವತಿಪುರಂನಲ್ಲಿರುವ ಎನ್‌ಎಸ್‌ಎಸ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಬಿ.ಕೆ.ಶಿವಣ್ಣ ದತ್ತಿ ಉಪನ್ಯಾಸ, ರಾಜ್ಯಮಟ್ಟದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು.
ಎನ್‌ಎಸ್‌ಎಸ್ ಸಮುದಾಯದ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಅರ್ಥೈಸಿ ಅರಿವು ಮೂಡಿಸುತ್ತದೆ. ನಾಯಕತ್ವದ ಗುಣ, ಪ್ರಜಾಪ್ರಭುತ್ವದ ಮೌಲ್ಯ ಬೆಳೆಸುತ್ತದೆ.
ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ ಉತ್ತೇಜಿಸಿ, ಶ್ರಮದ ಮಹತ್ವವನ್ನೂ ತಿಳಿಸಿಕೊಡುತ್ತದೆ. ತುರ್ತು ಪರಿಸ್ಥಿತಿ ಎದುರಿಸಲು ಮತ್ತು ಸಮುದಾಯದ ಸೇವೆಗೆ ಸಿದ್ಧಗೊಳಿಸುತ್ತದೆ. ಆದರೆ, ಇಂತಹವೊಂದು ಸಂಘಟನೆಯನ್ನು ವಿಶ್ವವಿದ್ಯಾಲಯಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ಯತಾ ವಿಭಾಗವನ್ನಾಗಿಯೂ ಮಾಡಿಕೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ವಿವಿಧೆಡೆ ಹಲವಾರು ಕೈಗಾರಿಕೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಅದಕ್ಕೆ ತಕ್ಕ ಕೌಶಲ ಯುವಜನರಲ್ಲಿ ಇಲ್ಲ. ಅಲ್ಲಿ ಹೋಗಿ ಕೆಲಸ ಮಾಡಲು ಹೋಗುತ್ತಿಲ್ಲ ಎಂದರು.
ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ ಮಾತನಾಡಿದರು. ಚಾಮರಾಜನಗರದ ದೀನ ಬಂಧು ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ ಅವರು ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ ಕುರಿತು ಉಪನ್ಯಾಸ ನೀಡಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಎನ್‌ಎಸ್‌ಎಸ್ ನಿವೃತ್ತ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಪ್ರೊ.ಬಿ.ಕೆ.ಶಿವಣ್ಣ, ಪ್ರೊ.ಎಂ.ಬಿ.ಸುರೇಶ್ ಇನ್ನಿತರರಿದ್ದರು.