ಸರಗೂರು ತಾಲೂಕಿನ ಹುಸ್ಕೂರು ಹಾಡಿಯಲ್ಲಿ ನೂರಾಳೇಶ್ವರ ಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. 
ಮೈಸೂರು

ಹುಸ್ಕೂರು ಹಾಡಿಯಲ್ಲಿ ನೂರಾಳೇಶ್ವರಸ್ವಾಮಿ ಜಾತ್ರೆ ಸಂಭ್ರಮ

ಸರಗೂರು: ತಾಲೂಕಿನ ಹುಸ್ಕೂರು ಹಾಡಿಯಲ್ಲಿ ನೂರಾಳೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಕೊಂಡೋತ್ಸವ ಗುರುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುಳ್ಳೂರು ಹಾಗೂ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಹಾಡಿಯ ನುಗು ಜಲಾಶಯದ ಹಿನ್ನೀರಿನಲ್ಲಿರುವ ನೂರಾಳೇಶ್ವರಸ್ವಾಮಿ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು. ನುಗು ಜಲಾಶಯಕ್ಕೆ ದೇವರನ್ನು ಕೊಂಡೊಯ್ದು ಗಂಗಾಸ್ನಾನ ಮಾಡಿಸಿ ನಂತರ ದೇವಸ್ಥಾನದ ಬಳಿಗೆ ಮಂಗಳವಾದ್ಯದ ಮೂಲಕ ತರಲಾಯಿತು. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಸೇವೆ ಮಾಡಿದರು. ದೇವಸ್ಥಾನದ ಸುತ್ತ ದೇವರ ಮೂರ್ತಿಯನ್ನು ಮೆರವಣಿಗೆ ವಿವಿಧ ಕಲಾ ತಂಡಗಳು ಹಾಗೂ ಮಂಗಳವಾದ್ಯಗಳ ಮೂಲಕ ಮೆರವಣಿಗೆಗೆ ಮೆರುಗು ನೀಡಿದವು.
ದಾರಿಯುದ್ದಕ್ಕೂ ಭಕ್ತರು ದೇವರಿಗೆ ನಮಿಸಿ ಕತ್ತಿ ಹಿಡಿದು ಭಕ್ತಿಭಾವ ಮೆರೆದರು. ಮಕ್ಕಳು ಬೀಗ ಹಾಕಿ ಸೇವೆ ಮಾಡಿ ಹರಕೆ ತೀರಿಸಿದರು.ದೇವಸ್ಥಾನದ ಮುಂಭಾಗ ಹಾಕಲಾಗಿದ್ದ ಕೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೊಂಡೋತ್ಸವ ನಡೆಯಿತು. ನಂತರ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.
ಪ್ರತಿ ವರ್ಷ ಹಳೆಹೆಗ್ಗುಡಿಲು ಗ್ರಾಮಸ್ಥರು ಕೊಂಡೋತ್ಸವಕ್ಕೆ ಕಾಡಿನಿಂದ ಕಂಗಳಿ ಮರಗಳನ್ನು ತಂದು ಕೊಡಕ್ಕೆ ಪೂಜೆ ಸಲ್ಲಿಸುವುದು ವಿಶೇಷ. ಜತೆಗೆ ಬರುವ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡುತ್ತಾರೆ.
ಹೊಸ ಬಿರ್ವಾಳ್,ಹಳೆ ಹೇಗ್ಗುಡಿಲು, ಹುಸ್ಕೂರು ಹಾಡಿ, ದಡದಹಳ್ಳಿ, ಬೆದ್ದಲಪುರ, ಹಂಚೀಪುರ, ಸರಗೂರು, ಹಳಿಯೂರು, ಹಳೆಹೇಗ್ಗುಡಿಲು, ಗ್ರಾಮದ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.