ಯಾದವಗಿರಿಯ ರಾಮಕೃಷ್ಣ ಶಾಲೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಸಂತ ಸಮಾಗಮ ಸಮಾರಂಭದಲ್ಲಿ ಸ್ವಾಮಿ ಗುರುಶರಣಾನಂದಜೀ ಮಹಾರಾಜ್, ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ, ಸ್ವಾಮಿ ಅಚ್ಯುತೇಶಾನಂದಜಿ, ಗೌತಮಾನಂದಜೀ ಮಹಾರಾಜ್, ಸ್ವಾಮಿ ಮುಕ್ತಿದಾನಂದಜೀ ಪಾಲ್ಗೊಂಡಿದ್ದರು.
- ಸಂತ ಸಮಾಗಮ ಸಮಾರಂಭ
- ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವ
- ಧರ್ಮ ಬೇರೆ, ರಿಲಿಜನ್ ಬೇರೆ. ಇಂಗ್ಲಿಷ್‌ನ ‘ರಿಲಿಜನ್’ ಸಂಕುಚಿತ ಪದ.
- ಧರ್ಮವನ್ನು ಉಳಿಸುವುದು, ರಕ್ಷಿಸುವುದು ಬಹಳ ಮುಖ್ಯ.
ಮೈಸೂರು: ನಾವುಗಳು ಧರ್ಮ ರಕ್ಷಣೆ ಮಾಡಿದರೆ, ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಉತ್ತರಪ್ರದೇಶದ ಮಥುರಾದ ಶ್ರೀ ಉದಾಸೀನ್ ಕಾರ್ಷ್ಣಿ ಆಶ್ರಮದ ಪೀಠಾಧೀಶ ಸ್ವಾಮಿ ಗುರುಶರಣಾನಂದಜೀ ಮಹಾರಾಜ್ ಹೇಳಿದರು.
ಮೈಸೂರು ರಾಮಕೃಷ್ಣ ಆಶ್ರಮದ ಶತಮಾನೋತ್ಸವದ ಅಂಗವಾಗಿ ಯಾದವಗಿರಿಯ ರಾಮಕೃಷ್ಣ ಶಾಲೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ ಆಯೋಜಿಸಿದ್ದ ಸಂತ ಸಮಾಗಮ ಸಮಾರಂಭದಲ್ಲಿ ಮಾತನಾಡಿದರು.
ಧರ್ಮವನ್ನು ಉಳಿಸುವುದು ಮತ್ತು ರಕ್ಷಿಸುವುದು ಬಹಳ ಮುಖ್ಯ. ಇದು ಸಮಾಜದ ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು, ಪರಂಪರೆಯನ್ನು ಕಾಪಾಡುವುದೆಂದರ್ಥ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಲ್ಲ ಅಥವಾ ದ್ವೇಷ ಹರಡುವುದಲ್ಲ. ಬದಲಿಗೆ ಜನರ ಧಾರ್ಮಿಕ ಶ್ರದ್ಧೆಗಳನ್ನು ಗೌರವಿಸುವುದು. ಧರ್ಮವನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದಾಗಿದೆ ಎಂದರು.
ಅನ್ಯ ಧರ್ಮಗಳಂತೆ ಹಿಂದು ಧರ್ಮಕ್ಕಾಗಿ ನಿರ್ದಿಷ್ಟ ಧರ್ಮಗ್ರಂಥವೂ ಇಲ್ಲ. ಏಕದೇವರೂ ಸಹ ಇಲ್ಲ. ಇದು ಸತ್ಯ. ಇದುವೇ ಹಿಂದು ಧರ್ಮದ ವಿಶೇಷತೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಧರ್ಮ ನಮ್ಮದು. ದೇವರ ಅನಂತವೇ ಧರ್ಮದ ಅನಂತ. ಧರ್ಮ ಬೇರೆ, ರಿಲಿಜನ್ ಬೇರೆ. ಇಂಗ್ಲಿಷ್‌ನ ‘ರಿಲಿಜನ್’ ಸಂಕುಚಿತ ಪದ. ಇದು ಧರ್ಮ ಸರಿಯಾದ ಅನುವಾದ ಪದವಲ್ಲ. ಧರ್ಮಕ್ಕೆ ವಿಸ್ತಾರ- ವಿಶಾಲ-ಆಳವಾದ ಅರ್ಥ ಇದೆ. ಅದನ್ನು ರಿಲಿಜನ್ ಪದವೊಂದರಲ್ಲಿ ಕಟ್ಟಿಕೊಡಲಾಗದು ಎಂದರು.
ಧರ್ಮವನ್ನು ಅರ್ಥೈಸಿಕೊಳ್ಳಲು ಗುರುಬೇಕು. ಇಲ್ಲವಾದರೆ ಅನರ್ಥವಾಗುತ್ತದೆ. ಭಕ್ತಿ ಇಲ್ಲದೆ ಜ್ಞಾನವೂ ಪ್ರಾಪ್ತಿಯಾಗಲ್ಲ ಎಂದರು.
ಮನುಷ್ಯ ಮತ್ತು ಭಗವಂಗತನೊಂದಿಗೆ ಯಾವ ರೀತಿ ಸಂಬಂಧವನ್ನಾದರೂ ಹೊಂದಬಹುದು. ಆ ಅವಕಾಶವನ್ನು ದೇವರ ಮಾಡಿಕೊಟ್ಟಿದ್ದಾರೆ. ಮೋಕ್ಷ ಪಡೆಯಲು ಯಾವುದೋ ಹೊಸ ಮಾರ್ಗ ಕಂಡುಕೊಳ್ಳಲು ಒದ್ದಾಡಬೇಡಿ. ತಾಯಿ, ಮಗುವಿನ ನಡುವಿನ ಸಂಬಂಧವನ್ನೇ ದೇವರೆಡೆಗೆ ಪರಿವರ್ತಿಸಿ. ಆ ಪ್ರೀತಿಯೇ ಧರ್ಮ, ಭಕ್ತಿ ಎಂದರು.
‘ಮಾನವನ ದೈವೀಕರಣವೇ ಧರ್ಮದ ಉದ್ದೇಶ ಮತ್ತು ಶಕ್ತಿ’ ಕುರಿತು ಉಪನ್ಯಾಸ ನೀಡಿದ ಅವಧೂತದತ್ತಪೀಠದ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಅವರು, ರಾಜಕೀಯದಿಂದ ಧರ್ಮ ಮೇಲೆ ಕೆಲವೊಮ್ಮೆ ಪೆಟ್ಟು ಬಿದ್ದಿದೆ. ಇದುವೇ ಆಘಾತವನ್ನೂ ಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಸಂತರು, ಸ್ವಾಮೀಜಿಗಳು ಧರ್ಮ ಸಂರಕ್ಷಣೆ ಮಾಡಿದ್ದಾರೆ. ಮಠಗಳು, ಆಶ್ರಮಗಳು ಧರ್ಮ ಮಾರ್ಗವನ್ನು ಸಮಾಜಕ್ಕೆ, ಭಕ್ತರಿಗೆ ತೋರಿಸಿವೆ ಎಂದರು.
ಧರ್ಮವು ಬಹಳ ನಿಗೂಢ ಮತ್ತು ರಹಸ್ಯ. ಧರ್ಮವಿಲ್ಲದ ಸಮಾಜವನ್ನು ಊಹಿಸಲು ಕಷ್ಟಕರ. ಅದನ್ನು ಅರ್ಥ ಮಾಡಿಕೊಳ್ಳುವುದೇ ನಮ್ಮ ಸಾಧನೆ. ಧರ್ಮದಲ್ಲಿ ಎಲ್ಲವೂ ಪ್ರತಿಷ್ಠಾಪನೆಯಾಗಿದೆ. ವ್ಯಕ್ತಿಯ ಬೆಳವಣಿಗೆ ಹಾಗೂ ಸಮಷ್ಟಿಯ ಅಭಿವೃದ್ಧಿ ಎರಡೂ ಅಗತ್ಯ ಎಂದರು.
ಧರ್ಮವನ್ನು ಮರೆಯಬಾರದು. ಅದು ತಮಗೆ ಅಷ್ಟೇ ಮುಖ್ಯ. ಮಠಮಾನ್ಯಗಳು ಭಕ್ತರನ್ನು ದೈವ ರಥದಲ್ಲಿ ಹತ್ತಿಸುವ ಸಾರಥಿಗಳು. ಮಾನವ ದೈವೀಕರಣವೇ ಧರ್ಮ ಉದ್ದೇಶವಾಗಿದೆ ಎಂದರು.
ದಾನಧರ್ಮವೇ ಶ್ರೇಷ್ಠ ಧರ್ಮ. ಇದು ಅನ್ನ, ಶಿಕ್ಷಣ, ಜ್ಞಾನ ದಾನಧರ್ಮವನ್ನೇ ಒಳಗೊಂಡಿದೆ. ಇಂತಹ ಮಹತ್ಕಾರ್ಯ ರಾಮಕೃಷ್ಣ ಆಶ್ರಮಯದಲ್ಲಿ ನಡೆಯುತ್ತಿದೆ. ಅಲ್ಲದೆ, ಧರ್ಮ ಅನುಸರಿಸುವ ಸುಲಭ ಮಾರ್ಗವೆಂದರೆ ಕಷ್ಟದಲ್ಲಿರುವವರಿಗೆ ಅಗತ್ಯವಾದದ್ದನ್ನು ದಾನ ಮಾಡುವುದು. ಇಂತಹ ಅನೇಕ ಧರ್ಮ ಕಾರ್ಯಗಳನ್ನು ಮಾಡುವ ಮೂಲಕ ಮನುಷ್ಯ ರಥವನ್ನು ಹತ್ತಿರುವ ನಾವೆಲ್ಲರೂ ದೈವ ರಥವನ್ನು ಹತ್ತಬೇಕಿದೆ ಎಂದರು.
ನಮಸ್ಕಾರ-ಕೋರಿಕೆಯಷ್ಟೇ ಧರ್ಮವಲ್ಲ. ಇಷ್ಟಕ್ಕೆ ಸೀಮಿತವಲ್ಲ. ಅದು ಧರ್ಮಭಕ್ತಿ. ಇದು ಇಲ್ಲವಾದರೆ ಧರ್ಮ ಕೂಡ ವ್ಯಾಪಾರವಾಗುತ್ತದೆ. ಧರ್ಮದಲ್ಲಿ ಭಕ್ತಿಯೇ ಪ್ರಧಾನ. ನಾವು ಮಾಡುವ ಧರ್ಮ ನಮ್ಮನ್ನು ಕಾಪಾಡುತ್ತದೆ. ಅದುವೇ ಧೈವೀಕರಣ ಎಂದು ವ್ಯಾಖ್ಯಾನಿಸಿದರು.
ಮನುಷ್ಯನ ಸೇವೆಯಲ್ಲೇ ಧರ್ಮ ಮತ್ತು ಭಕ್ತಿ ಅಡಗಿದೆ. ಯಾವಾಗ ಈ ಸಮಾಜದಲ್ಲಿ ಧರ್ಮವು ಕಳೆಗುಂದುತ್ತದೆಯೋ ಆಗೆಲ್ಲ ಮಹಾನ್ ಚೇತನಗಳು ಅವತರಿಸಿ ಮನುಕುಲದ ಸೇವೆ ಮೂಲಕ ಧರ್ಮ ಜಾಗೃತಗೊಳಿಸಿದ್ದಾರೆ. ರಾಮಕೃಷ್ಣ ಪರಮಹಂಸರು ಅಂತಹ ಮಹಾನ್ ಸಂತ ಎಂದು ಸ್ಮರಿಸಿದರು.
ಅರುಣಾಚಲಪ್ರದೇಶದ ನರೋತ್ತಮನಗರದ ರಾಮಕೃಷ್ಣ ಮಿಷನ್, ರಾಮಕೃಷ್ಣಮಠದ ಕಾರ್ಯದರ್ಶಿ ಸ್ವಾಮಿ ಅಚ್ಯುತೇಶಾನಂದಜೀ ಮಾತನಾಡಿ, ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುತ್ತಿದೆ. ಹಲ್ಲೆ-ಕೊಲೆಗಳೂ ನಡೆದುಹೋಗುತ್ತಿವೆ.
ಆದರೆ, ಇದು ಧರ್ಮವಲ್ಲ. ಅಧರ್ಮ. ದೈಹಿಕ, ಮಾನಸಿಕ ತೊಂದರೆ ಕೊಡುವುದು, ಅಗೌರವ ತೋರುವುದು ಸಹ ಧರ್ಮವಲ್ಲ. ಯಾವುದೇ ಧರ್ಮವೂ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಎಲ್ಲರೂ ಸಹಬಾಳ್ವೆಯೊಂದಿಗೆ ಪ್ರೀತಿ-ವಿಶ್ವಾಸದಿಂದ ಬದುಕುಲು ಉದ್ದೀಪನಿಸುತ್ತದೆ ಎಂದರು.
ಕೋಲ್ಕತಾದ ರಾಮಕೃಷ್ಣ ಮಿಷನ್, ರಾಮಕೃಷ್ಣಮಠ, ಬೇಲೂರು ಮಠದ ಅಧ್ಯಕ್ಷ ಸ್ವಾಮಿ ಗೌತಮಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಪಾಲ್ಗೊಂಡಿದ್ದರು.
ಉಷಾಕೀರ್ತನೆ
ರಾಮಕೃಷ್ಣನಗರದ ಶ್ರೀರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಉಷಾಕೀರ್ತನೆ ನಡೆಯಿತು.
ಸ್ವಾಮಿ ರಘುರಾಮಾನಂದಜಿ, ಸ್ವಾಮಿ ಸರ್ವದರ್ಶನಾನಂದಜಿ ನೆರವೇರಿಸಿಕೊಟ್ಟರು. ಸ್ವಾಮೀಜಿ, ಭಕ್ತರ ಆಗಮನದ ಬಳಿಕ ವೇದಘೋಷ, ಶ್ರೀ ರಾಮಕೃಷ್ಣ ಮಂಗಳಾಶಾಸನ, ಭಜನೆ, ಆರತಿ, ಧ್ಯಾನ ನಡೆಯಿತು.
ಭಕ್ತಿಗಾಯನದೊಂದಿಗೆ ರಾಮಕೃಷ್ಣರ ಪ್ರತಿಮೆ ಸುತ್ತ ಪ್ರದಕ್ಷಿಣಾ ವಂದನೆ ಸಲ್ಲಿಸಿ ಜೈಕಾರ ಹಾಕಲಾಯಿತು.