ಸಚಿವ ಬಾಲಕೃಷ್ಣ 
ಮೈಸೂರು

ರಾಜಕಾರಣದಲ್ಲಿ ಯಾರೂ ಸತ್ಯ ಹರಿಶ್ಚಂದ್ರರಲ್ಲ, ಎಚ್‌ಡಿಕೆ ವಿರುದ್ಧ ಸಚಿವ ಬಾಲಕೃಷ್ಣ ವಾಗ್ದಾಳಿ

ಮೈಸೂರು: ಯಾರೂ ಸತ್ಯಹರಿಶ್ಚಂದ್ರರಲ್ಲ, ಅವರು ಏನು ಸಂಪಾದನೆ ಮಾಡಲಿಲ್ಲವೇ? ಅವರ ತಟ್ಟೆಯಲ್ಲೂ ಹೆಗ್ಗಣ ಬಿದ್ದಿಲ್ಲವೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡುವ ತೀರ್ಪು ಅಂತಿಮ, ಅದಕ್ಕೆ ನಾವೆಲ್ಲರು ತಲೆಬಾಗಬೇಕಾಗುತ್ತದೆ. ನಾವು ಸರಿ ಇಲ್ಲ ಅಂದರೆ ನಮ್ಮನ್ನು ಮನೆಗೆ ಕಳುಹಿಸುತ್ತಾರೆ, ಅವರು ಸರಿ ಇಲ್ಲ ಅಂದರೆ ಅವರನ್ನು ಮನೆಗೆ ಕಳುಹಿಸುತ್ತಾರೆ. ಇಂತಹ ಆರೋಪಗಳ ಕುರಿತು ಚರ್ಚೆ ಮಾಡುವ ಬದಲು ಅಭಿವೃದ್ಧಿಯ ಕುರಿತು ಚರ್ಚೆ ಮಾಡೋಣ. ಕುಮಾರಸ್ವಾಮಿ ಟೀಕೆ ಮಾಡುವುದನ್ನು ಬಿಟ್ಟು ಮಹದಾಯಿ, ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸಲಿ ಎಂದು ಆಗ್ರಹಿಸಿದರು.
ಬೃಹತ್ ಕೈಗಾರಿಕಾ ಸಚಿವರಾಗಿ ಕುಮಾರಸ್ವಾಮಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಿ ರಾಜ್ಯದ ಯುವಜನರಿಗೆ ಉದ್ಯೋಗ ನೀಡಲಿ. ಅದು ಬಿಟ್ಟು ಆರೋಪ ಮಾಡುವುದರಿಂದ ರಾಜ್ಯಕ್ಕೂ ಪ್ರಯೋಜನವಿಲ್ಲ, ನಿಮ್ಮ ಪಕ್ಷಕ್ಕೂ ಪ್ರಯೋಜವಿಲ್ಲ. ಎಲ್ಲರೂ ಗಾಜಿನ ಮನೆಯಲ್ಲಿ ಇದ್ದು, ಕಲ್ಲು ತೂರಿದರೆ ಎಲ್ಲರಿಗೂ ಹಾನಿಯಾಗುತ್ತದೆ. ಈಗ ಅಭಿವೃದ್ಧಿಯ ವಿಚಾರವಾಗಿ ಮಾತನಾಡುವ, ಚುನಾವಣೆ ಸಂದರ್ಭದಲ್ಲಿ ಬೇಕಿದ್ದಲ್ಲಿ ಇಂತಹ ಆರೋಪ ಮಾಡಲಿ. ಆಗ ಜನರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೂ ಕುಮಾರಸ್ವಾಮಿ ಈ ರೀತಿ ಅರೋಪ ಮಾಡಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ಕೆಪಿಎಸ್‌ಸಿ ಹಗರಣ ವಿಚಾರವಾಗಿ ತನಿಖೆ ನಡೆಯುತ್ತಿದ್ದು, ಉಪ್ಪು ತಿಂದವರು ನೀರು ಕುಡಿಯುತ್ತಾರೆ. ಆದರೆ, ಈ ವಿಚಾರವಾಗಿ ಅನಗತ್ಯ ಟೀಕೆ ಸರಿಯಲ್ಲ ಎಂದರು.
ಸಚಿವ ಬಸವರಾಜ ರಾಯರೆಡ್ಡಿ ಧರ್ಮದ ಕುರಿತು ನೀಡಿರುವ ಹೇಳಿಕೆ ವೈಯಕ್ತಿಕ, ಅದು ಪಕ್ಷದ ಅಭಿಪ್ರಾಯವಲ್ಲ. ಈ ವಿಚಾರವಾಗಿ ಅವರನ್ನೇ ನೀವು ಕೇಳಬೇಕು. ನಾವು ಎಲ್ಲ ಧರ್ಮವನ್ನು ಸಮಾನವಾಗಿ ಕಾಣುತ್ತೇವೆ. ನಾವು ಯಾವುದೇ ಧರ್ಮವನ್ನು ದೊಡ್ಡದ್ದು ಅಥವಾ ಸಣ್ಣದಾಗಿ ನೋಡುವುದಿಲ್ಲ ಎಂದು ಹೇಳಿದರು.
ಇ ಖಾತೆ ವಿಚಾರವಾಗಿ ಜನರಿಂದ ಅಧಿಕಾರಿಗಳು ಹಣ ಸುಲಿಯುತ್ತಿರುವ ಕುರಿತು ದೂರುಗಳು ಕೇಳಿ ಬರುತ್ತಿದ್ದು, ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಮನೆಗೆ ಕಳುಹಿಸುವ ಕಾರ್ಯ ಮಾಡುತ್ತೇನೆ. ಯಾವುದೇ ಅಧಿಕಾರಿಗಳು ಹಣಕೋಸ್ಕರ ಇ-ಖಾತೆ ನೀಡುವ ವಿಚಾರದಲ್ಲಿ ವಿಳಂಬ ತೋರಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದರು.