ಜಿಲ್ಲಾಧಿಕಾರಿ ಕಚೇರಿಯಲ್ಲಿ ವಡ್ನಾಳ್ ಜಗದೀಶ್ ಅಧ್ಯಕ್ಷತೆಯಲ್ಲಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಕುರಿತ ಸಭೆ ಆಯೋಜಿಸಲಾಗಿತ್ತು. ಆರ್. ಐಶ್ವರ್ಯ, ಡಾ. ಪ್ರೀತಮ್, ಪರಮೇಶ್ವರ್ ಇತರರು ಇದ್ದರು.
- ಲಭ್ಯವಿರುವ ಪರಿಸರವನ್ನಾದರೂ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ
- ಪ್ರತಿ ತಾಲೂಕುಮಟ್ಟದಲ್ಲಿ ಕಡ್ಡಾಯವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ (ಬಿಎಂಸಿ) ರಚನೆ ಮಾಡಬೇಕು
- ಸಮಿತಿಯ ಜವಾಬ್ದಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಬೇಕು
ಮೈಸೂರು:ಪ್ರಕೃತಿ ಮೇಲಿನ ನಮ್ಮ ಅಧಿಕಾರ ಮತ್ತು ಅಗತ್ಯಗಳ ಮಿತಿ ಅರಿತುಕೊಂಡು ಕಾರ್ಯನಿರ್ವಹಿಸಿದರೆ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಜೀವವೈವಿಧ್ಯ ನಿರ್ವಹಣಾ ಸಮಿತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಕೃತಿಯಲ್ಲಿನ ಸಸ್ಯ ಮತ್ತು ಪ್ರಾಣಿಗಳನ್ನು ನಾಶ ಮಾಡಲು ಯಾರಿಗೂ ಹಕ್ಕಿಲ್ಲ. ನಮ್ಮ ಪೂರ್ವಜರು ನಮಗಿಂತ ಅತ್ಯುತ್ತಮ ಮತ್ತು ಸ್ವಚ್ಛವಾದ ಪರಿಸರವನ್ನು ಅನುಭವಿಸಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ನಮಗೆ ಅಂತಹ ವಾತಾವರಣದ ಕೊರತೆ ಇದೆ. ಲಭ್ಯವಿರುವ ಪರಿಸರವನ್ನಾದರೂ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಪ್ರತಿ ತಾಲೂಕುಮಟ್ಟದಲ್ಲಿ ಕಡ್ಡಾಯವಾಗಿ ಜೀವವೈವಿಧ್ಯ ನಿರ್ವಹಣಾ ಸಮಿತಿ (ಬಿಎಂಸಿ) ರಚನೆ ಮಾಡಬೇಕು. ಈ ಸಮಿತಿಯ ಜವಾಬ್ದಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹೊರಬೇಕು. ಯಾವ ತಾಲೂಕುಗಳಲ್ಲಿ ಇನ್ನೂ ಸಮಿತಿ ರಚನೆಯಾಗಿಲ್ಲವೋ, ಅಲ್ಲಿನ ಇಒಗಳು ಇಂದಿನಿಂದಲೇ ಜವಾಬ್ದಾರಿ ತೆಗೆದುಕೊಂಡು ತಕ್ಷಣವೇ ಸಮಿತಿಯನ್ನು ರಚಿಸಬೇಕು. ನಿಯಮ ಪಾಲಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾಗುವ ಬಿಎಂಸಿಗಳಿಗೆ ಆಯಾ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರು ಇಲ್ಲದಿದ್ದರೆ, ಪ್ರಸ್ತುತ ಆಡಳಿತ ಅಧಿಕಾರಿಯೇ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಪಿಡಿಒಗಳು ಕಾರ್ಯದರ್ಶಿಯಾಗಿರುತ್ತಾರೆ ಎಂದು ವಿವರಿಸಿದರು.
ಸ್ಥಳೀಯ ಮಟ್ಟದಲ್ಲಿ ಪರಿಸರದ ಬಗ್ಗೆ ಕಾಳಜಿ ಇರುವವರು, ಆಯುರ್ವೇದ ಕ್ಷೇತ್ರದ ಪರಿಣಿತರು, ಅರಣ್ಯ ಅಧಿಕಾರಿಗಳು, ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಒಳಗೊಂಡಂತೆ ಒಟ್ಟು 9 ಜನರನ್ನು ಸ್ಥಳೀಯವಾಗಿ ಆಯ್ಕೆ ಮಾಡಿಕೊಳ್ಳಬೇಕು. ಇವರೊಂದಿಗೆ ಒಟ್ಟು 11 ಜನರ ಸಮಿತಿಯಲ್ಲಿ ಇರುತ್ತಾರೆ ಎಂದರು.
ಪ್ರಕೃತಿಯ ಅನೇಕ ಅಮೂಲ್ಯ ಸಂಪನ್ಮೂಲಗಳು ಈಗಾಗಲೇ ನಾಶವಾಗುತ್ತಿದ್ದು, ಅವುಗಳ ರಕ್ಷಣೆಗೆ ತಕ್ಷಣದ ಶ್ರಮ ಅಗತ್ಯವಿದೆ. ಕೇವಲ ಅಧಿಕಾರಿಗಳಷ್ಟೇ ಅಲ್ಲದೆ, ಪ್ರತಿಯೊಬ್ಬ ಸಾಮಾನ್ಯ ನಾಗರಿಕನೂ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕೆಂದು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ, ನಮ್ಮ ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ಜೀವವೈವಿಧ್ಯದ ಇತಿಹಾಸವು ಲಕ್ಷಾಂತರ ವರ್ಷಗಳಷ್ಟು ಪುರಾತನವಾಗಿದೆ. ಮನೆಮದ್ದುಗಳ ದೊಡ್ಡ ಜ್ಞಾನದ ಭಂಡಾರವೇ ಇದ್ದು, ಆ ಮದ್ದುಗಳ ವೈಜ್ಞಾನಿಕ ಹಿನ್ನೆಲೆ ನಮಗೆ ತಕ್ಷಣಕ್ಕೆ ತಿಳಿಯದಿದ್ದರೂ, ಅವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದವು ಎಂದರು.
ಮುಂದಿನ ದಿನಗಳಲ್ಲಿ ಆಂಟಿ-ಮೈಕ್ರೋಬಿಯಲ್ ರೆಸಿಸ್ಟೆನ್ಸ್ ಹೆಚ್ಚಾಗುತ್ತಿರುವಾಗ, ಈ ಜೀವವೈವಿಧ್ಯ ಸಂಪತ್ತು ನಮಗೆ ದಿಕ್ಸೂಚಿಯಾಗಿ ನಮ್ಮ ಕೈಹಿಡಿಯಲಿದೆ. ಇಂದಿನ ಪರಿಸರವನ್ನು ನಾವು ರಕ್ಷಿಸಿದರೆ, ಮುಂದಿನ ಪೀಳಿಗೆಗೆ ಅದನ್ನೊಂದು ದೊಡ್ಡ ಬಳುವಳಿಯಾಗಿ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಜೀವವೈವಿಧ್ಯ ಮಂಡಳಿಯ ಸಂಶೋಧಕ ಡಾ. ಪ್ರೀತಮ್ ಮಾತನಾಡಿ, ಜೀವವೈವಿಧ್ಯ ಸಂರಕ್ಷಣೆಗೆ ಎಲ್ಲಮಟ್ಟದಲ್ಲೂ ಕ್ರಮ ಕೈಗೊಳ್ಳಲು ಜನತಾ ಜೀವವೈವಿಧ್ಯ ದಾಖಲಾತಿ ಸಿದ್ಧಪಡಿಸುವುದು ಮಂಡಳಿಯ ಮುಖ್ಯ ಉದ್ದೇಶವಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಂಡುಬರುವ ಪ್ರಾಣಿಗಳು, ಪಕ್ಷಿಗಳು, ಗಿಡಮರಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳ ಸಂಪೂರ್ಣ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ ಎಂದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ವರ್, ಮೈಸೂರು ಜಿಲ್ಲೆಯ ಎಲ್ಲ ತಾಲೂಕಿನ ಯೋಜನಾ ಅಧಿಕಾರಿಗಳು ಇದ್ದರು.