ಕೆ.ಆರ್.ನಗರ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಕ್ಷೇತ್ರವಾರು ಮೀಸಲಾತಿ ಮಾತ್ರ ಪ್ರಕಟಗೊಂಡಿದ್ದು, ಚುನಾವಣೆ ದಿನಾಂಕ ನಿಗದಿಯಾಗಿಲ್ಲ. ಚುನಾವಣೆ ಪ್ರಕ್ರಿಯೆ ಆರಂಭಗೊಂಡ ನಂತರ ಆಕಾಂಕ್ಷಿಗಳಿಂದ ಅರ್ಜಿ ಪಡೆದು ಪಕ್ಷದ ಚುನಾವಣಾ ಸಮಿತಿಯಲ್ಲಿ ಚರ್ಚಿಸಿ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೇಟ್ ನೀಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಶಾಸಕರ ತೋಟದ ನಿವಾಸದಲ್ಲಿ ಶನಿವಾರ ಗಂಧನಹಳ್ಳಿ ಜಿಪಂ ಕ್ಷೇತ್ರದ ಆಕಾಂಕ್ಷಿ ಪ್ರೇಮಾ ಶಿವಣ್ಣ ಮತ್ತು ಬೆಂಬಲಿಗರ ಮನವಿ ಆಲಿಸಿ ನಂತರ ಮಾತನಾಡಿದ ಅವರು, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಎರಡು ಅವಳಿ ತಾಲೂಕುಗಳ 7 ಜಿಪಂ ಹಾಗೂ 22 ತಾಪಂ ಕ್ಷೇತ್ರದ ಯಾವ ಮುಖಂಡರಿಗೂ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಚುನಾವಣಾ ದಿನಾಂಕ ನಿಗದಿಯಾದ ನಂತರ ನಮ್ಮ ಪಕ್ಷದ ನಿಯಮದಂತೆ ಕೆಪಿಸಿಸಿ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ ಮಾಡಲು ಕೆಲವು ಮಾನದಂಡ ನಿಗದಿ ಮಾಡಲಿದೆ. ಅದರಂತೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಚುನಾವಣಾ ಸಮಿತಿ ಮಾಡಿಕೊಂಡು ಅರ್ಜಿ ಸ್ವೀಕರಿಸಲಿದ್ದಾರೆ. ಬಳಿಕ ಎಲ್ಲ ಆಕಾಂಕ್ಷಿಗಳ ಸಭೆ ನಡೆಸಿ ಒಮ್ಮತದಿಂದ ಒಬ್ಬರಿಗೆ ಟಿಕೇಟ್ ನೀಡಲಾಗುತ್ತದೆ. ಅಲ್ಲಿಯವರೆಗೆ ಆಕಾಂಕ್ಷಿಗಳು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.
ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬಾಗಿದ್ದು, ಮುಂದಿನ ಎಲ್ಲ ಚುನಾವಣೆಗಳಲ್ಲೂ ನಮ್ಮ ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಅಧಿಕಾರಕ್ಕೆ ತರುವ ಸಲುವಾಗಿ ನಾವು, ನೀವು ಎಲ್ಲರೂ ಸೇರಿ ಒಗ್ಗಟ್ಟಿನಿಂದ ದುಡಿಯೋಣ ಎಂದು ಹೇಳಿದರು.
ಎಂಸಿಡಿಸಿಸಿ ಅಧ್ಯಕ್ಷ ದೊಡ್ಡಸಾಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಆರ್.ಕೃಷ್ಣೇಗೌಡ, ನಿವೃತ್ತ ಲೆಕ್ಕ ಪರಿಶೋಧನ ಅಧಿಕಾರಿ ಜಿ.ಆರ್.ಶಿವಣ್ಣ ಮಾತನಾಡಿದರು.
ಗಂಧನಹಳ್ಳಿ ಮುಖಂಡರಾದ ನಾಗರಾಜು, ಜಿ.ಆರ್.ಜಯರಾಮೇಗೌಡ, ಪಿಟ್ಟೆರಾಜೇಗೌಡ, ಆನಂದ, ಜಿ.ಎಂ.ಲೋಹಿತ್, ಮಾರುತಿ, ಜಿ.ಪಿ.ಶಿವಣ್ಣ, ಜಿ.ಎನ್.ಮಂಜುನಾಥ್, ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ನಾರಾಯಣ, ನಿರ್ದೇಶಕ ಕೆಂಪೇಗೌಡ, ಅನಿಲ್ ಬಾಬು, ಜಯಕುಮಾರ್, ಜಲೇಂದ್ರ, ಬಡಕನಕೊಪ್ಪಲು ದೇವರಾಜು, ನಾಗರಾಜು, ಅಡಗೂರು ಕೆಂಪೇಗೌಡ, ಹರೀಶ್, ಒಂಟಿಮನೆ ಸುಬ್ಬೇಗೌಡ, ಗಂಧನಹಳ್ಳಿ ಕೊಪ್ಪಲು ಜಿ.ಜೆ.ಉಮೇಶ್, ಜಿ.ಜೆ.ದಿನೇಶ್, ಪ್ರಧೀಪ್, ದೊಡ್ಡಕೊಪ್ಪಲು ಮಹದೇವ್, ದಿಲೀಪ್ ಕುಮಾರ್, ಅಜಿತ್, ಮಂಚನಹಳಿ ್ಳಚಿಕ್ಕೇಗೌಡ, ದೊಣ್ಣಮಯ್ಯ, ಹಂಪಾಪುರ ಪುರಷೋತ್ತಮ ಇತರರು ಇದ್ದರು.