ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ
- ‘ಮೈಸೂರು ಸಾಹಿತ್ಯ ಸಂಭ್ರಮ’
- ಕನ್ನಡದ ಮೇಲೆ ಯಾವ ಭಾಷೆಯೂ ಪ್ರಭಾವ ಬೀರಲಾಗಲ್ಲ.
ಮೈಸೂರು: ಕನ್ನಡಕ್ಕೆ ಯಾವ ಭಾಷೆಯೂ ಶತ್ರುವಲ್ಲ. ಹಾಗೆಯೇ ಇಂಗ್ಲಿಷ್ ಸಹ. ಅದರೊಂದಿಗೆ ಸ್ನೇಹ ಮಾಡಿಕೊಂಡು ಜತೆಯಲ್ಲೇ ಸಾಗಬೇಕು ಎಂದು ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಹೇಳಿದರು.
2ನೇ ದಿನವಾದ ಭಾನುವಾರ ‘ಮೈಸೂರು ಸಾಹಿತ್ಯ ಸಂಭ್ರಮ’ ಸಮಾರಂಭದಲ್ಲಿ ‘ಪ್ರಸ್ತುತ ಯುವ ಸಮಾಜದ ಉನ್ನತೀಕರಣದಲ್ಲಿ ಭಾಷಾ ವಿಜ್ಞಾನ, ಸಂಶೋಧನೆ ಮತ್ತು ಸಾಹಿತ್ಯದ ಪಾತ್ರ’ ಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡದ ಮೇಲೆ ಯಾವ ಭಾಷೆಯೂ ಪ್ರಭಾವ ಬೀರಲಾಗಲ್ಲ. ಅದಕ್ಕೆ ತನ್ನದೇ ಸ್ವಂತ ಅಸ್ತಿತ್ವವಿದೆ. ಹೀಗಾಗಿ, ಯಾವ ಭಾಷೆಯೊಂದಿಗೆ ಶತ್ರುತ್ವವೂ ಅಗತ್ಯವಿಲ್ಲ. ಅವುಗಳೊಂದಿಗೆ ಮಿತ್ರತ್ವ ಇರಲಿ. ಸಂಸ್ಕೃತ ಭಾಷೆಯ ಅನೇಕ ಶಬ್ದಗಳು ಕನ್ನಡೀಕರಣಗೊಂಡಿವೆ.
ಅವುಗಳು ಕನ್ನಡ ಶಬ್ದಗಳಾಗಿಯೇ ಹೋಗಿವೆ. ಅಂತೆಯೇ ಇಂಗ್ಲಿಷ್ ಶಬ್ದಗಳು ಸಹ. ಹೀಗಾಗಿ, ಕನ್ನಡ ಭವಿಷ್ಯದ ಕುರಿತು ಆತಂಕ ಬೇಡ. ಕಾಲಕ್ಕೆ ತಕ್ಕಂತೆ ವಿವಿಧ ಭಾಷೆಗಳೊಂದಿಗೆ ಸ್ನೇಹಮಯವಾಗಿ ಒಟ್ಟಿಗೆ ಸಾಗುವುದಲ್ಲೇ ಒಳಿತಿದೆ ಎಂದು ಅಭಿಪ್ರಾಯಪಟ್ಟರು.
21ನೇ ಶತಮಾನ ಲೇಖಕಿಯರ ಶತಮಾನ. ಮಹಿಳೆಯರು ಗರಿಬಿಚ್ಚಿ ಮುಕ್ತವಾಗಿ ಬರೆಯುತ್ತಿದ್ದಾರೆ. ಕಾವ್ಯ, ಗದ್ಯ, ಕಾದಂಬರಿ, ಪ್ರವಾಸ ಕಥನ...ಹೀಗೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದಲ್ಲೂ ಅಕ್ಷರ ಕೃಷಿ ಮಾಡುವ ಮೂಲಕ ಗುರುತು ಮೂಡಿಸಿದ್ದು, ಯಾವುದೇ ಮುಜುಗರ, ಮುಲಾಜಿಲ್ಲದೆ ಸಾಹಿತ್ಯ ರಚಿಸಿ ಕನ್ನಡ ಸಾರಸ್ವತ ಲೋಕದಲ್ಲೇ ಮೊಹರು(ಮುದ್ರೆ) ಒತ್ತಿದ್ದಾರೆ ಎಂದು ಹೇಳಿದರು.
ವಿಜಯಾಂಬಿಕಾ ಕನ್ನಡದ ಮೊದಲ ಮಹಿಳಾ ಸಾಹಿತಿ. ಬಾದಾಮಿ ಚಾಲುಕ್ಯರ ಇಮ್ಮಡಿ ಪುಲಕೇಶಿ ಕಾಲದಲ್ಲಿ ಇವರು ಕವಿತೆಗಳನ್ನು ರಚಿಸಿದ್ದಾರೆ. ಇವರ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ. ಆದರೆ, ಅವರು ಬರೆದ ಕವಿತೆಗಳಿವೆ. ಅದು ಸಂಸ್ಕೃತ ಭಾಷೆಯಲ್ಲಿವೆ. 12ನೇ ಶತಮಾನದ ಶರಣ ಕಾಲದಲ್ಲೂ 32 ಲೇಖಕಿಯರಿದ್ದರು ಎಂಬುದು ವಿಶೇಷ ಎಂದು ತಿಳಿಸಿದರು.
ಡಾ.ಎಚ್.ಟಿ.ಶೈಲಜಾ ಸಂವಾದವನ್ನು ನಡೆಸಿಕೊಟ್ಟರು.