ಮೈಸೂರಿನ ಶ್ರೀ ಕೃಷ್ಣ ಮಿತ್ರ ಮಂಡಳಿ, ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಅವರನ್ನು ಗೌರವಿಸಲಾಯಿತು. ಶ್ರೀ ಕೃಷ್ಣ ಮಿತ್ರ ಮಂಡಳಿ, ಶ್ರೀ ಕೃಷ್ಣ ಟ್ರಸ್ಟ್ ಪದಾಧಿಕಾರಿಗಳಾದ ರವಿಶಾಸ್ತ್ರಿ, ಎನ್. ಗೋಪಾಲಕೃಷ್ಣನ್, ಪಿ.ಎಸ್. ಶೇಖರ್, ಶ್ರೀವತ್ಸ ರಾವ್ ಹಾಗೂ ಇತರರು ಇದ್ದರು.
ಮೈಸೂರು: ಮೋಕ್ಷದ ಮಾರ್ಗದಲ್ಲಿ ಒಂದು ಹೆಜ್ಜೆ ಮುಂದಿಡಲು ನಿಷ್ಕಾಮ ಕರ್ಮದಿಂದ ಮಾತ್ರ ಸಾಧ್ಯ ಎಂದು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳ ಅಭಿಪ್ರಾಯಪಟ್ಟರು.
ಶ್ರೀ ಕೃಷ್ಣ ಮಿತ್ರ ಮಂಡಳಿ, ಶ್ರೀ ಕೃಷ್ಣ ಟ್ರಸ್ಟ್ ವತಿಯಿಂದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಶ್ರೀ ಕೃಷ್ಣಮಿತ್ರ ಮಂಡಳಿಯ ಸುವರ್ಣ ಮಹೋತ್ಸವ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಆಶೀರ್ವಚನ ಕಾರ್ಯಕ್ರಮದಲ್ಲಿ ಮಾತನಾಡಿ, ವೈದಿಕ ಧರ್ಮ, ಸನಾತನ ಧರ್ಮ, ವೈಷ್ಣವ ಧರ್ಮ, ಭಾಗವತ ಧರ್ಮ ಮುಖ್ಯವಾಗಿ ಮೋಕ್ಷವನ್ನು ಗುರಿಯಾಗಿಟ್ಟುಕೊಂಡು ಹೊರಟಿವೆ. ಮೋಕ್ಷವೇ ನಮ್ಮೆಲ್ಲರ ಗುರಿ ಎಂದರು.
ನಿಷ್ಕಾಮವಾಗಿ ಏನೂ ಅಪೇಕ್ಷೆ ಇಲ್ಲದೆ ವಿಷ್ಣು ಪ್ರೀತಿಗಾಗಿ ದೇವರಿಗೆ ಕೈ ಮುಗಿದರೆ ಅದರಿಂದ ನಮಗೆ ಪುಣ್ಯ ಬಂದರೆ ಆ ಪುಣ್ಯದಿಂದ ಮೋಕ್ಷ ಮಾರ್ಗದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಂತೆ. ಆ ಪುಣ್ಯ ಮಾರ್ಗ ಅಳಿಸುವುದಿಲ್ಲ, ಅದು ಹಾಗೆಯೇ ಸ್ಥಿರವಾಗಿರುತ್ತದೆ. ಈ ಮಾರ್ಗವು ನಮಗೆ ಪರಮಾತ್ಮನ ಸಾಕ್ಷಾತ್ಕರ ಕೊಟ್ಟು ಮುಂದೆ ನಮ್ಮನ್ನು ಮೋಕ್ಷದ ಕಡೆಗೆ ಕರೆದೊಯ್ಯುತ್ತದೆ. ಹಾಗಾಗಿ ನಾವು ಕೆಲವು ಪುಣ್ಯಗಳನ್ನು ಗಳಿಸಿದರೆ ಸಾಲದು, ಕೋಟಿ ಕೋಟಿ ಪುಣ್ಯಗಳನ್ನು ಗಳಿಸಬೇಕು. ಹಾಗಾಗಿ ನಿಷ್ಕಾಮ ಮನಸ್ಸಿನಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಹೇಳಿದರು.
ನಮಗೆ ಎಲ್ಲ ಕಾರ್ಯವನ್ನು ನಿಷ್ಕಾಮದಿಂದ ಮಾಡಲು ಸಾಧ್ಯವಾಗದೆ ಇದ್ದರೂ ಕೆಲವಾದರೂ ನಿಷ್ಕಾಮ ಕರ್ಮಗಳನ್ನು ಮಾಡ ಬೇಕು. ಹೋಮ, ಹವನ, ಶಾಂತಿ, ಸತ್ಯನಾರಾಯಣ ಪೂಜೆ ಮಾಡುವಾಗ ನಿಷ್ಕಾಮ ಮನಸ್ಸಿಂದ ಮಾಡಬೇಕು. ದೇವರ ಪ್ರದಕ್ಷಿಣೆ, ಪೂಜೆ ಮಾಡುವ ಸಂದರ್ಭದಲ್ಲೂ ಮನದಲ್ಲಿ ನೂರೆಂಟು ಕಾಮನೆಗಳನ್ನು ತುಂಬಿಕೊಳ್ಳದೆ ನಿಷ್ಕಾಮ ಮನಸ್ಸಿನಿಂದ ಪೂಜೆ ಮಾಡಬೇಕು ಎಂದು ಸಲಹೆ ನೀಡಿದರು.
ನಿಜವಾದ ಶುದ್ಧವಾದ ವೈಷ್ಣವ ಧರ್ಮ ಅಂದರೆ ಏನನ್ನೂ ಬೇಡದೆ ಇರುವುದು. ವಿಷ್ಣುವಿನಲ್ಲಿ ಭಕ್ತಿ ಇಡಬೇಕು, ಅವನ ಉಪಾಸನೆ ಮಾಡಬೇಕು, ಅವನ ಪ್ರೀತಿಯೊಂದನ್ನು ಮಾತ್ರ ಬಯಸಬೇಕು. ನಾವು ಪರಮಾರ್ಥನಲ್ಲಿ ಸ್ವಾರ್ಥಕೋಸ್ಕರ ಏನನ್ನೂ ಬೇಡಬಾರದು. ಅವನಲ್ಲಿ ಜ್ಞಾನ, ಭಕ್ತಿ ಹಾಗೂ ವೈರಾಗ್ಯವನ್ನು ಬೇಡಬಹುದು. ಈ ಶುದ್ಧವಾದ ತತ್ವವನ್ನು ಜಗತ್ತಿಗೆ ತೋರಿಸಿಕೊಟ್ಟವರು ಭೀಮಸೇನ ದೇವರು. ಈ ತತ್ವವನ್ನು ತಿಳಿಯುವುದು ಮಾತ್ರವಲ್ಲದೆ ಸ್ವಲ್ಪ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.