ಹುಣಸೂರು ತಾಲೂಕು ಕಿರಿಜಾಜಿ ಗ್ರಾಮದಲ್ಲಿ ಫೀಲ್ಡ್ ಫ್ರೆಂಡ್ ತಂಡದ ಸದಸ್ಯರು ತಂಬಾಕು ಹೊಲಗಳಿಗೆ ಭೇಟಿ ನೀಡಿ ಸಸಿಗಳನ್ನು ಪರಿಶೀಲಿಸಿದರು. ಡಾ.ಎಸ್.ರಾಮಕೃಷ್ಣನ್, ಗೋಪಾಲ್, ಚೆನ್ನವೀರೇಶ್, ಮೀನಾ, ವಂಶಿ ಇತರರಿದ್ದರು. 
ಮೈಸೂರು

ತಂಬಾಕು ಬೆಳೆ ಪರಿಶೀಲಿಸಿದ ಎನ್‌ಐಆರ್‌ಸಿಎ ತಂಡ

ಹುಣಸೂರು:

ತಂಬಾಕು ಮಂಡಳಿ, ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರ(ಎನ್‌ಐಆರ್‌ಸಿಎ)ಮತ್ತು ಖರೀದಿದಾರರನ್ನು ಒಳಗೊಂಡ ಫೀಲ್ಡ್ ಫ್ರೆಂಡ್ ಟೀಮ್ ತಂಡದ ಅಧಿಕಾರಿಗಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರು ಬೆಳೆದಿರುವ ತಂಬಾಕು ಬೆಳೆಗಳ ಪರಿಶೀಲನೆ ನಡೆಸಿದರು.

ಗುರುವಾರ ತಾಲೂಕಿನ ಕಿರಿಜಾಜಿ, ಬನ್ನಿಕುಪ್ಪೆ ಸೇರಿದಂತೆ ಹಲವು ಗ್ರಾಮಗಳಲ್ಲಿ ತಂಬಾಕು ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಸಸಿಗಳ ಬೆಳವಣಿಗೆ ಕುರಿತು ರೈತರಿಂದ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಎನ್‌ಐಆರ್‌ಸಿಎ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್, ತಂಬಾಕು ಕೃಷಿಕರ ಸ್ನೇಹಿತರಾಗಿ ತಂಬಾಕು ಸಸಿಗಳ ಬೆಳವಣಿಗೆ, ಗುಣಮಟ್ಟ ಹೆಚ್ಚಿಸುವಿಕೆ ಮುಂತಾದ ವಿಷಯಗಳ ಕುರಿತು ರೈತರಿಗೆ ಮಾಹಿತಿ ಪಡೆದು ಸಲಹೆಗಳನ್ನು ನೀಡುವ ಕಾರ್ಯ ಮಾಡಲಾಗುತ್ತಿದೆ. ತಂಡದ ಮೊದಲ ಭೇಟಿ ಇದಾಗಿದ್ದು ಮುಂದಿನ 15 ದಿನಗಳ ನಂತರ ಮತ್ತೆ ಇದೇ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇವೆ ಎಂದರು.
ಉದ್ದೇಶವೇನು?:

ತಂಡ ರಚನೆ ಮತ್ತು ಭೇಟಿಯ ಮೂಲ ಉದ್ದೇಶ ಪ್ರಸ್ತುತದಲ್ಲಿ ತಂಬಾಕು ಸಸಿಗಳ ಬೆಳವಣಿಗೆ ಗಮನಿಸಲಿದ್ದೇವೆ. ಬರಗಾಲದ ಸ್ಥಿತಿಯಲ್ಲಿ ಎಲೆಗಳ ಕ್ಯೂರಿಂಗ್(ಹದಗೊಳಿಸುವ ಕಾರ್ಯ) ಹೇಗೆ ನಡೆದಿದೆ? ಗುಣಮಟ್ಟದ ಎಲೆಗಳು ಸಿಗುತ್ತಿವೆಯೇ? ಮೀಡಿಯಂ ಅಥವಾ ಉತ್ತಮ ಗುಣಮಟ್ಟದ ಎಲೆಗಳು ಸಿಗುತ್ತಿವೆಯೇ? ತಂಬಾಕು ಬೆಳೆದ ಭೂಮಿಯ ಅಕ್ಕಪಕ್ಕದಲ್ಲಿ ಜಮೀನುಗಳು ಬೀಳು ಬಿದ್ದಿವೆಯೇ ಮುಂತಾದ ಸಮಸ್ಯೆಗಳ ಕುರಿತು ಪರಿಶೀಲಿಸಿ ರೈತರಿಂದಲೂ ಮಾಹಿತಿ ಕಲೆಹಾಕುತ್ತೇವೆ ಎಂದು ಹೇಳಿದರು.

ಬಹುತೇಕ ರೈತರು ಮಧ್ಯಮ ಗುಣಮಟ್ಟದ ಎಲೆಗಳು ಸಿಗುತ್ತಿವೆ ಎನ್ನುತ್ತಿದ್ದಾರೆ. ಅಲ್ಲದೆ, ಕ್ಯೂರಿಂಗ್ ಆದ ಎಲೆಗಳಲ್ಲಿ ಹಸಿರು ಬಣ್ಣ ಕಾಣಿಸುತ್ತಿದೆ ಎಂಬ ದೂರುಗಳಿವೆ. ಹೆಚ್ಚಿನ ಪ್ರಮಾಣದಲ್ಲಿ ಮೀಡಿಯಂ ಗ್ರೇಡ್ ಎಲೆಗಳು ಸಿಗುತ್ತಿದ್ದರೆ ರೈತರು ಸಸಿಗಳಿಗೆ ಟೈಮಾಸ್ಪ್ರೇ ಕೆ. ಔಷಧ ಸಿಂಪಡಿಸಿದಲ್ಲಿ ಉತ್ತಮ ಗುಣಮಟ್ಟದ ಎಲೆಗಳನ್ನು ಪಡೆಯಲು ಸಾಧ್ಯವಿದೆ. ಅಲ್ಲದೆ, ಕ್ಯೂರಿಂಗ್ ಆದ ನಂತರ ಎಲೆಗಳಲ್ಲಿ ಹಸಿರುಬಣ್ಣ ಕಂಡುಬಂದರೆ ರೈತರು ಎಲೆಗಳ ಕಟಾವಿನ ದಿನಗಳ ಅಂತರವನ್ನು ಹೆಚ್ಚಿಸಿಕೊಂಡು ಕಟಾವು ಮಾಡಬೇಕಿದೆ. ಮುಂದಿನ ಭೇಟಿಯ ನಂತರ ತಂಬಾಕು ಬೆಳೆಯ ನಿಖರ ಪರಿಸ್ಥಿತಿ ಅಂದಾಜಿಸಲಿದ್ದೇವೆ ಎಂದರು.
ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್, ಐಟಿಸಿ ಕಂಪನಿಯ ವ್ಯವಸ್ಥಾಪಕ ಚನ್ನವೀರೇಶ, ಜಿಪಿಐ ಕಂಪನಿಯ ವ್ಯವಸ್ಥಾಪಕ ವಂಶಿ, ಹರಾಜು ಅಧೀಕ್ಷಕರಾದ ಸಿದ್ದರಾಜು, ಪ್ರಭಾಕರ್, ಮೀನಾ ಹಾಗೂ ರೈತರು ಹಾಜರಿದ್ದರು.