ಬೆಂಗಳೂರಿನಲ್ಲಿ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ರೈತಮುಖಂಡರು ಭೇಟಿಯಾಗಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೊಸೂರು ಕುಮಾರ್, ಧನಂಜಯ್, ಬೆಂಕಿಪುರ ಚಿಕ್ಕಣ್ಣ ಇತರರಿದ್ದಾರೆ.
ಹುಣಸೂರು: ಗ್ರಾಮೀಣ ಭಾಗಗಳಲ್ಲಿ ಆಸ್ತಿಯ ಇ-ಸ್ವತ್ತು ಪಡೆಯಲು ಸರ್ಕಾರ ರೂಪಿಸಿರುವ ಹೊಸ ನಿಯಮದಿಂದ ಬಡಜನರು ತೊಂದರೆಗೊಳಗಾಗಿದ್ದು, ಸರ್ಕಾರ ಮರುಪರಿಶೀಲಿಸಬೇಕು ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಒತ್ತಾಯಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಗಿದೆ. ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ನೀಡಲು ಹೊಸದಾಗಿ ಮಾಡಿರುವ ನಿಯಮದ ಪ್ರಕಾರ ನೋಂದಾಯಿತ ರಿಜಿಸ್ಟ್ರರ್ಡ್ ಪತ್ರಗಳನ್ನು ಹೊಂದಿರುವವರು ಮಾತ್ರ ಇ- ಸ್ವತ್ತು ಪಡೆಯಬಹುದಾಗಿದೆ. ಆದರೆ ಬಹುತೇಕ ಗ್ರಾಮಗಳು ಕಂದಾಯ ಗ್ರಾಮವಾಗದೆ ಸರ್ವೇ ನಂಬರ್ ಗ್ರಾಮಗಳಾಗಿರುತ್ತವೆ. ನೂರಾರು ವರ್ಷಗಳಿಂದ ಅನುಭವದಲ್ಲಿರುವವರಿಗೆ ಖಾತೆಯೂ ಸಹ ಆಗಿರುವುದಿಲ್ಲ. ಇದರಿಂದಾಗಿ ಕಳೆದ 4-5 ತಿಂಗಳುಗಳಿಂದ ಗ್ರಾಮೀಣ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಳ್ಳಲು ಹಾಗೂ ಬ್ಯಾಂಕ್ ಸಾಲ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಇ -ಸ್ವತ್ತು ದೊರಕದೆ ಇರುವ ಕಾರಣ ಬಡಜನರು ತೊಂದರೆಗೀಡಾಗಿರುತ್ತಾರೆ ಎಂದರು.
ಈ ಮೊದಲು ನೀಡಿರುವ ಡಿಮ್ಯಾಂಡ್‌ಗಳ ಮೂಲಕ ಕಂದಾಯವನ್ನು ಕಟ್ಟಿಸಿಕೊಳ್ಳುತ್ತಿದ್ದು, ಅದರಂತೆ ಇ - ಸ್ವತ್ತುಗಳನ್ನು ಮಾಡಿಕೊಡಬೇಕು ಮತ್ತು ಗ್ರಾಮಗಳಲ್ಲಿ ಗ್ರಾಮ ಠಾಣೆ ಜಾಗಗಳು ಇಲ್ಲದ ಕಾರಣ ಸರ್ವೇ ನಂಬರ್‌ಗಳಲ್ಲಿ ಜನರು ಮನೆಗಳನ್ನು ಕಟ್ಟುತ್ತಿದ್ದು ಗ್ರಾಮಾಡಳಿತ ಅಧಿಕಾರಿಗಳ ವರದಿಯ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಇ - ಸ್ವತ್ತುಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಒಂದು ವರ್ಷದಿಂದ 15ನೇ ಹಣಕಾಸು ಬರದೇ ಇರುವುದರಿಂದ ಗ್ರಾಮಗಳ ಸ್ವಚ್ಛತೆಯನ್ನು ಮಾಡಲು ಮತ್ತು ಬೀದಿ ದೀಪಗಳಿಗೆ ಹಣವನ್ನು ಹೊಂದಿಸಲಾಗದೆ ಗ್ರಾಮ ಪಂಚಾಯಿತಿಯ ಯಾವುದೇ ಕೆಲಸಗಳು ಆಗದೇ ಇರುವುದರಿಂದ ತಕ್ಷಣ 15ನೇ ಹಣಕಾಸು ಬಿಡುಗಡೆ ಮಾಡಬೇಕು ಮತ್ತು ಗ್ರಾಮಗಳಲ್ಲಿ ನರೇಗಾ ವತಿಯಿಂದ ಮಾಡಿರುವಂತಹ ಕೆಲಸಗಳಿಗೆ ಸಾಮಗ್ರಿಯ ವೆಚ್ಚವು ಇನ್ನೂ ಬಾಕಿ ಉಳಿದಿದ್ದು ಸಾಮಗ್ರಿ ವೆಚ್ಚವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಮನವಿಯನ್ನು ಸ್ವೀಕರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ್ದಾರೆ ಎಂದು ವಿಜಯವಾಣಿಗೆ ತಿಳಿಸಿದರು.
ಮನವಿ ಸಲ್ಲಿಕೆ ವೇಳೆ ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಧನಂಜಯ ಇತರರು ಇದ್ದರು.