ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರಿನ ಎಂಡೋಕ್ರೈನಾಲಜಿ ಮತ್ತು ಡಯಾಬಿಟಿಸ್ ರಿಸರ್ಚ್ ಟ್ರಸ್ಟ್‌ನ ಮುಖ್ಯಸ್ಥ ಡಾ.ಕೆ.ಎಂ.ಪ್ರಸನ್ನಕುಮಾರ್ ಉದ್ಘಾಟಿಸಿದರು.
- ಜೆಎಸ್‌ಎಸ್ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ
- ಮಕ್ಕಳಿಗೆ ಉಚಿತ ಔಷಧ ವಿತರಣೆ
ಮೈಸೂರು: ಭವಿಷ್ಯತ್ತಿನಲ್ಲಿ ಹಲವಾರು ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳಿಂದ ಮಧುಮೇಹವನ್ನು ಗುಣಪಡಿಸಬಹುದು ಎಂದು ಬೆಂಗ ಳೂರಿನ ಎಂಡೋಕ್ರೈನಾಲಜಿ ಮತ್ತು ಡಯಾಬಿಟಿಸ್ ರಿಸರ್ಚ್ ಟ್ರಸ್ಟ್‌ನ ಮುಖ್ಯಸ್ಥ ಡಾ.ಕೆ.ಎಂ.ಪ್ರಸನ್ನಕುಮಾರ್ ಹೇಳಿದರು.
ಜೆಎಸ್‌ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಮಧುಮೇಹ ಕಾಯಿಲೆ ಇರುವ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಉಚಿತ ಔಷಧ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಮಧುಮೇಹ ಬಂದರೆ 6 ತಿಂಗಳು ಮಾತ್ರ ಬದುಕಬಹುದಿತ್ತು. ಇಂದು ಹಲವಾರು ಸಂಶೋಧನೆಗಳ ಫಲವಾಗಿ ಇನ್ಸುಲಿನ್ ಹಾಗೂ ಮಾತ್ರೆಗಳಿಂದ 60 ವರ್ಷಕ್ಕಿಂತ ಹೆಚ್ಚು ಬದುಕಬಹುದು. ಮಧುಮೇಹ ಇರುವ ಮಕ್ಕಳಿಗೆ ಪಾಲಕರು ಸಮಯಕ್ಕೆ ಸರಿಯಾಗಿ ಔಷಧ ಮತ್ತು ಇನ್ಸುಲಿನ್ ನೀಡಬೇಕು. ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಅಕ್ಕಪಕ್ಕದವರಿಗೆ ತಮ್ಮ ಮಕ್ಕಳಿಗೆ ಸಕ್ಕರೆ ಕಾಯಿಲೆ ಇರುವುದನ್ನು ತಿಳಿಸಬೇಕು. ಸಾಮಾನ್ಯ ಮಕ್ಕಳಂತೆ ಅವರಿಗೂ ಕೂಡ ದೈಹಿಕ ವ್ಯಾಯಾಮ ಕ್ರಿಡೆಗಳಿಗೆ ಪ್ರೋತ್ಸಾಹ ನೀಡಬೇಕು. ಆರೋಗ್ಯದ ಜತೆಗೆ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಪಿ. ಮಧು ಮಾತನಾಡಿ, ಈ ಹಿಂದೆ ಮಧುಮೇಹ ಬಂದರೆ ಚಿಕಿತ್ಸೆಗೆ ಕಷ್ಟ ಇತ್ತು. ಈಗ ಉತ್ತಮ ಔಷಧಗಳ ಆವಿಷ್ಕಾರದಿಂದ ಇನ್ಸುಲಿನ್ ಲಭ್ಯತೆಯಿಂದ ಸಾಮಾನ್ಯರಂತೆ ಎಲ್ಲ ಕೆಲಸಗಳನ್ನು ಮಾಡುತ್ತ ಬದುಕಬಹುದು. ಮಕ್ಕಳಿಗೆ ಮಧುಮೇಹ ಬಂದರೆ ಪಾಲಕರು ದೃತಿಗೆಡದೆ ಅವರಿಗೆ ಚಿಕಿತ್ಸೆ, ದೈರ್ಯ ಮತ್ತು ಪ್ರೋತ್ಸಾಹ ಕೊಡಬೇಕು ಎಂದು ಸಲಹೆ ನೀಡಿದರು.
ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎಂ. ಮಾತಂಪ್ಪ ಮಾತನಾಡಿ, ಮನುಷ್ಯನಿಗೆ ಜೀವ ಇರುವವರೆಗೂ ಒಂದಲ್ಲ ಒಂದು ಕಾಯಿಲೆ ಬಂದೇ ಬರುತ್ತದೆ, ಅದಕ್ಕೆ ಚಿಂತೆಮಾಡಬಾರದು. ಕಾಯಿಲೆ ಬಂದಮೇಲೆ ಅದಕ್ಕೆ ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದರು.
ಮಕ್ಕಳಿಗೆ ಮಧುಮೇಹ ಕಾಣಿಸಿಕೊಂಡರೆ ಎಷ್ಟು ಪ್ರಮಾಣದಲ್ಲಿ ಇನ್ಸುಲಿನ್ ತೆಗೆದುಕೊಳ್ಳಬೇಕು? ಮಾತ್ರೆಗಳು ಹೆಚ್ಚಾದರೆ ಅಡ್ಡ ಪರಿಣಾಮಗಳೇನು? ಎಂದು ಚಿಂತಿಸದೆ ಮಧುಮೇಹ ನಿಯಂತ್ರಣದ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭ ಮಧುಮೇಹ ಹೊಂದಿರುವ ಮಕ್ಕಳಿಗೆ ಬೆಂಗಳೂರಿನ ಎಂಡೋಕ್ರೈನಾಲಜಿ ಮತ್ತು ಡಯಾಬಿಟಿಸ್ ರಿಸರ್ಚ್ ಟ್ರಸ್ಟ್ ವತಿಯಿಂದ ಡಯಾಬಿಟಿಸ್ ಔಷಧಳು ಮತ್ತು ಇನ್ಸುಲಿನ್‌ಗಳನ್ನು ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಂ.ಡಿ.ರವಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಸ್.ಎನ್. ಪ್ರಶಾಂತ್, ಡಾ.ರಶ್ಮಿ ಹಾಗೂ ಇತರರು ಪಾಲ್ಗೊಂಡಿದ್ದರು.