ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (ವಿವಿಸಿಇ) ವಿವಿಧ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳೊಂದಿಗೆ ಪ್ರೊ.ರವೀಂದ್ರ ಸಾರದಿ ವಡ್ಲಾಮುಡಿ, ಗುಂಡಪ್ಪ ಗೌಡ, ಬಿ. ಶಿವಲಿಂಗಪ್ಪ, ಪಿ. ವಿಶ್ವನಾಥ್, ಶ್ರೀಶೈಲ ರಾಮಣ್ಣವರ್ ಇನ್ನಿತರರಿದ್ದರು
- ಪ್ರೊ.ರವೀಂದ್ರ ಸಾರದಿ ವಡ್ಲಾಮುಡಿ ಅಭಿಮತ
- ಪದವಿ ಪ್ರದಾನ ಕಾರ್ಯಕ್ರಮ
ಮೈಸೂರು: ಕೃತಕ ಬುದ್ಧಿಮತ್ತೆ, ರೋಬಾಟಿಕ್ಸ್ ಮತ್ತು ಡಿಜಿಟಲ್ ರೂಪಾಂತರದಂತಹ ಕ್ಷೇತ್ರಗಳು ಉದ್ಯಮವನ್ನು ಮರುರೂಪಿಸುತ್ತಿದ್ದು, ವ್ಯವಸ್ಥಾಪನಾ ಹಾಗೂ ತಾಂತ್ರಿಕ ಪದವೀಧರರಿಗೆ ಹೊಸ ಅವಕಾಶ ತೆರೆದಿಡುತ್ತಿವೆ ಎಂದು ಆಂಧ್ರದ ಕಾಕಿನಾಡದಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್ ಕ್ಯಾಂಪಸ್ ಮುಖ್ಯಸ್ಥ ಪ್ರೊ.ರವೀಂದ್ರ ಸಾರದಿ ವಡ್ಲಾಮುಡಿ ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (ವಿವಿಸಿಇ) ಶನಿವಾರ ಆಯೋಜಿಸಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳ 2ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ತಾಂತ್ರಿಕ ಪ್ರಗತಿಗಳೊಂದಿಗೆ ಸವಾಲುಗಳೂ ಬರುತ್ತವೆ. ಆದ್ದರಿಂದ ಪದವೀಧರರು ಅವಕಾಶಗಳನ್ನು ಸಮತೋಲನದಿಂದ ಬಳಸುವ ವಿವೇಕವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಆತ್ಮನಿರ್ಭರ ಭಾರತದ ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಹೊಂದಿಸಿಕೊಳ್ಳಬೇಕು. ನವೀನತೆ, ಉದ್ಯಮಶೀಲತೆ ಮತ್ತು ಜವಾಬ್ದಾರಿಯುತ ನಾಯಕತ್ವವು ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಲ್ಲದು ಎಂದು ಅಭಿಪ್ರಾಯಪಟ್ಟರು.
ಕುತೂಹಲ, ಸಕಾರಾತ್ಮಕ ಮನೋಭಾವ ಮತ್ತು ಜೀವನ ಪರ್ಯಂತ ಕಲಿಕೆಯ ಮನೋಸ್ಥಿತಿ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ವೈಯಕ್ತಿಕ ಪ್ರಗತಿಗೆ ಮಾತ್ರವಲ್ಲದೆ, ಸಮಾಜದ ಸಮಸ್ಯೆ ಪರಿಹರಿಸಲು ಮತ್ತು ಸಮಾಜದ ಮೇಲೆ ಅರ್ಥಪೂರ್ಣ ಪ್ರಭಾವ ಬೀರುವಂತೆ ಬಳಸಬೇಕು ಎಂದು ಹೇಳಿದರು.
ಮಹತ್ವದ ಘಟ್ಟವಾಗಿದೆ:
ಪದವಿ ಪ್ರದಾನ ಸಮಾರಂಭವು ಕೇವಲ ಶೈಕ್ಷಣಿಕ ಸಾಧನೆಯ ಸಂಭ್ರಮವಲ್ಲ; ಅದು ವಿದ್ಯಾರ್ಥಿಗಳು ಕಲಿಕಾ ವಾತಾವರಣದಿಂದ ಸವಾಲುಗಳಿರುವ ನೈಜ ಜಗತ್ತಿಗೆ ಕಾಲಿಡುವ ಮಹತ್ವದ ಘಟ್ಟವಾಗಿದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ಮಾರ್ಗದರ್ಶನ ಮತ್ತು ಬೆಂಬಲ ಒದಗಿಸುತ್ತವೆ. ಆದರೆ ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವುದು ವ್ಯಕ್ತಿಯ ಸ್ವಯಂ ಪ್ರೇರಣೆ, ಪರಿಶ್ರಮ ಮತ್ತು ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಪ್ರಸ್ತುತ ಜಾಗತಿಕ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಭಾರತವು ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಪ್ರಬಲ ಸಂಗಮ ಅನುಭವಿಸುತ್ತಿದೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಉಪಾಧ್ಯಕ್ಷ ಬಿ. ಶಿವಲಿಂಗಪ್ಪ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣವರ್ ಮತ್ತು ಪರೀಕ್ಷಾ ನಿಯಂತ್ರಕ ಎಲ್.ಜೆ.ಸುದೇವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
126 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಪದವಿ ಪ್ರದಾನ ಸಮಾರಂಭದಲ್ಲಿ ಸಂಭ್ರಮ ಮೇಳೈಸಿತ್ತು. 126 ಅಭ್ಯರ್ಥಿಗಳು ತಮ್ಮ ಸ್ನಾತಕೋತ್ತರ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪದವಿ ಸ್ವೀಕರಿಸಿದರು. ಇವರಲ್ಲಿ 115 ವಿದ್ಯಾರ್ಥಿಗಳು ಎಂಬಿಎ, 11 ವಿದ್ಯಾರ್ಥಿಗಳು ಎಂ.ಟೆಕ್ ಪದವಿ ಪಡೆದರು.
ಎಂಬಿಎ ವಿಭಾಗದಲ್ಲಿ ಕಾವ್ಯ ಎನ್. ಪ್ರಥಮ ರ‌್ಯಾಂಕ್ ಗಳಿಸಿದರೆ, ಕೆ.ಎಂ.ಅನನ್ಯ ದ್ವಿತೀಯ, ಡಿ.ನಿಶ್ಮಿತಾ ತೃತೀಯ, ಜೆ. ಹೇಮಾದ್ರಿ 4ನೇ, ಜಿ.ಎನ್.ಹಂಸ 5ನೇ, ಎಂ.ಎಸ್.ಪ್ರಿಯದರ್ಶಿನಿ 6ನೇ, ಎಂ.ಆರ್.ಸ್ಮಿತಾ 7ನೇ, ವಿ.ಸ್ತವ್ಯಶ್ರೀ 8ನೇ, ಆರ್.ಪ್ರತಿಭಾ 9ನೇ ಹಾಗೂ ಸಿ.ಜೆ. ವಂದಿತಾ 10ನೇ ರ‌್ಯಾಂಕ್ ಪಡೆದರು. ಪ್ರಾಂಶುಪಾಲ ಬಿ. ಸದಾಶಿವ ಗೌಡ ಅವರು ಸಂಸ್ಥೆಯ ಸಾಧನೆಗಳ ವರದಿಯನ್ನು ಮಂಡಿಸಿದರು. ಉಪ ಪ್ರಾಂಶುಪಾಲೆ ಹಾಗೂ ಶೈಕ್ಷಣಿಕ ವಿಭಾಗದ ಡೀನ್ ಶೋಭಾ ಶಂಕರ್ ಅವರು ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.