ಸಿದ್ದನಕೊಪ್ಪಲು ಗ್ರಾಮದ ಕೃಷಿಕ ಮದನ್ ಕುಮಾರ್ ಅವರ ಜಮೀನಿನಲ್ಲಿ ಬೆಳೆದಿರುವ ಕೋಸು  
ಮೈಸೂರು

ಮಾದರಿ ಯುವ ಕೃಷಿಕ ಸಿದ್ದನ ಕೊಪ್ಪಲು ಮದನ್ ಕುಮಾರ್

ಎ. ಆರ್. ರಘುರಾಮ
ಎಂ.ಎಸ್.ರವಿಕುಮಾರ್ ಕೆ.ಆರ್.ನಗರ
ಗ್ರಾಮೀಣ ಪ್ರದೇಶದಲ್ಲೂ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಸುಖಮಯ ಜೀವನ ನಡೆಸಬಹುದು. ಇದು ಕೃಷಿಯಿಂದಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ತಾಲೂಕಿನ ಸಿದ್ದನ ಕೊಪ್ಪಲು ಗ್ರಾಮದ ಯುವ ಕೃಷಿಕ ಎಸ್.ಎಂ.ಮದನ್ ಕುಮಾರ್.
ಲಕ್ಷಾಂತರ ರೂಪಾಯಿ ಸಂಬಳ ಪಡೆದು ನಗರ ಪ್ರದೇಶದಲ್ಲೇ ವಾಸ ಮಾಡಬೇಕು, ಐಷಾರಾಮಿ ಜೀವನ ನಡೆಸಬೇಕು. ಎಂಬಿತ್ಯಾದಿ ಧೋರಣೆ ಹೊಂದಿದ ಯುವ ಜನರೇ ಹೆಚ್ಚಾಗಿರುವ ದಿನಮಾನಗಳಲ್ಲಿ ಮದನ್ ಕುಮಾರ್ ವಿಭಿನ್ನವಾಗಿ ಕಾಣುತ್ತಾರೆ. ಕೃಷಿ ನಂಬಿದವರಿಗೆ ಸುಖವೇ ಹಿಂಬಾಲಿಸುತ್ತದೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಆರೇಳು ವರ್ಷಗಳ ಹಿಂದೆ ಇಡೀ ಪ್ರಪಂಚವನ್ನೇ ಕಾಡಿದ್ದ ಕೋವಿಡ್-19 ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಹೊಡೆತ ನೀಡಿ ಪಾಠ ಕಲಿಸಿತು. ಅದರಲ್ಲಿ ಊರು ಬಿಟ್ಟು ಹೊರಗೆ ಜೀವನಕಟ್ಟಿಕೊಳ್ಳಬೇಕೆಂಬ ಆಸೆಯಿಂದ ತೆರಳಿದ್ದ ಮದನ್ ಕುಮಾರ್ ಕೂಡ ಒಬ್ಬರು.
ಪಿಯುಸಿ ಮುಗಿದ ಯುವಕ, ಕುಟುಂಬದಲ್ಲಿ ಸ್ವಲ್ಪ ಕಷ್ಟ ಇದ್ದ ಕಾರಣ ಬೆಂಗಳೂರಿನ ವಂಡರ್ ಲಾ ದಲ್ಲಿ ಉದ್ಯಾನ ಸಹಾಯಕರಾಗಿ 5 ವರ್ಷಗಳ ಕಾಲ ಕೆಲಸ ಮಾಡಿದ. ಕರೋನಾ ಸಂದರ್ಭದಲ್ಲಿ ಅನಿವಾರ್ಯವಾಗಿ ಕೆಲಸವನ್ನು ಬಿಡಬೇಕಾಯಿತು. ಸೀದಾ ಹುಟ್ಟೂರಿಗೆ ಮರಳಿದ ನಂತರ ಮೊದಲು ಕಂಡಿದ್ದು ಕೃಷಿ.
ಕುಟುಂಬದಲ್ಲಿ ತಾತ-ಮುತ್ತಾತರ ಕಾಲದಿಂದಲೂ ಕುಲ ಕಸುಬಾಗಿದ್ದ ಕೃಷಿಯಲ್ಲಿ ತೊಡಗಿಸಿಕೊಳ್ಳುವುದೇ ಸೂಕ್ತ ಮಾರ್ಗ ಎಂದು ಈತ ನಿರ್ಧರಿಸಿದ. ಜಮೀನಿಗೆ ಇಳಿದವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಶ್ರಮ ಜೀವನವನ್ನೇ ಉಸಿರಾಗಿ ಮಾಡಿಕೊಂಡು ಆ ಮಟ್ಟಿಗಿನ ಪ್ರಗತಿ ಕಂಡರು ಮದನ್ ಕುಮಾರ್. ನೀರಾವರಿ ಸಮಸ್ಯೆ ಇದ್ದ ಕಾರಣ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ತೆಗೆಸಿದರು. ಹನಿ ನೀರಾವರಿಯ ಮೂಲಕ ಕೃಷಿ ಮಾಡಲು ತೊಡಗಿಸಿಕೊಂಡರು. ಉತ್ತಮ ಬೆಳೆಗಳನ್ನು ಬೆಳೆದು ಲಕ್ಷಾಂತರ ರೂಪಾಯಿಗಳ ಆದಾಯ ಗಳಿಸಿದರು. ಒಟ್ಟಾರೆ ನಿರಂತರ 5 ವರ್ಷಗಳ ಶ್ರಮದಿಂದ ಇಂದು ಪ್ರಗತಿಪರ ರೈತರಾಗಿ ಹೊರಹೊಮ್ಮಿದ್ದಾರೆ ಎಂದರೆ ಯುವ ಸಮೂಹಕ್ಕೆ ಇದೊಂದು ಸಾಧನೆಯೇ ಸರಿ.
ತಂದೆ ಮುರಳಿಗೌಡರ ಹೆಸರಲ್ಲಿದ್ದ ಐದೂವರೆ ಎಕರೆ ಜಮೀನಿನಲ್ಲಿ ಎರಡು ಮುಕ್ಕಾಲು ಎಕರೆಗೆ ಕೊಳವೆಬಾವಿಯಿಂದ ನೀರಾವರಿ ಸೌಲಭ್ಯ ಮಾಡಿಕೊಂಡರು. ಉಳಿದ ಜಮೀನಿಗೆ ಚಾಮರಾಜ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯವನ್ನೂ ಪಡೆದುಕೊಂಡರು.
ತಂದೆಯವರ ಕಾಲದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನೇ ಬೆಳೆಯುತ್ತಿದ್ದರು. ಒಂದು ಹೆಜ್ಜೆ ಮುಂದೆ ಇಟ್ಟ ಮದನ್ ಕುಮಾರ್ ರೇಷ್ಮೆಕೃಷಿ ಆರಂಭಿಸಿದರು. ಜತೆಜತೆಗೆ ಮೆಣಸಿನಕಾಯಿ, ಟೊಮ್ಯಾಟೊ, ಬೀನ್ಸ್, ಕೋಸು ಮುಖ್ಯ ಬೆಳೆಗಳನ್ನಾಗಿ ಮಾಡಿಕೊಂಡರು. ರೇಷ್ಮೆಗೂಡನ್ನು ರಾಮನಗರ ಹಾಗೂ ಕೊಳ್ಳೇಗಾಲದ ಮುಡಿಗುಡಂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಆರಂಭಿಸಿದರು.
ಮದನ್ ಕುಮಾರ್ ಈ ರೀತಿ ಬೆಳೆದ ತರಕಾರಿಯನ್ನು ಹೆಬ್ಬಾಳು ಮಾರುಕಟ್ಟೆಗೆ ಒದಗಿಸುತ್ತಾರೆ. ತರಕಾರಿ ಮಾರಾಟದಿಂದಲೇ 2-3 ಲಕ್ಷ ರೂಪಾಯಿಗಳ ಆದಾಯ ಪಡೆಯುತ್ತಿದ್ದಾರೆ.
ಹೈನುಗಾರಿಕೆಯಿಂದಲೂ ಆದಾಯ
ಮದನ್ ಕುಮಾರ್ ಕೃಷಿ ಜತೆಗೆ ಹೈನುಗಾರಿಕೆಯನ್ನೂ ಉಪ ಕಸುಬಾಗಿ ಸ್ವೀಕಾರ ಮಾಡಿದ್ದಾರೆ. ಮೂರು ಹಸುಗಳು ಪ್ರತಿ ನಿತ್ಯ 40 ಲೀಟರ್‌ಗೂ ಹೆಚ್ಚು ಹಾಲನ್ನು ನೀಡುತ್ತಿವೆ. ಅದನ್ನು ಸ್ಥಳೀಯ ಡೇರಿಗೆ ಪೂರೈಸುತ್ತಾರೆ. ಜಮೀನಿನ ಉಳುಮೆಗಾಗಿ ನಾಟಿ ಎತ್ತುಗಳನ್ನು ಸಾಕಿಕೊಂಡಿದ್ದಾರೆ. ಸಂಪೂರ್ಣ ಉಳುಮೆ ಕಾರ್ಯವನ್ನು ಅವುಗಳಿಂದಲೇ ಮಾಡುತ್ತಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಕೆಲವೊಂದು ಸೌಲಭ್ಯಗಳನ್ನು ಪಡೆದುಕೊಂಡಿ ವ್ಯವಸಾಯಕ್ಕೆ ಪ್ರಮುಖವಾಗಿ ಹನಿ ನೀರಾವರಿಯನ್ನೇ ಅವಲಂಬಿಸಿರುವುದು ವಿಶೇಷ.
ಕುಟುಂಬದ ಸಹಕಾರ :
ಜಮೀನಿನಲ್ಲಿ ಸಿಲ್ವರ್, ಬೇವು ಸೇರಿ 150ಕ್ಕೂ ಹೆಚ್ಚು ಮರಗಳು ಸಮೃದ್ಧವಾಗಿ ಬೆಳೆದಿವೆ. ದುಡಿಮೆಯೆ ದುಡ್ಡಿನ ತಾಯಿ ಎಂಬ ನಾಣ್ನುಡಿಯಂತೆ ಬದುಕುತ್ತಿರುವ ಈ ಯುವಕ, ಜಮೀನಿನಲ್ಲಿ ಸಂಪೂರ್ಣ ಶ್ರಮ ವಹಿಸುವುದು ಗಮನಾರ್ಹವಾಗಿದೆ. ತಂದೆ, ತಾಯಿ, ಪತ್ನಿ ಕೃಷಿ ಕಾಯಕಕ್ಕೆ ಸಹಕಾರ ನೀಡುತ್ತಿದ್ದಾರೆ. ಸಾಧನೆಗೆ 2023ರಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ಕೆ.ಆರ್.ನಗರ ತಾಲೂಕುಮಟ್ಟದ ಅತ್ಯುತ್ತವ ಯುವ ರೈತ ಪ್ರಶಸ್ತಿ ದೊರೆತಿದೆ. ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನ, ಗೌರವ ನೀಡಿವೆ.
ಇತ್ತೀಚಿನ ದಿನಗಳಲ್ಲಿ ಕೃಷಿ ರಂಗದಲ್ಲಿ ಕಾರ್ಮಿಕರ ಕೊರತೆ ಇದೆ. ಕೆಲಸ ಮಾಡುವವರು ಸಿಕ್ಕರೂ ಹೆಚ್ಚು ಕೂಲಿ ಹಣ ನೀಡಬೇಕಾಗಿದೆ. ಹಾಗಾಗಿ ಪ್ರತಿ ಕುಟುಂಬದವರೂ ಕೃಷಿ ಕಾಯಕಕ್ಕೆ ಸಹಕಾರ ನೀಡಬೇಕು. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ವ್ಯವಸಾಯವನ್ನು ಪ್ರೀತಿಯಿಂದ ಮಾಡಿದರೆ ಎಂದಿಗೂ ಕಷ್ಟ ಎಂಬುದು ಹತ್ತಿರ ಬರುವುದಿಲ್ಲ. ಕೃಷಿಯಲ್ಲಿ ಬಹು ಬೆಳೆ ಪದ್ಧತಿ ಅಳವಡಿಸಿಕೊಂಡರೆ ನಷ್ಟ ಹತ್ತಿರ ಬರಲಾರದು. ರೈತರು ಯಾವುದಕ್ಕೂ ಧೃತಿಗೆಡದೆ ಧೈರ್ಯದಿಂದ ಮುನ್ನಡೆಯ ಬೇಕು.
ಎಸ್.ಎಂ.ಮದನ್ ಕುಮಾರ್
ಯುವ ಕೃಷಿಕ, ಸಿದ್ದನಕೊಪ್ಪಲು.
ಮದನ್ ಕುಮಾರ್ ಯುವಕರು ಹಾಗೂ ಕೃಷಿಕರಿಗೆ ಮಾದರಿಯಾಗಿದ್ದಾರೆ. ನಗರ ಜೀವನ, ಸರ್ಕಾರಿ ಉದ್ಯೋಗ ಇದ್ದರೆ ಮಾತ್ರ ಬದುಕು ಸಾರ್ಥಕ ಎಂದು ಹಲವರು ಭಾವಿಸಿದ್ದಾರೆ. ಆದರೆ ಕೃಷಿ ರಂಗದ ಸಾಧನೆಯಿಂದಲೂ ಗೌರವ ಬರುತ್ತದೆ ಎಂದು ಇವರು ತೋರಿಸಿ ಕೊಟ್ಟಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡುವ ಮೂಲಕ ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದಾರೆ. ಇಂಥವರ ಮಾರ್ಗದರ್ಶನ ಕೃಷಿ ರಂಗಕ್ಕೆ ಪ್ರೇರಕವಾಗಿದೆ.
ನಾಗೇಂದ್ರ,
ಮುಖಂಡ, ಸಿದ್ದನಕೊಪ್ಪಲು