ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಾಡಾ ಕಚೇರಿ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಮುಖಂಡ ಹೊಯ್ಸಳ ಸೇರಿದಂತೆ ಹಲವರು ಇದ್ದರು. 
ಮೈಸೂರು

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಗೆ ಖಂಡನೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳಿಂದ ಆಕ್ರೋಶ
  • ಕೇಂದ್ರ ಸರ್ಕಾರದ ವೈಫಲ್ಯ ಕಾರಣವೆಂದು ಆರೋಪ
  • ಸಂಸದ ಯದವೀರ್ ಕಚೇರಿಯತ್ತ ನುಗ್ಗಲು ಯತ್ನ
ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಗರದಲ್ಲಿ ಬುಧವಾರ ಪ್ರತ್ಯೇಕ ಎರಡು ಪ್ರತಿಭಟನೆಗಳು ನಡೆದವು. ನೀಟ್ ಪರೀಕ್ಷೆ ನಡೆಯುವ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಆಗಲು ಕೇಂದ್ರ ಸರ್ಕಾರದ ವೈಫಲ್ಯ ಕಾರಣವೆಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾಡಾ ಕಚೇರಿ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಚೇರಿಯತ್ತ ನುಗ್ಗಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡ ಇಟ್ಟು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ದಾರಿಯಲ್ಲೇ ಕುಳಿತು ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು. ಯುವ ಕಾಂಗ್ರೆಸ್ ಮುಖಂಡ ಹೊಯ್ಸಳ ಸೇರಿದಂತೆ ಹಲವರು ಇದ್ದರು.

ಎನ್‌ಟಿಎ ಸಂಸ್ಥೆಯನ್ನು ವಜಾಗೊಳಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾಗಿರುವವರಿಗೆ ಶಿಕ್ಷೆ ವಿಧಿಸಿ, ಎನ್‌ಟಿಎ ರದ್ದುಗೊಳಿಸುವಂತೆ ಆಗ್ರಹಿಸಿ ಎಸ್‌ಐಡಿಎಸ್‌ಒ ವತಿಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾರ್ಯದರ್ಶಿ ನಿತಿನ್ ಮಾತನಾಡಿ, ಪದೇ ಪದೆ ಮರುಕಳಿಸುತ್ತಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಒಂದು ಪರೀಕ್ಷಾ ಸಂಸ್ಥೆಯ ವೈಫಲ್ಯವಲ್ಲ, ಇದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಬೆವರು ಮತ್ತು ಕನಸುಗಳ ಮೇಲೆ ಎಸಗುತ್ತಿರುವ ಘೋರ ದೌರ್ಜನ್ಯ. ಕೇವಲ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ, ವೈದ್ಯಕೀಯ ಶಿಕ್ಷಣದ ಕನಸು ಹೊತ್ತವರ ಆಶೋತ್ತರಗಳನ್ನು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜು ಹಾಕಲಾಗಿದೆ ಎಂದು ಕಿಡಿಕಾರಿದರು.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕೋಚಿಂಗ್ ಮಾಫಿಯಾದ ಕೈಗೊಂಬೆಯಂತೆ ವರ್ತಿಸುತ್ತಿರುವುದು ಇಡೀ ವ್ಯವಸ್ಥೆಯ ಹದಗೆಟ್ಟ ಸ್ಥಿತಿ ತೋರಿಸುತ್ತಿದೆ. ಈ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮತ್ತು ಹತಾಶೆ ಮೂಡಿಸಿದೆ. ಕೇವಲ ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಎನ್‌ಟಿಎ ಸಂಸ್ಥೆಯನ್ನು ತಕ್ಷಣವೇ ವಜಾಗೊಳಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ಪ್ರವೇಶ ಪರೀಕ್ಷಾ ಪದ್ಧತಿಯನ್ನು ಆಮೂಲಾಗ್ರವಾಗಿ ಬದಲಿಸಿ, ಅದು ಸಾಮಾನ್ಯರಿಗೂ ಲಭ್ಯವಿರುವಂತೆ ಪಾರದರ್ಶಕವಾಗಿ, ಖಾಸಗಿ ವಾಣಿಜ್ಯ ಹಿತಾಸಕ್ತಿಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸ್ವಾತಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.